ದಾವಣಗೆರೆ: ಬಸವ ಚೇತನ ಶ್ರೀ ಜಯದೇವ ಜಗದ್ಗುರುಗಳವರ 60ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ, ಸಹಜ ಶಿವಯೋಗ, ಜಯದೇವಶ್ರೀ ಶೂನ್ಯಪೀಠ ಪ್ರಶಸ್ತಿ ಪ್ರದಾನ ಸಮಾರಂಭ ಮಾ.31ರಿಂದ ಏ. 2ರ ವರೆಗೆ ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ದಾವಣಗೆರೆಯ ವಿರಕ್ತ ಮಠ, ಭಕ್ತಾದಿಗಳ ಸಹಕಾರದಿಂದ ಕಳೆದ 59 ವರ್ಷದಿಂದ ಶ್ರೀ ಜಯದೇವ ಜಗದ್ಗುರುಗಳವರ ಸ್ಮರಣೋತ್ಸವ ಆಯೋಜಿಸಲಾಗುತ್ತಿದೆ. ಈ ಬಾರಿಯೂ ಮೂರು ದಿನಗಳ ಕಾಲ ವಿವಿಧ ವಿಚಾರ, ಸಂವಾದದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಮಾ.31ರಂದು ಬೆಳಗ್ಗೆ 7.30ರಿಂದ 8.30ರ ವರೆಗೆ ಸಹಜ ಶಿವಯೋಗ ನಡೆಯಲಿದೆ.
ಸಂಜೆ 6.30ಕ್ಕೆ ಮಹಾನ್ ಸಾಧಕರ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಜಯದೇವಶ್ರೀ, ನಟಿ, ರಂಗಕರ್ಮಿ ಅರುಂಧತಿನಾಗ್‌ಗೆ ಶೂನ್ಯಪೀಠ ಅಕ್ಕನಾಗಮ್ಮ, ಪ್ರಜಾವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ಕೆ.ಎನ್. ಶಾಂತಕುಮಾರ್‌ಗೆ ಶೂನ್ಯಪೀಠ ಚನ್ನಬಸವ ಪ್ರಶಸ್ತಿ ಹಾಗೂ ಸಾಹಿತಿ, ಸಂಶೋಧಕ ಡಾ| ಎಸ್.ಆರ್. ಗುಂಜಾಳ್ ಅವರಿಗೆ ಶೂನ್ಯಪೀಠ ಅಲ್ಲಮ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ 25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಏ.1ರಂದು ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಏ. 2 ರಂದು ನೋಟು ಅಮಾನ್ಯ ಸಾಧಕ-ಬಾಧಕ ವಿಷಯ ಕುರಿತು ಚರ್ಚೆ, ಸಂವಾದ ನಡೆಯಲಿದೆ ಎಂದು ತಿಳಿಸಿದರು.
ಸ್ಮರಣೋತ್ಸವ ಅಂಗವಾಗಿ ಮಾ.26ರಿಂದ 30ರ ವರೆಗೆ ಸಂಜೆ 6ರಿಂದ 8ರ ವರೆಗೆ ಶಿವಯೋಗಿ ಮಂದಿರದಲ್ಲಿ ಶ್ರೀ ಜಯದೇವ ಲೀಲೆ ಪ್ರವಚನ, 27ರಿಂದ 30ರ ವರೆಗೆ ಪ್ರತಿ ದಿನ ಬೆಳಗ್ಗೆ 7.30ರಿಂದ ಬಸವಪ್ರಭು ಶ್ರೀಗಳ ನೇತೃತ್ವದಲ್ಲಿ ವಿವಿಧ ಬಡಾವಣೆಯಲ್ಲಿ ಜನಜಾಗೃತಿ ಪಾದಯಾತ್ರೆ, 31ರಂದು ಉಚಿತ ಆರೋಗ್ಯ,
ಏ.1ರಂದು ನೇತ್ರ ತಪಾಸಣಾ, 2ರಂದು ಆರೋಗ್ಯ ತಪಾಸಣೆ, ಉಚಿತವಾಗಿ ಔಷಧಿ ವಿತರಣೆ, ಏ.3 ಮತ್ತು 4ರಂದು ಸಂಜೆ 6ಕ್ಕೆ ಜಮುರಾ ನಾಟಕೋತ್ಸವ ನಡೆಯಲಿವೆ ಎಂದು ತಿಳಿಸಿದರು. ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಮಾಜಿ ಶಾಸಕ ಮೋತಿ ವೀರಣ್ಣ, ಎಂ. ಜಯಕುಮಾರ್, ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶ್, ಎಂ.ಕೆ. ಬಕ್ಕಪ್ಪ, ಹಾಸಭಾವಿ ಕರಿಬಸಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.