Advertisement
ಮಧ್ಯರಾತ್ರಿ ಕೃಷ್ಣಾರ್ಘ್ಯಕೃಷ್ಣಮಠದ ಪರಿಸರದಲ್ಲಿ ವಿವಿಧ ವೇಷ ಮತ್ತು ಇತ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆ.19ರ ಬೆಳಗ್ಗೆಯಿಂದ ಸಂಜೆವರೆಗೆ ಏರ್ಪಡಿಸಲಾಗಿದೆ. ಮಧ್ವಾಂಗಣ, ರಾಜಾಂಗಣ, ಬಡಗುಮಾಳಿಗೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಸರಕಾರದ ವತಿಯಿಂದ ಈ ವರ್ಷದಿಂದ ಅಷ್ಟಮಿ ಆಚರಣೆ ನಡೆಯುತ್ತಿದ್ದು, ಜಿಲ್ಲಾಡಳಿತ ವತಿಯಿಂದಲೂ ಸಕಲ ತಯಾರಿ ನಡೆದಿದೆ. ಆ. 19ರಂದು ಕೃಷ್ಣಾಪುರ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಸಹಿತ ಕೃಷ್ಣ ಭಕ್ತರು ನಿರ್ಜಲ ಉಪವಾಸದಲ್ಲಿದ್ದು, ಕೃಷ್ಣ ಸ್ಮರಣೆಯಲ್ಲಿರುತ್ತಾರೆ. ರಾತ್ರಿ ಕೃಷ್ಣ ಪೂಜೆ ಬಳಿಕ 12.21ಕ್ಕೆ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನೆರವೇರಲಿದೆ. ಜನರಿಗೆ ಅಷ್ಟಮಿ ಹಿನ್ನೆಲೆಯಲ್ಲಿ ಪ್ರಸಾದ ವಿತರಿಸಲು ಕೃಷ್ಣಮಠದಲ್ಲಿ ಲಡ್ಡಿಗೆ, ಖಾದ್ಯ ತಯಾರಿಸಲು ಬಾಣಸಿಗರು ಸಿದ್ಧತೆ ಆರಂಭಿಸಿದ್ದಾರೆ.
ರಥೋತ್ಸವ ಆ. 20ರಂದು ಶ್ರೀಕೃಷ್ಣಲೀಲೋತ್ಸವ ಜರಗಲಿದೆ. ಅಪರಾಹ್ನ 3 ಗಂಟೆ ಬಳಿಕ ರಥೋತ್ಸವ ಜರುಗಲಿದ್ದು ವಿವಿಧ ವೇಷಗಳ ಆಕರ್ಷಣೆಗಳು ಇರಲಿವೆ. ಈಗ ಚಾತುರ್ಮಾಸ್ಯದ ಅವಧಿಯಾದ ಕಾರಣ ಶ್ರೀಕೃಷ್ಣ ಮಠದ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರಗೆ ತರುವುದಿಲ್ಲ. ಹೀಗಾಗಿ ಉತ್ಸವದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ವಿಗ್ರಹವನ್ನು ಪೂಜಿಸಿ ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ. ಹೊರರಾಜ್ಯದಿಂದ ಈಗಾಗಲೇ ಸಾಕಷ್ಟು ಮಂದಿ ವಿವಿಧ ಬಗೆಯ ವ್ಯಾಪಾರಿಗಳು ನಗರಕ್ಕೆ ಲಗ್ಗೆ ಇಟ್ಟಿದ್ದಾರೆ. ಹಲವೆಡೆ ವ್ಯಾಪಾರಿಗಳು ಟೆಂಟ್ ಹಾಕಿದ್ದು, ಹೂ ವ್ಯಾಪಾರಿಗಳು, ಅಷ್ಟಮಿ ವಿಶೇಷ ತಿನಿಸು ಮೂಡೆ ಎಲೆ ವ್ಯಾಪಾರಿಗಳು ಆಗಮಿಸಿದ್ದಾರೆ. ಈಗಾಗಲೇ ವ್ಯಾಪಾರ ಚಟುವಟಿಕೆ ಬಿರುಸುಗೊಂಡಿದೆ. ನಗರದ ಫ್ಯಾನ್ಸಿ ಸ್ಟೋರ್ ಮತ್ತು ವೇಷಗಳ ಪರಿಕರಗಳನ್ನು ಮಾರಾಟ ಮಾಡುವ ಅಂಗಡಿಯಲ್ಲಿ ಕೃಷ್ಣ ವೇಷದ ಪರಿಕರ ಕಂಡುಕೊಳ್ಳಲು ಜನರು ಮುಗಿ ಬಿದ್ದಿದ್ದಾರೆ. ನಗರದ ಪ್ರಮುಖ ಹುಲಿವೇಷಧಾರಿಗಳ ತಂಡ ಹುಲಿವೇಷ ಕುಣಿತಕ್ಕೆ ತಯಾರಿ ನಡೆಸಿವೆ. ಪೇಟ್ಲಗಳ ಮಾರಾಟವೂ ಭರ್ಜರಿಯಾಗಿ ನಡೆಯುತ್ತಿದೆ.
ಕೆಲವು ಕಡೆಗಳಲ್ಲಿ ಆ. 18ರಂದು ಅಷ್ಟಮಿ, ಆ. 19ರಂದು ವಿಟ್ಲಪಿಂಡಿ ಉತ್ಸವಗಳು ನಡೆಯಲಿವೆ. ಆರ್ಯಭಟ ಗಣಿತದಂತೆ ಪಂಚಾಂಗವನ್ನು ಅನುಸರಿಸುವವರು ಆ. 19ರಂದು ಅಷ್ಟಮಿ, 20ರಂದು ವಿಟ್ಲಪಿಂಡಿಯನ್ನು, ದೃಗ್ಗಣಿತ ಪಂಚಾಂಗವನ್ನು ಅನುಸರಿಸುವವರು ಆ. 18ರಂದು ಅಷ್ಟಮಿ, 19ರಂದು ವಿಟ್ಲಪಿಂಡಿಯನ್ನು ಆಚರಿಸುತ್ತಾರೆ. ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರು ಆರ್ಯಭಟ ಗಣಿತದ ಪಂಚಾಂಗವನ್ನು ಅನುಸರಿಸುವುದರಿಂದ ಆ. 19ರಂದು ಅಷ್ಟಮಿ, 20ರಂದು ವಿಟ್ಲಪಿಂಡಿ ಆಚರಣೆಯಾಗುತ್ತಿದೆ. ದ.ಕ., ಕಾಸರಗೋಡು ಜಿಲ್ಲೆಯ ಹೆಚ್ಚಿನ ಕಡೆಗಳಲ್ಲಿ ಇಂದು ಆಚರಣೆ
ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗ, ಕಾಸರಗೋಡು ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಗುರುವಾರ ಭಕ್ತಿ ಸಂಭ್ರಮದಿಂದ ನಡೆಯಲಿದೆ. ಅತ್ತಾವರ, ಕದ್ರಿ, ಉರ್ವಸ್ಟೋರ್, ಕಾವೂರು ಸೇರಿದಂತೆ ಹಲವು ಕಡೆಗಳಲ್ಲಿ ಮೊಸರು ಕುಡಿಕೆ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆ ಆ. 18ರಂದು ನಡೆಯಲಿದೆ.
Related Articles
Advertisement