ಮೈಸೂರು: ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಹುಟ್ಟುಹಬ್ಬದ ಅಂಗವಾಗಿ ಭೈರವ ನ್ಪೋರ್ಟ್ಸ್ ಕ್ಲಬ್ ವತಿಯಿಂದ ಸಾರ್ವಜನಿಕರಲ್ಲಿ ಡೆಂಘೀ ಜ್ವರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾನುವಾರ ರಸ್ತೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಮೈಸೂರು ವಿವಿ ಓವಲ್ ಮೈದಾನದಿಂದ ಆರಂಭಗೊಂಡ ಓಟಕ್ಕೆ ಶಾಸಕ ಜಿ.ಟಿ.ದೇವೇಗೌಡ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಓಟದಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಗರದ ಪ್ರಮುಖ ಕಡೆಗಳಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸಿದರು.
ಇದಕ್ಕೂ ಮುನ್ನ ಓಟಕ್ಕೆ ಚಾಲನೆ ನೀಡಿದ ಶಾಸಕರಾದ ಜಿ.ಟಿ. ದೇವೇಗೌಡ, ವಾಸು, ಸಾ.ರಾ.ಮಹೇಶ್, ಮೇಯರ್ ಎಂ.ಜೆ.ರವಿಕುಮಾರ್ ಸಹ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದರು. ಓಟದ ಅಂಗವಾಗಿ 10 ಕಿ.ಮೀ. ಪುರುಷರ ವಿಭಾಗ, 5 ಕಿ.ಮೀ. ಮಹಿಳೆಯರ ವಿಭಾಗ, 5 ಕಿ.ಮೀ. ಪುರುಷರ ವಿಭಾಗ, 3 ಕಿ.ಮೀ.ಶಾಲಾ ಬಾಲಕರ ವಿಭಾಗ, 2 ಕಿ.ಮೀ ಶಾಲಾ ಬಾಲಕಿಯರ ವಿಭಾಗ ಸೇರಿದಂತೆ 5 ವಿಭಾಗದಲ್ಲಿ ರಸ್ತೆ ಓಟ ನಡೆಯಿತು. ಓ
ವಲ್ ಮೈದಾನದಿಂದ ಆರಂಭಗೊಂಡ ರಸ್ತೆ ಓಟವು ಕೌಟಿಲ್ಯ ವೃತ್ತ, ಏಕಲವ್ಯ ವೃತ್ತ, ಬಲ್ಲಾಳ್ ಸರ್ಕಲ್, ಆರ್‌ಟಿಒ ವೃತ್ತ, ಅಗ್ರಹಾರ, ಸಯ್ನಾಜಿರಾವ್ ರಸ್ತೆ, ಸಂತೇಪೇಟೆ, ಡಿ.ದೇವರಾಜ ಅರಸು ರಸ್ತೆ, ಹುಣಸೂರು ರಸ್ತೆ, ಕಲಾಮಂದಿರ ವೃತ್ತ, ಕುಕ್ಕರಹಳ್ಳಿ ಕೆರೆ ಮುಂಭಾಗ ಸೇರಿದಂತೆ ನಾನಾ ಭಾಗದಲ್ಲಿ ಸಂಚರಿಸಿ ಓವಲ್ ಮೈದಾನದಲ್ಲಿ ಅಂತ್ಯವಾಯಿತು. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಕ್ಲಬ್‌ನ ಪದಾಧಿಕಾರಿಗಳಾದ ಬಿ.ಕುಮಾರ್, ಸಿ.ಶಿವಣ್ಣ, ಪಿ.ರಮೇಶ್ ಸೇರಿದಂತೆ ಇತರರು ಹಾಜರಿದ್ದರು.