ತೆಕ್ಕಟ್ಟೆ: ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಹೊನಲು ಬೆಳಕಿನಲ್ಲಿ ಸಾಹಸ ಕ್ರೀಡೆಯೊಂದಿಗೆ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ. 16 ರವಿವಾರ ಸೇವಾ ಸಂಗಮ ಕ್ರೀಡಾ ಮೈದಾನದಲ್ಲಿ ನಡೆದವು. ಮಲ್ಲಕಂಬ ಪ್ರದರ್ಶನ, ನೆರೆದಿದ್ದ ಸಹಸ್ರಾರು ವೀಕ್ಷಕರಲ್ಲಿ ಕ್ಷಣ ಕ್ಷಣವೂ ಮುಂದೇನಾಗುತ್ತದೋ ಎನ್ನುವ ಕಾತುರತೆಯ ಭಾವ, ಉರಿಯುತ್ತಿರುವ ಬೆಂಕಿಯ ನಡುವೆ ಸಾಹಸ ಪ್ರದರ್ಶನದಲ್ಲಿ ತೊಡಗಿರುವ ಪುಟಾಣಿಗಳು ಹಾಗೂ ಮೈದಾನದ ಮಧ್ಯದಲ್ಲಿರಿಸಿದ ಮಲ್ಲ ಕಂಬದ ಮೇಲೆ ಸರಸರನೆ ಮೇಲೆರುವ ಬಾಲಕನೋರ್ವ ವಿವಿಧ ಆಯಾಮಗಳಲ್ಲಿ ಯೋಗಾಸನ ಪ್ರದರ್ಶನಗೈಯುವ ಸನ್ನಿವೇಶಗಳು ನೋಡುಗರ ಮನಸೂರೆಗೊಂಡವು. ಏಕ ಚಕ್ರ ಹಾಗೂ ಸೈಕಲ್ ಮೇಲೆ ಕಸರತ್ತು ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಸಾಕ್ಷಿಯಾಯಿತು.
ಎಲ್ಲ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಿಂದ ಸುಮಾರು 405 ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಮುಸ್ಸಂಜೆ ಘೋಷ್ ಸಹಿತ ಪಥಸಂಚಲನ ಪ್ರಾರಂಭಗೊಂಡು ಹೊನಲು ಬೆಳಕಿನಲ್ಲಿ ಶಿಶು ನೃತ್ಯ, ರಿಂಗ್ ನೃತ್ಯ, ದಕ್ಷಯಜ್ಞ, ಮಲ್ಲ ಕಂಬ ಪ್ರದರ್ಶನ, ಜಡೆ ಕೋಲಾಟ, ಸೀರೆ ನೃತ್ಯ, ಬೆಂಕಿಯಲ್ಲಿ ಸಾಹಸ, ದೀಪಾರತಿ, ಚಪ್ಪಾಳೆ ಡ್ರಿಲ್, ಯಕ್ಷಗಾನ ನೃತ್ಯಾಭಿನಯ, ಯೋಗಾಸನ, ದೊಂದಿ ಪ್ರದರ್ಶನ ಮತ್ತು ಯಕ್ಷ ರೂಪಕ, ಕೂಪಿಕಾ ಸಮತೋಲನ, ಶಾಲಾ ಸಾಮೂಹಿಕ ಪ್ರದರ್ಶನ, ವಂದೇ ಮಾತರಂ, ಧ್ವಜಾವತರಣ ಪ್ರದರ್ಶನಗೊಂಡವು.