ಕೊಲಂಬೊ: ಏಷ್ಯ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಮತ್ತೆ ಕಂಟಕ ಎದುರಾಗಿದೆ. ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟು, ಪಾಕಿಸ್ಥಾನದಿಂದ ಶ್ರೀಲಂಕಾಕ್ಕೆ ಆತಿಥ್ಯ ಶಿಫ್ಟ್ ಆದ ಬಳಿಕ ಪುನಃ ಇದರ ಭವಿಷ್ಯ ತೂಗುಯ್ಯಾಲೆಗೆ ಸಿಲುಕಿದೆ.
ಆರ್ಥಿಕವಾಗಿ ದಿವಾಳಿಯಾಗಿರುವ ದ್ವೀಪ ರಾಷ್ಟ್ರಕ್ಕೆ ಈ ಕೂಟವನ್ನು ನಡೆಸಿಕೊಡಲು ಸಾಧ್ಯವೇ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆ!
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ (ಎಸಿಸಿ) ಅಧಿಕಾರಿಗಳು ಶ್ರೀಲಂಕಾ ಕ್ರಿಕೆಟ್ ಮಂಡಳಿ ಯೊಂದಿಗೆ ನಿಟಕ ಸಂಪರ್ಕದಲ್ಲಿದ್ದು, ಲಂಕಾ ಆತಿಥ್ಯ ಸಾಧ್ಯವೇ ಎಂಬ ಬಗ್ಗೆ ಪರಾಮರ್ಶಿ ಸುತ್ತಿದ್ದಾರೆ. ಆತಿಥ್ಯದ ನಿರ್ಧಾರವನ್ನು ಅಂತಿಮಗೊಳಿಸಲು ಜುಲೈ 27ರ ಗಡುವು ನೀಡಿದ್ದಾರೆ. ಅಷ್ಟರೊಳಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರವನ್ನು ತಿಳಿಸಬೇಕಿದೆ.
“ಶ್ರೀಲಂಕಾ ಈಗಲೂ ಈ ಕೂಟವನ್ನು ನಡೆಸಿಕೊಡುವ ಉಮೇದಿನಲ್ಲಿದೆ. ಆದರೆ ಖಚಿತವಾಗಿ ಈಗಲೇ ಏನೂ ಹೇಳಲಾಗದು. ಹೀಗಾಗಿ ಜು. 27ರ ಗಡುವು ನೀಡಲಾಗಿದೆ. ಆಕಸ್ಮಾತ್ ಇದು ಸಾಧ್ಯವಿಲ್ಲ ಎಂದಾದರೆ ಕೂಟವನ್ನು ಶ್ರೀಲಂಕಾದಿಂದಾಚೆ ನಡೆಸಬೇಕಾ ಗುತ್ತದೆ’ ಎಂದು ಎಸಿಸಿ ಮೂಲಗಳಿಂದ ತಿಳಿದು ಬಂದಿದೆ.
ಈಗಿನ ವೇಳಾಪಟ್ಟಿಯಂತೆ ಆಗಸ್ಟ್ 27 ರಂದು ಏಷ್ಯ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭಗೊಳ್ಳಬೇಕಿದೆ.