ಉಡುಪಿ: ರಾಜಧಾನಿಯ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಕಳವಳ ವ್ಯಕ್ತಪಡಿಸಿ, ಕೃತ್ಯ ನಡೆಸಿದ ಆರೋಪಿಗಳನ್ನು ತತ್‌ಕ್ಷಣ ಬಂಧಿಸಿ ಕಠಿನ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಂದೆ ಇಂತಹ ಘಟನೆ ನಡೆಯದಂತೆ ಸರಕಾರ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪೇಜಾವರ ಶ್ರೀಪಾದರು ಸಂದೇಶ ನೀಡಿ, ಗೋವುಗಳ ಮೇಲಿನ ಕ್ರೌರ್ಯ ನಿಲ್ಲದೇ ಇದ್ದರೆ ಮುಂದೆ ಕಠಿನವಾದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಇದೊಂದು ಹೇಯ ಕೃತ್ಯ. ಯಾವ ಮಾತಿನಿಂದ ಖಂಡಿಸಿದರೂ ಸಾಲದು. ಗೋವಿನ ಕೆಚ್ಚಲನ್ನೆ ಕತ್ತರಿಸುವ ದುಷ್ಕೃತ್ಯ ನಡೆದು ಹೋಗಿದೆ. ಗೋ ಎಂದರೆ ಸಾಧು ಗುಣದ ಪ್ರತೀಕ. ಅಂತಹ ಹಸುವಿನ ಕೆಚ್ಚುಲು ಕೊçದಿರುವುದನ್ನು ಕಟುವಾಗಿ ಖಂಡಿಸುತ್ತೇವೆ. ಇಂತಹ ದುಷ್ಕೃತ್ಯ, ಕ್ರೌರ್ಯ ಎಸಗಿದರ ಮೇಲೆ ಕಠಿನ ಕ್ರಮ ಸರಕಾರ ತೆಗೆದುಕೊಳ್ಳಬೇಕು. ಮುಂದೆ ಇಂತಹ ಘಟನೆ ನಡೆಯದಂತ ಎಚ್ಚರಿಕೆಯ ಸಂದೇಶ ಈ ಕ್ರಮದ ಮೂಲಕ ಸರಕಾರ ನೀಡಬೇಕು. ಎಲ್ಲರಿಗೂ ಅದು ಪಾಠವಾಗಬೇಕು ಎಂದರು.
ಬಹುಸಂಖ್ಯಾತರಾಗಿದ್ದೂ ಜಾತ್ಯತೀತ ನ್ಯಾಯದ ನೆಪದಲ್ಲಿ ನಮ್ಮ ಭಾವನೆ ಶ್ರದ್ಧೆಗಳಿಗೆ ಕೊಡಲಿ ಏಟು ಕೊಡುವ ದುಷ್ಟ ಪ್ರವೃತ್ತಿಗಳನ್ನು ಇನ್ನೂ ಎಷ್ಟು ಸಹಿಸಬೇಕು ಎಂದು ಸರಕಾರಗಳನ್ನು ಖಾರವಾಗಿಯೇ ಪ್ರಶ್ನಿಸಿರುವ ಶ್ರೀಪಾದರು, ಈಗ ನಡೆದಿರುವ ಕೃತ್ಯ ಅತ್ಯಂತ ಪೈಶಾಚಿಕವಾಗಿದೆ. ಕೋಟ್ಯಂತರ ಹಿಂದುಗಳಿಗೆ ಇದು ಅತ್ಯಂತ ಕೆಟ್ಟ ದಿನವಾಗಿದೆ. ಸರಕಾರ ಕುಂಟುನೆಪ ಹೇಳದೇ ಅಪರಾ ಧಿಗಳಿಗೆ ಘೋರ ಶಿಕ್ಷೆಯನ್ನು ತ್ವರಿತಗತಿ ನ್ಯಾಯಾಲಯದ ಮೂಲಕ ನೀಡಬೇಕು.
ದೇಶದಲ್ಲಿ ಗೋವಿನ ಮೇಲಿನ ಕ್ರೌರ್ಯಕ್ಕೆ ತಾತ್ವಿಕ ಅಂತ್ಯಹಾಡಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಆಮರಣ ಉಪವಾಸ ಕುಳಿತಾದರೂ ಸರಿ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದ್ದಾರೆ.
ಪರ್ಯಾಯ ಪುತ್ತಿಗೆ ಮಠಾಧೀಶರು ಸಂದೇಶ ನೀಡಿ, ಗೋವಿಗೆ ಹೀನ ರೀತಿಯಲ್ಲಿ ಹಿಂಸೆ ನೀಡಿದವರ ಪರ ಮೃದು ಧೋರಣೆ ಸರಿಯಲ್ಲ. ಅಂಥವರಿಗೆ ಕಠಿನ ಕ್ರಮ ಆಗಲೇ ಬೇಕು. ಆರೋಪಿಗಳನ್ನು ಶೀಘ್ರವೇ ಪತ್ತೆ ಮಾಡಿ ಕಠಿನ ಕ್ರಮ ಸರಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.