ಯಾದಗಿರಿ: ಪ್ರತಿಯೊಬ್ಬರೂ ದೈಹಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯ. ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುವುದಲ್ಲದೇ ಮಾನಸಿಕವಾಗಿ ಶಕ್ತರಾಗುತ್ತೇವೆ ಎಂದು ಯಾದಗಿರಿ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ದೇವರಾಜ ನಾಯಕ ಹೇಳಿದರು.
ವಡಗೇರಾ ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಕ್ರಿಕೆಟ್ ಟೂರ್ನಾಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಸೊಗಡಿನ ಕ್ರೀಡೆಗಳು ಅಳಿವಿನಂಚಿನಲ್ಲಿವೆ. ಗ್ರಾಮೀಣ ಭಾಗದಲ್ಲಿ ಕ್ರೀಡೆ ಆಯೋಜಿಸುವ ಮೂಲಕ ಶಕ್ತಿ ತುಂಬಬೇಕು. ಗ್ರಾಮೀಣ ಕೀಡೆಗಳು ಮನುಷ್ಯನಿಗೆ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ. ಕ್ರೀಡೆ ಆಡುವುದರಿಂದ ಮಕ್ಕಳಲ್ಲಿ ಹೊಂದಾಣಿಕೆ ಮನೋಭಾವ, ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಮನುಷ್ಯ ಆರೋಗ್ಯವಾಗಿರಲು ಕ್ರೀಡೆ ಅವಶ್ಯ. ಯುವ ಜನತೆ ಬುದ್ಧಿವಂತಿಕೆಯನ್ನು ಉತ್ತಮ ಜೀವನದೆಡೆ ಹಾಗೂ ಸಮಾಜದ ಅಭಿವೃದ್ಧಿಯೆಡೆಗೆ ಬಳಸದೇ ಅನವಶ್ಯಕವಾಗಿ ಕಾಲಹರಣ ಮಾಡುತ್ತಿದ್ದಾರೆ. ಯುವ ಸಂಪತ್ತು ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು. ಉತ್ತಮ ಶಿಕ್ಷಣ ಪಡೆಯುವ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಈ ವೇಳೆ ಚನ್ನಯ್ಯ ಸ್ವಾಮಿ, ಗುರುಲಿಂಗಯ್ಯ ಸ್ವಾಮಿ, ವಿನೋದ ಗುರಿಕಾರ, ಬಸಣ್ಣಗೌಡ ಪದ್ದಿ, ಶರಣಪ್ಪ ಜಂಬೆ, ಬಸುಗೌಡ ಮಾಲಿಪಾಟೀಲ್, ಸಿದಣ್ಣಗೌಡ ಪೊಲೀಸ್ ಪಾಟೀಲ, ಎಜಾಜ್ ಅಹ್ಮದ್, ಬೆಳಗೇರಿ, ಶರಣಪ್ಪ ಮಾಲಳ್ಳಿ, ಬಸರೆಡ್ಡಿಗೌಡ ಹೊನಸಾನಿ ಇದ್ದರು.