ಮುಳ್ಳೇರಿಯ: ಮಲೇಶ್ಯದಲ್ಲಿ ನಡೆದ ಏಶ್ಯನ್ ವನಿತಾ ಜೂನಿಯರ್ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯೆ ಯಶ್ಮಿತಾ ಎಂ. ಅವರಿಗೆ ಕಾಸರಗೋಡು ಮತ್ತು ಹುಟ್ಟೂರಿನಲ್ಲಿ ಭವ್ಯ ಸ್ವಾಗತ ನೀಡಿ ಹಾರ್ದಿಕವಾಗಿ ಸಮ್ಮಾನಿಸಲಾಯಿತು. ಹುಟ್ಟೂರ ಜನರ ಪ್ರೀತಿ ಆದರಕ್ಕೆ ಹೃದಯ ತುಂಬಿ ಬಂದಿದೆ ಎಂದು ಯಶ್ಮಿತಾ ಪ್ರತಿಕ್ರಿಯೆ ನೀಡಿದರು. ಏರ್ನಾಕುಲಂನಿಂದ ಕಾಸರಗೋಡಿಗೆ ರೈಲಿನಲ್ಲಿ ಆಗಮಿಸಿದ್ದ ಯಶ್ಮಿತಾ ಮತ್ತು ಅವರ ಕೋಚ್ ಶಶಿಕಾಂತ್ ಬಲ್ಲಾಳ್ ಅವರನ್ನು ರೈಲು ನಿಲ್ದಾಣದಲ್ಲಿ ಹಾರ್ಧಿಕವಾಗಿ ಸ್ವಾಗತಿಸಲಾಯಿತು. ಶಾಲಾ ಅಧ್ಯಾಪಿಕೆ ಕಲಾವತಿ ತಿಲಕ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಕೆ. ಸೂರ್ಯನಾರಾಯಣ ಭಟ್, ಕಾಸರಗೋಡು ಜಿಲ್ಲಾ ನ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷ ಎನ್.ಎ ಸುಲೈಮಾನ್, ಗೇಮ್ಸ್ ಅಸೋಸಿಯೇಶನ್ ಜಿಲ್ಲಾ ಕಾರ್ಯದರ್ಶಿ ಅಶೋಕ ಧರ್ಮತ್ತಡ್ಕ, ಜಿಲ್ಲಾ ಪಂಚಾಯತು ಸದಸ್ಯ ಎಡ್ವ. ಕೆ ಶ್ರೀಕಾಂತ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮುಂತಾದವರು ಉಪಸ್ಥಿತರಿದ್ದರು.
ರೈಲು ನಿಲ್ದಾಣದಿಂದ ಸಿಂಗಾರಿ ಮೇಳ, ನಾಸಿಕ್ ಬ್ಯಾಂಡ್‌ನೊಂದಿಗೆ ತೆರೆದ ವಾಹನದಲ್ಲಿ ಅವರನ್ನು ಕಾಸರಗೋಡು ಪೇಟೆ ಮೂಲಕ ಮುಳ್ಳೇರಿಯಕ್ಕೆ ಕರೆದೊಯ್ಯಲಾಯಿತು. ದಾರಿ ಮಧ್ಯೆ ಮುಳ್ಳೇರಿಯದಲ್ಲಿ ಕಾರಡ್ಕ ಗ್ರಾಮ ಪಂಚಾಯತ್ ವತಿಯಿಂದ ಅಧ್ಯಕ್ಷೆ ಸ್ವಪ್ನಾ ಜಿ., ಉಪಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ನಾರಂಪಾಡಿ ಪೇಟೆಯಲ್ಲಿ ಬಿಜೆಪಿ ಕಾಸರಗೋಡು ಮಂಡಲ ಪ್ರಧಾನಕಾರ್ಯದರ್ಶಿ ಹರೀಶ್ ನಾರಂಪಾಡಿ ಮತ್ತು ಮಾರ್ಪನಡ್ಕ ಪೇಟೆಯಲ್ಲಿ ವ್ಯಾಪಾರಿ ಏಕೋಪನ ವ್ಯವಸಾಯಿ ಸಮಿತಿಯ ಮಾರ್ಪನಡ್ಕ ಘಟಕ ವತಿಯಿಂದ ಯಶ್ಮಿತಾ ಅವರಿಗೆ ಶಾಲು ಹಾಕಿ ಸ್ವಾಗತಿಸಲಾಯಿತು. ಅಲ್ಲಿಂದ ಅವರು ಅಗಲ್ಪಾಡಿಯ ತನ್ನ ಶಾಲೆಗೆ ಆಗಮಿಸಿದಾಗ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಹಾಗೂ ಶಾಲಾ ಮಕ್ಕಳು ಪ್ರೀತಿಯಿಂದ ಸ್ವಾಗತಿಸಿದರಲ್ಲದೇ ಸಮ್ಮಾನ ಕಾರ್ಯಕ್ರಮವೂ ಜರಗಿತು. ನಾಟೆಕಲ್ಲು ಸಮೀಪದ ಮಿತ್ತಜಾಲು ನಿವಾಸಿ ಸುಮತಿ ಮತ್ತು ತಂದೆ ಬಡ ಕೂಲಿ ಕಾರ್ಮಿಕ ಸುಬ್ಬಣ್ಣ ನಾಯ್ಕ ಅವರ ಪುತ್ರಿಯಾಗಿರುವ ಯಶ್ಮಿತಾ ಅಗಲ್ಪಾಡಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.
ಕಾರಡ್ಕ ಗ್ರಾಮ ಪಂಚಾಯತು ವತಿಯಿಂದ ಶಾಲು ಹಾಕಿ ಸ್ವಾಗತ
Photos: ಶ್ರೀಕಾಂತ್ ಕಾಸರಗೋಡು