ಬೆಳ್ತಂಗಡಿ: ಮಾನಸಿಕವಾಗಿ, ದೈಹಿಕವಾಗಿ ಸದೃಢತೆಯಿಂದಿರಲು ಕ್ರೀಡೆ ಅಗತ್ಯ. ಇದರಿಂದ ಉತ್ತಮ ಸಮಾಜದ ನಿರ್ಮಾಣವೂ ಅಗಬಹುದು. ಶಾಲಾ ಹಂತದಲ್ಲಿ ಪ್ರತಿಯೊಂದು ಶಾಲೆಯ ಮಕ್ಕಳು ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಬೇಕು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶುಕ್ರವಾರ ಗೇರುಕಟ್ಟೆ ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ 14 ಹಾಗೂ 17 ವಯೋಮಿತಿಯ ಬಾಲಕ- ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಅವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಕ್ರೀಡಾ ಉಡುಪನ್ನು ಕೊಡುಗೆಯಾಗಿ ನೀಡಿದರು. ಇದಕ್ಕೂ ಮೊದಲು ಶಾಸಕರು ವಿವಿಧ ಅನುದಾನಗಳಿಂದ ನಿರ್ಮಾಣಗೊಂಡಿರುವ ಪ್ರೌಢಶಾಲಾ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ಸದಸ್ಯ ಪ್ರವೀಣ್ ಗೌಡ, ಕಳಿಯ ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಆಸ್ಮಾ, ಸದಸ್ಯರಾದ ದಿವಾಕರ ಮೆದಿನ, ನಳಿನಿ, ಪ್ರೇಮ, ಕ್ಷೇತ್ರ ಶಿಕ್ಷಣಾ ಧಿಕಾರಿ ಎ. ಎನ್. ಗುರುಪ್ರಸಾದ್, ಕಳಿಯ ಸಿ.ಎ. ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು, ಗೇರುಕಟ್ಟೆ ಸ.ಪ.ಪೂ. ಕಾಲೇಜಿನ ಪ್ರಾಚಾರ್ಯೆ ಪೂರ್ಣಿಮಾ, ಉಪ ಪ್ರಾಚಾರ್ಯ ಕೆ.ಜಿ.ಲಕ್ಷ್ಮಣ ಶೆಟ್ಟಿ, ಉಜಿರೆ ಎಸ್‌ಡಿಎಂ ಕಾಲೇಜಿನ ದೆ„ಹಿಕ ಶಿಕ್ಷಣ ನಿರ್ದೇಶಕ ರಮೇಶ್, ಕ್ರೀಡಾಕೂಟ ನಿರ್ವಹಣಾ ಸಮಿತಿಯ ಕೆ. ಎಸ್. ಹರಿಪ್ರಸಾದ್, ಕಾರ್ಯದರ್ಶಿ ರಾಜೇಂದ್ರ ಕೃಷ್ಣ, ಕೋಶಾಧಿಕಾರಿ ತುಕಾರಾಮ ಪೂಜಾರಿ, ಉಪಾಧ್ಯಕ್ಷ ರತ್ನಾಕರ ಪೂಜಾರಿ, ಸಿಆರ್‌ಪಿ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಕ್ರೀಡಾಪಟು ಅಬ್ದುಲ್ ಬಾಸಿತ್ ಮತ್ತು ಬಳಗದವರು ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಕ್ರೀಡಾಜ್ಯೋತಿಯನ್ನು ತಂದರು. ಕ್ರೀಡಾಪಟು ಯಕ್ಷಿತ್ ಕೆ. ವಿ. ಪ್ರತಿಜ್ಞಾ ವಿಧಿ ಬೋಧಿಸಿದರು. ದೆ„ಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಯಶೋಧರ ಸುವರ್ಣ ಸ್ವಾಗತಿಸಿ, ಕ್ರೀಡಾಕೂಟದ ಸಂಚಾಲಕ ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಕ್ರೀಡೆ
ವಿದ್ಯಾರ್ಥಿಗಳಲ್ಲಿನ ಕ್ರೀಡೆಗಿರುವ ಒಲವನ್ನು ಪೋಷಕರು, ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಮಾಜ ಗುರುತಿಸಿ ಉತ್ತೇಜಿಸಿದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ಕ್ರೀಡೆಯ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಹೀಗಾಗಿ ಇಂದು ಬಹಳಷ್ಟು ಪ್ರಶಸ್ತಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರುತ್ತಲಿವೆ ಎಂದು ಶಾಸಕರು ಹೇಳಿದರು.