ಬೆಂಗಳೂರು: ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಇಲ್ಲದೇ ಪರದಾಡುತ್ತಿದ್ದ ರಾಜ್ಯದ 1300 ಕ್ಕೂ ಹೆಚ್ಚು ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನ ಸದಸ್ಯರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು, ಸಕಾಲದಲ್ಲಿ ಟಿಕೆಟ್ ವ್ಯವಸ್ಥೆ ಕಲ್ಪಿಸಿ ದೇವರ ದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ನ 1300 ಕ್ಕೂ ಹೆಚ್ಚು ಭಕ್ತರು ಪ್ರತಿವರ್ಷದಂತೆ ಈ ವರ್ಷವೂ ತಿರುಮಲಕ್ಕೆ ಕಳೆದವಾರ ಪಾದಯಾತ್ರೆ ಆರಂಭಿಸಿ, ಮಂಗಳವಾರ ರಾತ್ರಿ ತಿರುಪತಿಯನ್ನು ತಲುಪಿದರು. ಮುಂಗಡವಾಗಿ ಟಿಕೆಟ್ ಪಡೆಯದಿದ್ದರಿಂದ ಅಲ್ಲಿಂದ ತಿರುಮಲ ಬೆಟ್ಟಕ್ಕೆ ಹತ್ತಲು ಅವರಿಗೆ ಭದ್ರತಾ ಸಿಬ್ಬಂದಿ ಅನುಮತಿ ನಿರಾಕರಿಸಿದರು.
ಪಾದಯಾತ್ರೆ ನೇತೃತ್ವ ವಹಿಸಿದ್ದ ಮುಖಂಡರು ಎಸ್.ಆರ್.ವಿಶ್ವನಾಥ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಆತಂಕವನ್ನು ತೋಡಿಕೊಂಡರು. ಕೂಡಲೇ ವಿಶ್ವನಾಥ್ ಅವರು ಟಿಟಿಡಿ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ತಿರುಮಲದಲ್ಲಿರುವ ತಮ್ಮ ಆಪ್ತ ಸಹಾಯಕರಿಗೆ ಕರೆ ಮಾಡಿ ಪಾದಯಾತ್ರೆಯ ಮೂಲಕ ಬಂದಿರುವ ಭಕ್ತಾಧಿಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಇದೇ ವೇಳೆ ಎಲ್ಲಾ 1300 ಭಕ್ತರಿಗೂ ತಿರುಮಲ ಬೆಟ್ಟಕ್ಕೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸುವ ಟಿಕೆಟ್ ವ್ಯವಸ್ಥೆಯನ್ನು ಮಾಡುವಂತೆ ನಿರ್ದೇಶನ ನೀಡಿದರು. ವಿಶ್ವನಾಥ್ ಅವರ ಸೂಚನೆಯಿಂದಾಗಿ ತಿರುಮಲ ದೇವಸ್ಥಾನಂನ ಅಧಿಕಾರಿಗಳು ಮಂಗಳವಾರ ರಾತ್ರಿಯೇ 800 ಭಕ್ತರಿಗೆ ಟಿಕೆಟ್ ವ್ಯವಸ್ಥೆ ಕಲ್ಪಿಸಿದರೆ, ಉಳಿದ 500 ಭಕ್ತರಿಗೆ ಬುಧವಾರ ಬೆಳಗ್ಗೆ ಟಿಕೆಟ್ ಕಲ್ಪಿಸಿದರು.
ಭಕ್ತರಿಂದ ಧನ್ಯವಾದಗಳು
ತಾವು ಸಂಕಷ್ಟಕ್ಕೆ ಸಿಲುಕಿದ್ದ ಮಾಹಿತಿ ತಿಳಿದು ಕೂಡಲೇ ತಮಗೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿದ ಎಸ್.ಆರ್.ವಿಶ್ವನಾಥ್ ಅವರಿಗೆ ಭಕ್ತರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ವಿಶ್ವನಾಥ್ ಸಲಹೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ”ಕೊರೋನಾ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಟಿಕೆಟ್ ವಿತರಿಸಲಾಗುತ್ತದೆ. ಮುಂಗಡವಾಗಿ ಟಿಕೆಟ್ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಮಾಡಿಕೊಂಡ ನಂತರವಷ್ಟೇ ತಿರುಮಲಕ್ಕೆ ತೆರಳಬೇಕು. ಹೀಗೆ ಮೊದಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡರೆ ಭಕ್ತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ” ಎಂದು ಸಲಹೆ ನೀಡಿದ್ದಾರೆ.