ಧಾರವಾಡ: ರಾಜ್ಯ ಸರಕಾರ ಅನುಷ್ಠಾನಗೊಳಿಸಲು ಮುಂದಾಗಿರುವ ಪಾತಾಳಗಂಗೆ ಯೋಜನೆಯನ್ನು ಕೂಡಲೇ ಕೈ ಬಿಡುವಂತೆ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಾತಾಳಗಂಗೆ ಯೋಜನೆಯ ಅನುಷ್ಠಾನ ಪ್ರಕೃತಿ ಮಾತೆಯ ವಿರುದ್ಧವಾಗಿದ್ದು ಇದರಿಂದ ಭಾರೀ ಪ್ರಮಾಣದ ಹಾನಿಯನ್ನು ಇಡೀ ಜೀವ ಸಂಕುಲ ಅನುಭವಿಸಬೇಕಾಗುತ್ತದೆ. ಹೀಗಾಗಿ ಪ್ರಕೃತಿಯ ವಿರುದ್ಧವಾಗಿರುವ ಈ ನಡೆಯನ್ನು ಕೈ ಬಿಡುವುದು ಒಳಿತು ಎಂದು ಅವರು ಹೇಳಿದರು.
ಖೊಟ್ಟಿ ಹಾಗೂ ಪ್ರಶ್ನಾರ್ಹ ಕಂಪನಿ “ವಾಟರ್ ಕ್ಯೂಸ್ಟ್’ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತನಿಖೆ ಮಾಡಿ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಈ ಕುರಿತಂತೆ ಈಗಾಗಲೇ ಮೇ 15ರಂದು ವಿಧಾನಸೌಧದಲ್ಲಿ ಸಚಿವ ಎಚ್.ಕೆ.ಪಾಟೀಲರು ಪಾತಾಳಗಂಗೆ ಯೋಜನೆ ಕುರಿತಂತೆ ಕರೆದಿದ್ದ ಸಭೆಯಲ್ಲೂ ಗಮನಕ್ಕೆ ತರಲಾಗಿದೆ ಎಂದರು.
ಕರ್ನಾಟಕದಲ್ಲಿ ಜೆಸಿಪಿ ಪಕ್ಷಗಳು (ಜೆಡಿಎಸ್,ಕಾಂಗ್ರೆಸ್, ಬಿಜೆಪಿ) ನಡೆಸಿರುವ ಅಕ್ರಮ ಗಣಿಗಾರಿಕೆ, ಅಕ್ರಮ ವ್ಯವಹಾರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಂದ ರಾಜ್ಯಕ್ಕೆ ಭ್ರಷ್ಟಾಚಾರದ ಕಪ್ಪು ಚುಕ್ಕೆ ತಗುಲಿದೆ. ಈ ಹಗರಣಗಳ ಸುಳಿಯಲ್ಲಿ ಸಿಲುಕಿ ಬಿ.ಎಸ್.ಯಡಿಯೂರಪ್ಪ ಸಹ ತಮ್ಮ ಸಿಎಂ ಪಟ್ಟ ಕಳೆದುಕೊಂಡು ಜೈಲು ಸೇರಬೇಕಾಯಿತು.
ಆಗ ಭ್ರಷ್ಟಾಚಾರ ಮುಕ್ತ ಹಾಗೂ ದಕ್ಷ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಕೂಡ ಭ್ರಷ್ಟರ ರಕ್ಷಣೆಯಲ್ಲಿ ತೊಡಗಿರುವುದು ವಿಪರ್ಯಾಸ ಎಂದರು. ಒಂದು ಕಾಲದಲ್ಲಿ ಬಲಿಷ್ಠ ಲೋಕಾಯುಕ್ತ ಸಂಸ್ಥೆ ಅಕ್ರಮ ಗಣಿಗಾರಿಕೆ ವಿರುದ್ಧ ಕೊಟ್ಟ ವರದಿಯನ್ನು ಅನುಷ್ಠಾನಗೊಳಿಸಲು ಯಾವ ಸರಕಾರಕ್ಕೂ ಆಸಕ್ತಿ ಇಲ್ಲ.
ಈ ಹಗರಣದಿಂದ ಬಿಎಸ್ ವೈ ಸಿಎಂ ಪಟ್ಟ ಕಳೆದುಕೊಂಡರೆ ಈಗಿನ ಸಿಎಂ ಸಿದ್ದರಾಮಯ್ಯ ಇಡೀ ಲೋಕಾಯುಕ್ತ ಸಂಸ್ಥೆಗೆ ಎಳ್ಳು ನೀರು ಬಿಟ್ಟಿದ್ದಾರೆ. ಎಸಿಬಿ ರಚನೆ ಮೂಲಕ ಲೋಕಾಯುಕ್ತ ಸಂಸ್ಥೆ ನಿರ್ನಾಮ ಮಾಡಿರುವ ಪಟ್ಟ ಪಡೆದಿರುವ ಸಿದ್ದರಾಮಯ್ಯ ಜನರ ಬಗ್ಗೆ ಕಾಳಜಿ ಇದ್ದರೆ ಪಕ್ಷಬೇಧ ಮರೆತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.