ಉಸ್ಮಾನ್ ಖ್ವಾಜಾ, ಮ್ಯಾಟ್ ರೆನ್‌ಶಾ
ಪುಣೆ: ಭಾರತದ ನೆಲದಲ್ಲಿ ಟೆಸ್ಟ್ ಸರಣಿಯ ಕಠಿನ ಸವಾಲು ಎದುರಿಸಲು ಆಸ್ಟ್ರೇಲಿಯ ಸಜ್ಜಾಗುತ್ತಿದೆ. ಗುರುವಾರದಿಂದ ಪುಣೆಯಲ್ಲಿ ಸರಣಿಯ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಆಡುವ ಬಳಗವನ್ನು ಅಂತಿಮಗೊಳಿಸುವ ಬಗ್ಗೆ ಆಸೀಸ್ ನಾನಾ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದೆ.
ಆಸ್ಟ್ರೇಲಿಯದ ಮುಂದಿರುವುದು ಆರಂಭಿಕ ಜೋಡಿ ಯಾರಾಗಬಹುದೆಂಬ ಪ್ರಶ್ನೆ. ಡೇವಿಡ್ ವಾರ್ನರ್ ಅವರಿಗೆ ಜತೆಗಾರನಾಗಿ ಉಸ್ಮಾನ್ ಖ್ವಾಜಾ ಅವರನ್ನು ಆಡಿಸುವುದೋ ಅಥವಾ ಮ್ಯಾಟ್ ರೆನ್‌ಶಾ ಅವರನ್ನೋ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ ಎಂದಿದ್ದಾರೆ ಕೋಚ್ ಡ್ಯಾರನ್ ಲೇಹ್ಮನ್. ಆದರೆ ಶಾನ್ ಮಾರ್ಷ್ ಮತ್ತು ನಾಯಕ ಸ್ಟೀವನ್ ಸ್ಮಿತ್ 3ನೇ ಹಾಗೂ 4ನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂಬುದಾಗಿ ಲೇಹ್ಮನ್ ಹೇಳಿದರು. ಇವರಿಬ್ಬರೂ ಭಾರತ “ಎ’ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿದ್ದರು.
ಭಾರೀ ಭರವಸೆ ಮೂಡಿಸಿರುವ ಯುವ ಬ್ಯಾಟ್ಸ್‌ಮನ್ ಪೀಟರ್ ಹ್ಯಾಂಡ್ಸ್‌ಕಾಂಬ್ 5ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ಟೆಸ್ಟ್ ತಂಡಕ್ಕೆ ವಾಪಸಾಗಿರುವ ಆಲ್‌ರೌಂಡರ್ ಮಿಚೆಲ್ ಮಾರ್ಷ್ 6ನೇ ಕ್ರಮಾಂಕದಲ್ಲಿ ಆಡಬಹುದು.
ಮುಂದಿನದು ಕೀಪರ್ ಮ್ಯಾಥ್ಯೂ ವೇಡ್ ಸರದಿ. ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಸ್ಟೀವ್ ಓ’ಕೀಫ್, ಜೋಶ್ ಹ್ಯಾಝಲ್‌ವುಡ್ ಮತ್ತು ನಥನ್ ಲಿಯೋನ್ ದಾಳಿಗಿಳಿಯುವುದು ಬಹುತೇಕ ಖಚಿತ.
ಮ್ಯಾಟ್ ರೆನ್‌ಶಾ ಪ್ರತಿಭಾನ್ವಿತ ಆರಂಭಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಭ್ಯಾಸ ಪಂದ್ಯದಲ್ಲಿ ಗಳಿಸಿದ್ದು ಕೇವಲ 11 ಮತ್ತು 10 ರನ್ ಮಾತ್ರ. ಆದರೆ ಇದು ಏಶ್ಯದಲ್ಲಿ ರೆನ್‌ಶಾ ಆಡಿದ ಮೊದಲ ಪಂದ್ಯ. ಆದರೆ ರೆನ್‌ಶಾ ಪಾಕಿಸ್ಥಾನ ವಿರುದ್ಧ ಆಡಲಾದ ಕಳೆದ ಸಿಡ್ನಿ ಟೆಸ್ಟ್‌ನಲ್ಲಿ ಅಮೋಘ 184 ರನ್ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯದ ಪರಿಚಯವಿತ್ತಿದ್ದರು.