ಆಧ್ಯಾತ್ಮಿಕ ನೆಲೆಯಲ್ಲಿ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದು ಶ್ರೀಕೃಷ್ಣ ಬಾಲಕನಾಗಿದ್ದಾಗಲೇ ಸಾಧಿಸಿ ತೋರಿಸಿದ್ದಾನೆ. ತಾಯಿ ಯಶೋದೆಗೆ ಇಂತಹ ಚಿಂತನೆ ನೀಡಿದ್ದಾನೆ. ಶ್ರೀ ಕೃಷ್ಣ ಮಣ್ಣು ತಿಂದ ಎನ್ನುವುದು ಪ್ರಚಲಿತವಾದ ಕಥೆ. ಅದರ ನೀತಿ ಸೊಗಸಾಗಿದೆ.
ಶ್ರೀ ಕೃಷ್ಣ ಮಣ್ಣು ತಿಂದ, ಅಮ್ಮನಿಗೆ ತಿಳಿಯುತ್ತದೆ. ಕಟ್ಟಿ ಹಾಕಿದಳು. ಕಟ್ಟಿ ಹಾಕುವಾಗ ಅಲ್ಲೇ ಬಿದ್ದಿರುವ ಎರಡು ಅಂಗಲದ ಹಗ್ಗವನ್ನು ತೆಗೆದುಕೊಂಡು ಬಂದು ಪುಟ್ಟ ಕೈಗಳನ್ನು ಕಟ್ಟಲು ಹೊರಟಳು. ಆಗ ಕೃಷ್ಣನನ್ನು ಕಟ್ಟಲು ಆಗಲಿಲ್ಲ. ಆ ಹಗ್ಗಕ್ಕೆ ಮತ್ತೆರೆಡು ಅಂಗುಲ ಸೇರಿಸಿದಳು ಆಗಲೂ ಆಗಲಿಲ್ಲ.
ಪಕ್ಕದ ಮನೆಯಿಂದ ಇನ್ನೆರೆಡು ಅಂಗುಲ ಹಗ್ಗ ತಂದು ಕಟ್ಟಿದರೂ ಆಗಲಿಲ್ಲ. ಗೋಕುಲದಲ್ಲಿರುವ ಎಲ್ಲ ಗೋವುಗಳಿಗೆ ಕಟ್ಟಿರುವ ಹಗ್ಗ ಬಿಚ್ಚಿ ತಂದರೂ ಎರಡು ಅಂಗುಲ ಕಡಿಮೆಯೇ ಆಗುತ್ತಾ ಬಂತು. ಇದು ಕೃಷ್ಣನ ವೈಚಿತ್ರ. ಆದರೆ ಯಶೋದೆಗೆ ಆಶ್ಚರ್ಯ. ಈ ಪುಟ್ಟ ಕೈಗಳನ್ನು ಕಟ್ಟಿ ಹಾಕಲು ಎಷ್ಟು ಹಗ್ಗ ತಂದರೂ ಎರಡೇ ಅಂಗುಲ ಕಡಿಮೆ ಆಗುವುದು. ಒಂದು, ಮೂರು ಅಲ್ಲ, ನಾಲ್ಕು ಅಲ್ಲ. ಆ ದೃಷ್ಟಿಯಲ್ಲಿ ಯಶೋದಾ ಯೋಚಿಸುತ್ತಿದ್ದಂತೆ ತನ್ನ ತಪ್ಪು ಅರಿವಾಯಿತು.
ಕೃಷ್ಣ ನನ್ನ ಮಗ ಮಾತ್ರವಲ್ಲ, ಜಗದೊಡೆಯನೇ ನನ್ನ ಮಗನಾಗಿ ಬಂದಿದ್ದಾನೆ ಎಂಬ ಪ್ರೀತಿ ಬಂತು. ಆಗ ಕೃಷ್ಣ ಯಶೋದೆಗೆ ಮೊದಲು ತೆಗೆದುಕೊಂಡ ಎರಡು ಅಂಗುಲದ ಹಗ್ಗದಲ್ಲೇ ಕಟ್ಟಲು ಸಿಕ್ಕಿದ. ಇದು ಶ್ರೀ ಕೃಷ್ಣನ ಲೀಲೆ. ಯಶೋದೆಗೆ ಅಷ್ಟರ ವರೆಗೆ ನನ್ನ ಮಗನೆಂಬ ಪ್ರೀತಿ ಇತ್ತು. ಜತೆಗೆ ಕೃಷ್ಣ ದೇವರು ಎಂಬ ತಿಳಿವಳಿಕೆ ಇರಲಿಲ್ಲ. ಆದರಿಂದ ಎರಡಂಗುಲ ಕಡಿಮೆ ಆಗಿದೆ ಎಂದರೆ ಭಗವಂತನಿಗಿಂತ ಭಿನ್ನವಾದ ವಸ್ತವಿನಲ್ಲಿ ಅವಳಲ್ಲಿ ವೈರಾಗ್ಯ ಇರಲಿಲ್ಲ ಎಂಬುದು ಒಂದಂಗುಲ. ಭಗವಂತ(ಕೃಷ್ಣ) ದೊಡ್ಡವನು ಎಂಬ ತಿಳಿವಳಿಕೆಯಿಂದ ಕೂಡಿದ ಪ್ರೀತಿ ಇರಲಿಲ್ಲ. ಇದನ್ನು ತಿಳಿಸಲು ಕೃಷ್ಣ ಈ ನಾಟಕ ಮಾಡಿದ.
ಜಗದೊಡೆಯ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಪ್ರೀತಿ ಜಾಸ್ತಿಯಾಗಿ ಭಕ್ತಿ ಹೆಚ್ಚಾಯಿತು. ವೈರಾಗ್ಯನೂ ಬಂತು, ಭಗವಂತನ ಜ್ಞಾನ ಸಹಿತವಾದ ಭಕ್ತಿಯೂ ಬಂತು. ನಾವು ದೇವನೆದುರು ನಿಂತಾಗ ಅವನು ಲೀಲಾಮಾನುಷ ವಿಗ್ರಹ. ಸರ್ವೋತ್ತಮನಾದರೂ ಜಗತ್ತಿನ ಏಳಿಗೆಗಾಗಿ ಪುಟ್ಟ ಬಾಲಕನಾಗಿ ಬಂದ.
–
ಡಾ| ವಂಶಿಕೃಷ್ಣ ಆಚಾರ್ಯ ಪುರೋಹಿತ್
ನಿರ್ದೇಶಕ, ತಣ್ತೀಸಂಶೋಧನ ಸಂಸ್ಥೆ, ಉಡುಪಿ.