ಬಳ್ಳಾರಿ: ಕರ್ತವ್ಯದಲ್ಲಿ ಉಂಟಾದ ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದ ಮುಕ್ತರಾಗಲು ಹಾಗೂ ಅತ್ಯಂತ ಕ್ರಿಯಾಶೀಲವಾಗಿ ಆಗಿ ಕಾರ್ಯಪ್ರವೃತ್ತರಾಗಲು ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಜಿಪಂ ಸಿಇಒ ಡಾ| ಕೆ.ವಿ. ರಾಜೇಂದ್ರ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದ ಎಲ್ಲಾ ಇಲಾಖೆಗಳೊಂದಿಗೆ ಹೋಲಿಸಿದಾಗ ಶಿಸ್ತು ಉಳಿಸಿಕೊಂಡಿರುವುದು ಪೊಲೀಸ್ ಇಲಾಖೆಯಲ್ಲಿ ಮಾತ್ರ. ಸಮವಸ್ತ್ರದಿಂದ ಹಿಡಿದು ಎಲ್ಲ ವಿಚಾರಗಳಲ್ಲಿ ಶಿಸ್ತು ಅಳವಡಿಸಿಕೊಂಡಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿ ಇತರರಿಗೆ ಮಾದರಿ ಎಂದರು.
ಸಾಮಾಜಿಕ ಬದಲಾವಣೆ ಆಗುತ್ತಿರುವ ಈ ಸಂದರ್ಭದಲ್ಲಿ ಸಮಾಜದಲ್ಲಿ ಶಿಸ್ತಿನ ಕೊರತೆ ಸರಿಪಡಿಸಲು ಪೊಲೀಸರ ಕೆಲಸ ಮಹತ್ವದ್ದಾಗಿದೆ. ಸಾಮಾಜಿಕ ಅಸಮತೋಲನ, ಕಾನೂನು ಸಮಸ್ಯೆ, ಸಿಬ್ಬಂದಿಗಳ ರಜೆ ಹೀಗೆ ಅನೇಕ ಸಮಸ್ಯೆಗಳಿದ್ದರೂ ಕೆಲಸ ನಿರ್ವಹಿಸುತ್ತಾರೆ. ಕರ್ತವ್ಯದಲ್ಲಿ ಉಂಟಾದ ಒತ್ತಡಗಳಿಂದ ಮುಕ್ತರಾಗಲು ಇಂತಹ ಕ್ರೀಡಾಕೂಟಗಳ ಅವಶ್ಯಕತೆ ಇದೆ ಎಂದು ಹೇಳಿದರು.
ಪೊಲೀಸ್ ಮತ್ತು ಬೇರೆ ಇಲಾಖೆಗಳ ನಡುವೆ ಸಮನ್ವಯ ಬಹಳ ಮುಖ್ಯವಾಗಿದೆ. ಜಿಲ್ಲೆಯನ್ನು ಬಯಲು ಶೌಚಮುಕ್ತ ಮಾಡಲು ಪೊಲೀಸ್ ಇಲಾಖೆಯ ಸಹಕಾರವೂ ಹೆಚ್ಚಿದೆ. ಬೇರೆ ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡಲು ಪೊಲೀಸರ ಸಹಕಾರ ಅವಶ್ಯ ಎಂದರು.
ಪುರುಷರ ವಿಭಾಗದ 1,500 ಮೀಟರ್ ಓಟದಲ್ಲಿ ಶೌರ್ಯ ತಂಡದಿಂದ ಆನಂದ ಪ್ರಥಮ, ಕೋಟೆ ತಂಡದಿಂದ ರಾಜು ದ್ವಿತೀಯ ಸ್ಥಾನ ಪಡೆದರು. ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಎಸಿಬಿ ಎಸ್ಪಿ ಪ್ರಸ್ನನ ದೇಸಾಯಿ ಮತ್ತಿತರರು ಇದ್ದರು.