Advertisement

ಆ್ಯತ್ಲೀಟ್‌ಗಳಿಗೆ ಏಕಲವ್ಯ,ಕ್ರೀಡಾರತ್ನ ಪ್ರದಾನ: ಆಳ್ವಾಸ್‌ನ ಮೂವರಿಗೆ ಕ್ರೀಡಾರತ್ನ ಪ್ರಶಸ್ತಿ

11:31 PM Aug 29, 2022 | Team Udayavani |

ಬೆಂಗಳೂರು: ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಡೆಯಿತು. ಈ ವೇಳೆ ರಾಜ್ಯ ಸರಕಾರದಿಂದ ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ ಪ್ರಶಸ್ತಿಗಳನ್ನು ವಿವಿಧ ಕ್ರೀಡಾಪಟುಗಳಿಗೆ ನೀಡಲಾಯಿತು. ಜತೆಗೆ ಕ್ರೀಡಾ ಬೆಳವಣಿಗೆಗೆ ಅತ್ಯುತ್ತಮ ಕೊಡುಗೆ ನೀಡಿದ ಸಂಸ್ಥೆಗಳಿಗೂ ಪ್ರಶಸ್ತಿ ನೀಡಲಾಯಿತು.

Advertisement

ಈ ವೇಳೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಸರಕಾರ ಹಿಂದೆಂದಿಗಿಂತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಶೇ. 2ರಷ್ಟು ಮೀಸಲಾತಿ ನೀಡಲಾಗಿದೆ. 31 ಕಾರ್ಮಿಕ ಮಕ್ಕಳಿಗೆ ಉಚಿತವಾಗಿ ಪೈಲಟ್‌ ತರಬೇತಿ ಕೂಡ ನೀಡಲಾಗುತ್ತಿದೆ. ಶೀಘ್ರದಲ್ಲಿ ಕ್ರೀಡಾ ನೀತಿ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ, ಕೆಒಎ ಅಧ್ಯಕ್ಷ ಡಾ| ಕೆ.ಗೋವಿಂದರಾಜು, ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆಯುಕ್ತ ಡಾ| ಎಚ್‌.ಎನ್‌. ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

2021-22ನೇ ಸಾಲಿನ ಕ್ರೀಡಾಪೋಷಕ ಪ್ರಶಸ್ತಿ
ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್‌ ಟ್ರಸ್ಟ್‌ , ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ., ಆರ್‌.ವಿ.ತಾಂತ್ರಿಕ ಮಹಾವಿದ್ಯಾಲಯ, ಬಸವನಗುಡಿ ಅಕ್ವಾಟಿಕ್‌ ಸೆಂಟರ್‌, ದ್ರಾವಿಡ್‌ ಪಡುಕೋಣೆ ಅಕಾಡೆಮಿ, ಹೂಡಿ ನ್ಪೋರ್ಟ್ಸ್ ಕ್ಲಬ್‌, ಎಮಿನೆಂಟ್‌ ಶೂಟಿಂಗ್‌ ಹಬ್‌, ಧಾರವಾಡದ ಬಾಲ ಮಾರುತಿ ಸಂಸ್ಥೆ, ದಕ್ಷಿಣ ಕನ್ನಡದ ಬಾಲಾಂಜನೇಯ ಜಿಮ್ನಾಶಿಯಂ, ಮಂಡ್ಯದ ಪೀಪಲ್‌ ಎಜುಕೇಶನ್‌ ಟ್ರಸ್ಟ್‌.

ವಿವಿಧ ಕ್ರೀಡಾ ಪ್ರಶಸ್ತಿಗಳು+ನಗದು
ಇಬ್ಬರು ವಿಕಲಚೇತನ ಕ್ರೀಡಾಪಟುಗಳ ಸಹಿತ 44 ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಯಿತು. ಇದರಲ್ಲಿ 15 ಮಂದಿಗೆ ಏಕಲವ್ಯ (ತಲಾ 2 ಲಕ್ಷ ರೂ.), 14 ಮಂದಿಗೆ ಕ್ರೀಡಾರತ್ನ (ತಲಾ 1 ಲಕ್ಷ ರೂ.), 5 ಮಂದಿಗೆ ಜೀವಮಾನದ ಕ್ರೀಡಾಸಾಧನೆ (ತಲಾ 1.5 ಲಕ್ಷ ರೂ.), 10 ಸಂಸ್ಥೆಗಳಿಗೆ ಶ್ರೇಷ್ಠ ಕ್ರೀಡಾಪೋಷಕ ಪ್ರಶಸ್ತಿ ನೀಡಲಾಯಿತು (ತಲಾ
5 ಲಕ್ಷ ರೂ.).

Advertisement

1,000 ಮಂದಿಗೆ ತಲಾ 1 ಲಕ್ಷ ರೂ. ಕ್ರೀಡಾ ಪ್ರತಿಭಾ ಪುರಸ್ಕಾರ!
ಸಹಸ್ರ ಕ್ರೀಡಾ ಪ್ರತಿಭಾ ಪುರಸ್ಕಾರವನ್ನು ರಾಜ್ಯ ಸರಕಾರ ಮೂರು ವರ್ಷದ ಹಿಂದೆ ಜಾರಿ ಮಾಡಿತ್ತು. ಇದು ಒಂದು ಬಾರಿಯ ಯೋಜನೆಯಾಗಿ ಘೋಷಣೆಯಾಗಿರುವ ನಗದು ಬಹುಮಾನ. ಕಳೆದ ವರ್ಷ 250 ಮಂದಿಗೆ ಈ ಪುರಸ್ಕಾರ ಲಭಿಸಿತ್ತು. ಈ ವರ್ಷ 750 ಮಂದಿಗೆ ಪುರಸ್ಕಾರ ನೀಡಲಾಗಿದೆ. ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಐವರನ್ನು ಪುರಸ್ಕರಿಸಲಾಯಿತು. ಈ ಯೋಜನೆಯಡಿ ಆಯ್ಕೆಯಾದ ಪ್ರತಿಯೊಬ್ಬರಿಗೂ ತಲಾ 1 ಲಕ್ಷ ರೂ. ನೀಡಲಾಗಿದೆ.

ಆಳ್ವಾಸ್‌ನ ಮೂವರಿಗೆ ಕ್ರೀಡಾರತ್ನ ಪ್ರಶಸ್ತಿ
ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮೂವರು ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ 2020ನೇ ಸಾಲಿನ “ಕರ್ನಾಟಕ ಕ್ರೀಡಾರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಲ್ ಬ್ಯಾಡ್ಮಿಂಟನ್ ನಲ್ಲಿ ಕಿರಣ್‌ ಕುಮಾರ್‌, ಕುಸ್ತಿಯಲ್ಲಿ ಲಕ್ಷ್ಮೀ ರೆಡೇಕರ್‌ ಹಾಗೂ ಖೋಖೋದಲ್ಲಿ ದೀಕ್ಷಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಿರಣ್‌ಕುಮಾರ್‌
ರಾಜ್ಯ ತಂಡದ ನಾಯಕರಾಗಿರುವ ಕಿರಣ್‌ ಒಟ್ಟು 16 ಬಾರಿ ರಾಷ್ಟ್ರೀಯ ಸೀನಿಯರ್‌ ಹಾಗೂ ಫೆಡರೇಶನ್‌ ಕಪ್‌ ಚಾಂಪಿಯನ್‌ಶಿಪ್‌ ಗಳಲ್ಲಿ ಭಾಗವಹಿಸಿದ್ದಾರೆ. ರಾಷ್ಟ್ರೀಯ ಕೂಟಗಳಲ್ಲಿ 4 ಚಿನ್ನ, 4 ಬೆಳ್ಳಿ ಹಾಗೂ 8 ಕಂಚಿನ ಪದಕ ಪಡೆದಿದ್ದಾರೆ. ಅ. ಭಾ. ಅಂತರ್‌ ವಿ.ವಿ. ಕೂಟದ ಚಾಂಪಿಯನ್‌ ತಂಡದ ನಾಯಕರಾಗಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದು, 4 ಬಾರಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದಾರೆ.

ಲಕ್ಷ್ಮೀ ರೆಡೇಕರ್‌
ಒಟ್ಟು 5 ಬಾರಿ ರಾಷ್ಟ್ರೀಯ ಸೀನಿಯರ್‌ ಹಾಗೂ ಜೂನಿಯರ್‌ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ಅವರು ರಾಷ್ಟ್ರೀಯ ಜೂ. ಕೂಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ. 2 ಬಾರಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಹಾಗೂ 1 ಬಾರಿ ಖೇಲೋ ಇಂಡಿಯಾ ಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. 3 ಬಾರಿ ಅ. ಭಾ. ಅಂತರ್‌ ವಿ.ವಿ. ಕುಸ್ತಿಯಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದರು.

ದೀಕ್ಷಾ
ಒಟ್ಟು 8 ಬಾರಿ ರಾಷ್ಟ್ರೀಯ ಖೋ-ಖೋ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರುವ ದೀಕ್ಷಾ 4 ಬೆಳ್ಳಿ ಹಾಗೂ 4 ಕಂಚಿನ ಪದಕ ಗಳಿಸಿದ್ದಾರೆ. 4 ಬಾರಿ ಅ. ಭಾ. ಅಂತರ್‌ ವಿ.ವಿ. ಕೂಟಗಳಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ್ದು 1 ಚಿನ್ನ ಹಾಗೂ 1 ಬೆಳ್ಳಿಯ ಪದಕ ಪಡೆದಿದ್ದಾರೆ. ಭೋಪಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆಹ್ವಾನಿತ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಉಚಿತ ಶಿಕ್ಷಣದ ವಿದ್ಯಾರ್ಥಿಗಳಾಗಿರುವ ಪ್ರಶಸ್ತಿ ವಿಜೇತ ಕ್ರೀಡಾಪಟುಗಳ ಸಾಧನೆಗೆ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next