ಕೊಟ್ಟೂರು: ಈ ಬಾರಿಯೂ ಕೊಟ್ಟೂರು ತಾಲೂಕಿನಲ್ಲಿ ಮಳೆ, ಬೆಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಈ ಬರದ ನಡುವೆಯೂ ಹುಣಸೆ ಹಣ್ಣು ಉತ್ತಮ ಇಳುವರಿ ಬಂದಿದೆ.ಆದರೆ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.
ತಾಲೂಕಿನ ರೈತರ ಜಮೀನಿನ ಬದುಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಹುಣಸೆ ಮರಗಳು ಇವೆ. ಈ ಬಾರಿ ಮಳೆ ಇಲ್ಲದಿದ್ದರೂ ಅಂದಾಜು 6 ಸಾವಿರ ಮರಗಳಲ್ಲಿ ಉತ್ತಮ ಹುಣಸೆ ಹಣ್ಣಿನ ಫಲ ಬಂದಿದೆ. ಕಳೆದ ವರ್ಷ ಶೇ.50ರಷ್ಟು ಇಳುವರಿ ಬಂದರೆ, ಪ್ರಸಕ್ತ ವರ್ಷ ಶೇ.75ರಷ್ಟು ಇಳುವರಿ ಬಂದಿದೆ.
ಹೆಚ್ಚು ಮರಗಳನ್ನು ಹೊಂದಿರುವ ತಾಲೂಕಿನ ರಾಂಪುರ, ಬೋರನಹಳ್ಳಿ, ಚಿರಿಬಿ, ಕಾಳಾಪುರ, ಹುಣಸಿಕಟ್ಟೆ ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಹುಣಸೆ ಮರಗಳು ಬೋಳಾಗಿದ್ದರೂ ಈ ವರ್ಷ ಉತ್ತಮ ಬೆಳೆ ಬಂದಿದೆ.
ದರ ಕುಸಿತ: ಕಳದೆ ವರ್ಷ 1 ಕೆ.ಜಿ. ಹುಣಸೆ ಹಣ್ಣಿನ ಬೆಲೆ 180 ರಿಂದ 200 ರೂ.ವರೆಗೆ ಇತ್ತು. ಈ ವರ್ಷ ಸ್ವಲ್ಪ ಉತ್ತಮ ಇಳುವರಿ ಬಂದ ಪರಿಣಾಮ ಮಾರುಕಟ್ಟೆಯಲ್ಲಿ 1 ಕೆ.ಜಿ. ಹುಣಸೆ ಹಣ್ಣಿಗೆ 80 ರಿಂದ 100 ರೂ.ಗೆ ಕುಸಿದಿದೆ. ಈ ಬಾರಿ ಮಳೆ, ಬೆಳೆ ಇಲ್ಲದೆ ಕೈಸುಟ್ಟುಕೊಂಡಿದ್ದ ರೈತರಿಗೆ ಯಾವುದೇ ಖರ್ಚಿಲ್ಲದ ಹುಣಸೆ ಹಣ್ಣಿನ ಫಲ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಹುಣಸೆ ಹಣ್ಣಿನ ದರ ಕುಸಿತದಿಂದ ಅನ್ನದಾತರು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.
ಅಲ್ಲದೇ ಮರ ಏರಿ ಹುಣಸೆ ಹಣ್ಣು ಬಡಿಯಲು ಕೂಲಿ ಕಾರ್ಮಿಕರಿಗೆ ದಿನಕ್ಕೆ 350 ರೂ. ಕೂಲಿ ಕೊಡಬೇಕು. ಆದರೆ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತರು ಇತ್ತ ಲಾಭವಿಲ್ಲದೆ, ಅತ್ತ ಕೂಲಿ ಕೊಡುವುದಕ್ಕೂ ಹಣ ಇಲ್ಲದಂತಾಗಿದೆ.
ದುರುಗಪ್ಪ, ಹುಣಸೆ ಹಣ್ಣು ಬೆಳೆದ ರೈತ.
ಕಳೆದ ವರ್ಷಕ್ಕಿಂತ ಈ ವರ್ಷ ಹುಣಸೆ ಹಣ್ಣು ಉತ್ತಮ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ನಿಗದಿತ ಬೆಲೆ ಇಲ್ಲದಂತಾಗಿದೆ. ಒಬ್ಬ ಕೂಲಿ ಕಾರ್ಮಿಕರಿಗೆ ದಿನಕ್ಕೆ 350 ರೂ. ಕೊಡಬೇಕು. ಮಹಿಳೆಯರಿಗೆ ದಿನಕ್ಕೆ 150 ರೂ. ಕೊಡಬೇಕು. ಆದರೆ ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ದರ 80ರಿಂದ 100 ರೂ.ಕ್ಕಿಂತ ಕೂಲಿನೆ ಹೆಚ್ಚಾಗಿ, ಲಾಭ ಇಲ್ಲದಂತಾಗಿದೆ.