Advertisement
ಶ್ರೀಲಂಕಾ ಸೋಲಿಗೆ ಕಾರಣಗಳು ಹಲವು. ಮುಖ್ಯವಾದುದು ಸಂಗಕ್ಕರ, ಜಯವರ್ಧನ ನಿವೃತ್ತಿ ಬಳಿಕ ಸಮರ್ಥ ತಂಡವೊಂದನ್ನು ಕಟ್ಟದಿದ್ದುದು; ಹಾಗೆಯೇ ಮುರಳೀಧರನ್, ಜಯಸೂರ್ಯ, ವಾಸ್ ಅವರಂಥ ವಿಶ್ವ ದರ್ಜೆಯ ಕ್ರಿಕೆಟಿಗರಿಗೆ ಪರ್ಯಾಯ ಆಟಗಾರರನ್ನು ರೂಪಿಸದಿದ್ದುದು. ಈಗಿನ ಸಾಮಾನ್ಯ ಆಟಗಾರರ ಆಸ್ಥಿರ ಪ್ರದರ್ಶನ, ಲಂಕಾ ಕ್ರಿಕೆಟ್ ಮಂಡಳಿಯ ರಾಜಕೀಯ, ಮಾಜಿಗಳ ಅತಿರೇಕದ ಹೇಳಿಕೆಗಳು… ಎಲ್ಲವೂ ಲಂಕಾ ಸೋಲಿನಲ್ಲಿ ತನ್ನ ಪಾತ್ರ ವಹಿಸಿದೆ.
ಈ ನಡುವೆ ಇನ್ನೊಂದು ಆತಂಕಕಾರಿ ಅಂಕಿಅಂಶ ಬಯಲಾಗಿದೆ. ಶ್ರೀಲಂಕಾ ಆಟಗಾರರ ಕಳಪೆ ಕ್ಷೇತ್ರರಕ್ಷಣೆಯೂ ತಂಡವನ್ನು ಸೋಲಿಗೆ ಸುಳಿಗೆ ತಳ್ಳಿದೆ. ಈ ವರ್ಷದ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳೂ ಸೇರಿದಂತೆ ಶ್ರೀಲಂಕಾದ 26 ಆಟಗಾರರು ಒಟ್ಟು 65 ಕ್ಯಾಚ್‌ಗಳನ್ನು ನೆಲಕ್ಕೆ ಹಾಕಿದ್ದಾರೆ!ಲಂಕೆಯ ಅತ್ಯಂತ ಕಳಪೆ ಕ್ಷೇತ್ರರಕ್ಷಣೆ ಕಂಡುಬಂದದ್ದು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ಥಾನ ವಿರುದ್ಧದ ಪಂದ್ಯದಲ್ಲಿ. ಅಲ್ಲಿ ಸಿಕ್ಕುಗೆ ಪ್ರಸನ್ನ ಮತ್ತು ತಿಸರ ಪೆರೆರ ಸೇರಿಕೊಂಡು ಮಾಲಿಂಗ ಎಸೆತಗಳಲ್ಲಿ 3 ಕ್ಯಾಚ್ ಬಿಟ್ಟಿದ್ದರು. ಇದರಿಂದ ಲಂಕಾ ಕೂಟದಿಂದಲೇ ಹೊರಬೀಳಬೇಕಾಯಿತು. ಕ್ಯಾಚ್ ಬಿಡುವ ವೇಳೆ ಲಂಕಾ ಆಟಗಾರರು ಗಾಯಾಳಾಗಿ ತಂಡದಿಂದಲೇ ಹೊರಬಿದ್ದುದಕ್ಕೆ ಭಾರತದೆದುರಿನ ಟೆಸ್ಟ್ ಸರಣಿ ಉತ್ತಮ ನಿದರ್ಶನ ಒದಗಿಸುತ್ತದೆ. ಅಸೇಲ ಗುಣರತ್ನೆ, ದನುಷ್ಕ ಗುಣತಿಲಕ ಅವರೆಲ್ಲ ಪಂದ್ಯದ ನಡುವೆಯೇ ಹೊರಗುಳಿಯಬೇಕಾಯಿತು. ಲಂಕಾ ಹತ್ತೇ ಮಂದಿ ಆಟಗಾರೊಂದಿಗೆ ಆಡಿ ಸೋಲನ್ನು ಹೊತ್ತುಕೊಂಡಿತು.
ಈ ವರ್ಷ ಅತ್ಯಧಿಕ ಕ್ಯಾಚ್ ಬಿಟ್ಟ ಶ್ರೀಲಂಕಾ ಆಟಗಾರರ ಯಾದಿ ಹೀಗಿದೆ: ದಿನೇಶ್ ಚಂಡಿಮಾಲ್ (5), ಉಪುಲ್ ತರಂಗ (5), ದಿಲ್ಶನ್ ಮುನವೀರ (4), ನಿರೋಷನ್ ಡಿಕ್ವೆಲ್ಲ (4), ಅಸೇಲ ಗುಣರತ್ನೆ (4), ಲಸಿತ ಮಾಲಿಂಗ (4) ಮತ್ತು ದನುಷ್ಕ ಗುಣತಿಲಕ (4).
Related Articles
* ಭಾರತ 11ನೇ ಸಲ ಏಕದಿನ ಸರಣಿಯಲ್ಲಿ ಎದುರಾಳಿಗೆ ವೈಟ್‌ವಾಶ್ ಮಾಡಿತು. ಭಾರತ 5 ಪಂದ್ಯಗಳ ಸರಣಿಯನ್ನು ವೈಟ್‌ವಾಶ್ ಮಾಡಿದ 6ನೇ ದೃಷ್ಟಾಂತ ಇದಾಗಿದೆ.
* ಭಾರತ ಒಟ್ಟು 3 ಸಲ, 5 ಪಂದ್ಯಗಳ ಸರಣಿಯಲ್ಲಿ 2ನೇ ಸಲ ಶ್ರೀಲಂಕಾಕ್ಕೆ ವೈಟ್‌ವಾಶ್ ಮಾಡಿತು. ಇದಕ್ಕೂ ಮುನ್ನ ಭಾರತ ತಂಡ ಶ್ರೀಲಂಕಾಕ್ಕೆ 1982-83ರಲ್ಲಿ 3-0, 2014-15ರಲ್ಲಿ 5-0 ಸೋಲುಣಿಸಿತ್ತು. ಇವೆರಡೂ ಭಾರತದ ತವರಿನ ಸರಣಿಗಳಾಗಿದ್ದವು.
* ಶ್ರೀಲಂಕಾ ಮೊದಲ ಬಾರಿಗೆ ತವರಿನಲ್ಲಿ ವೈಟ್‌ವಾಶ್ ಸಂಕಟಕ್ಕೆ ಸಿಲುಕಿತು. ಇದು 5 ಅಥವಾ ಹೆಚ್ಚಿನ ಪಂದ್ಯಗಳ ಸರಣಿಯಲ್ಲಿ ಲಂಕಾ ಅನುಭವಿಸಿದ 3ನೇ ವೈಟ್‌ವಾಶ್; ಈ ವರ್ಷದ 2ನೇ ವೈಟ್‌ವಾಶ್.
* ಏಕದಿನದಲ್ಲಿ 100 ಸ್ಟಂಪಿಂಗ್ ನಡೆಸಿದ ಮೊದಲ ಕೀಪರ್ ಎನಿಸಿದ ಧೋನಿ, 468 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 161 ಸ್ಟಂಪಿಂಗ್ ಮಾಡಿದ್ದಾರೆ. ಇದೊಂದು ವಿಶ್ವದಾಖಲೆ. 139 ಸ್ಟಂಪಿಂಗ್ ಮಾಡಿದ ಕುಮಾರ ಸಂಗಕ್ಕರ ದ್ವಿತೀಯ ಸ್ಥಾನದಲ್ಲಿದ್ದಾರೆ.
* ವಿರಾಟ್ ಕೊಹ್ಲಿ 30 ಶತಕ ಬಾರಿಸಿ ರಿಕಿ ಪಾಂಟಿಂಗ್ ಅವರೊಂದಿಗೆ ಜಂಟಿ 2ನೇ ಸ್ಥಾನ ಅಲಂಕರಿಸಿದರು. 49 ಶತಕ ಬಾರಿಸಿದ ಸಚಿನ್ ತೆಂಡುಲ್ಕರ್ ವಿಶ್ವದಾಖಲೆ ಹೊಂದಿದ್ದಾರೆ.
* ಕೊಹ್ಲಿ ಅತೀ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 30 ಶತಕ ಬಾರಿಸಿದ ದಾಖಲೆ ಸ್ಥಾಪಿಸಿದರು. ಇದಕ್ಕೆ ಅವರು ತೆಗೆದುಕೊಂಡದ್ದು ಕೇವಲ 186 ಇನ್ನಿಂಗ್ಸ್. ತೆಂಡುಲ್ಕರ್ 267 ಇನ್ನಿಂಗ್ಸ್, ಪಾಂಟಿಂಗ್ 349 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
* ಕೊಹ್ಲಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದರು (18 ಇನ್ನಿಂಗ್ಸ್‌ಗಳಿಂದ 1,017 ರನ್). ಇದರಲ್ಲಿ 4 ಶತಕ, 6 ಅರ್ಧ ಶತಕ ಸೇರಿದೆ.
* ಕೊಹ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ 5ನೇ ಸಲ ಸಾವಿರ ರನ ಪೂರೈಸಿದರು. ವಿಶ್ವದಾಖಲೆ ತೆಂಡುಲ್ಕರ್ ಹೆಸರಲ್ಲಿದೆ (7 ಸಲ). ಗಂಗೂಲಿ, ಸಂಗಕ್ಕರ ಮತ್ತು ಪಾಂಟಿಂಗ್ ದ್ವಿತೀಯ ಸ್ಥಾನದಲ್ಲಿದ್ದಾರೆ (6 ಸಲ).
* ಜಸ್‌ಪ್ರೀತ್ ಬುಮ್ರಾ 5 ಆಥವಾ ಅದಕ್ಕಿಂತ ಕಡಿಮೆ ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಸರ್ವಾಧಿಕ 15 ವಿಕೆಟ್ ಕಿತ್ತ ಮೊದಲ ವೇಗದ ಬೌಲರ್ ಎನಿಸಿದರು. ನ್ಯೂಜಿಲ್ಯಾಂಡಿನ ಆ್ಯಂಡ್ರೆ ಆ್ಯಡಮ್ಸ್ 4 ಪಂದ್ಯಗಳಿಂದ 14 ವಿಕೆಟ್, ಆಸ್ಟ್ರೇಲಿಯದ ಕ್ಲಿಂಟ್ ಮೆಕಾಯ್ 5 ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ದು ಈವರೆಗಿನ ದಾಖಲೆ.
* ಏಕದಿನ ಸರಣಿ ಅಥವಾ ಪಂದ್ಯಾವಳಿಯೊಂದರಲ್ಲಿ ಭಾರತದ ಇಬ್ಬರು ಬೌಲರ್‌ಗಳು ಪಂದ್ಯವೊಂದರಲ್ಲಿ 2ನೇ ಸಲ 5 ವಿಕೆಟ್ ಕಿತ್ತರು (ಬುಮ್ರಾ, ಭುವನೇಶ್ವರ್). 1999ರ ವಿಶ್ವಕಪ್‌ನಲ್ಲಿ ರಾಬಿನ್ ಸಿಂಗ್ ಮತ್ತು ವೆಂಕಟೇಶ ಪ್ರಸಾದ್ ಈ ಸಾಧನೆ ಮಾಡಿದ್ದರು.
Advertisement