ಅಫಜಲಪುರ: ತಾಲೂಕಿನ ಬಡದಾಳ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಹದಗೆಟ್ಟು ಕೆಸರು ಗದ್ದೆಯಂತಾಗಿದ್ದು ಗ್ರಾಮಸ್ಥರು ನಿತ್ಯ ನರಕ ಯಾತನೆ ಅನುಭವಿಸುವಂತೆ ಆಗಿದೆ. ತಾಲೂಕಿನ ಬಡದಾಳ ಗ್ರಾಮ ಜಿಲ್ಲಾ ಪಂಚಾಯಿತಿ ಮತಕ್ಷೇತ್ರವಾಗಿದೆ. ಅಲ್ಲದೇ ಸ್ಥಳೀಯವಾಗಿಯೇ ಗ್ರಾ.ಪಂ ಕಚೇರಿಯು ಇದೆ. ಆದರೂ ಈ ಗ್ರಾಮದಲ್ಲಿನ ರಸ್ತೆ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.
ಬಡದಾಳದಿಂದ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ 4 ಕಿ.ಮಿ ರಸ್ತೆ ಹದಗೆಟ್ಟು ಎಲ್ಲಿ ನೋಡಿದರೂ ತಗ್ಗು ದಿಣ್ಣೆಗಳು ಬಿದ್ದು ಸುಗಮ ಸಂಚಾರಕ್ಕೆ ಸಂಚಕಾರ ಬಂದಿದೆ. ಬಡದಾಳದಿಂದ ಚಿಂಚೋಳಿ ಗ್ರಾಮಕ್ಕೆ ಸಂಪರ್ಕಿಸುವ 4 ಕಿ.ಮಿ ರಸ್ತೆ ಕೆಸರು ಗದ್ದೆಯಂತಾಗಿದೆ. ಬಡದಾಳದಿಂದ ರೇವೂರ(ಬಿ) ವರೆಗಿನ 5 ಕಿ.ಮಿ ರಸ್ತೆ ಕೆಸರು ಗದ್ದೆಯಂತಾಗಿದೆ.
ಅಲ್ಲದೆ ಬಡದಾಳ ಅರ್ಜುಣಗಿ ವರೆಗಿನ 4 ಕಿ.ಮೀ ರಸ್ತೆ ಕೂಡ ಕೆಸರು ಗದ್ದೆಯಂತಾಗಿ ಯಾವುದೇ ವಾಹನಗಳು ಸುಗಮವಾಗಿ ಸಂಚಾರ ಮಾಡಲಾಗುತ್ತಿಲ್ಲ. ಗ್ರಾಮದಲ್ಲಿ ಹೆರಿಗೆ, ತುರ್ತು ಸಂದರ್ಭದಂತ ಪರಿಸ್ಥಿತಿಯಲ್ಲಿ ಸಮಯಾನುಸಾರ ಪಟ್ಟಣಕ್ಕೆ ತಲುಪಲಾಗುತ್ತಿಲ್ಲ. ಅನೇಕ ಸಲ ತುರ್ತು ಪರಿಸ್ಥಿತಿಗಳಂತ ಸಂದರ್ಭದಲ್ಲಿ ರೋಗಿಗಳು ಪ್ರಾಣಾಪಾಯದಿಂದ ಪಾರಾದ ಘಟನೆಗಳು ನಡೆದಿವೆ.
30 ವರ್ಷದಿಂದ ರಸ್ತೆ ಕಾಣದ ಹೊಸ ಬಡಾವಣೆ; ಗ್ರಾಮದ ಹೊಸ ಬಡಾವಣೆ ನಿರ್ಮಾಣವಾಗಿ 30 ವರ್ಷ ಗತಿಸಿದರೂ ಇದುವರೆಗೂ ಬಡಾವಣೆಯಲ್ಲಿ ಸಿಸಿ ರಸ್ತೆಗಳಿಲ್ಲದೆ ಬಡಾವಣೆ ನಿವಾಸಿಗಳು ಪರಿತಪಿಸುವಂತಾಗಿದೆ. ತಾಲೂಕಿನ ಅನೇಕ ಹಳ್ಳಿ ರಸ್ತೆಗಳಿಗಿಲ್ಲ ಡಾಂಬರ್ ಭಾಗ್ಯ, ಬಡದಾಳ ಗ್ರಾಮದ ಎಲ್ಲ ಸಂಪರ್ಕ ರಸ್ತೆಗಳು ಸೇರಿದಂತೆ ತಾಲೂಕಿನ ಚಿಂಚೋಳಿ ಹಳಿಯಾಳ, ಬಂದರವಾಡ, ಭೋಸಗಾ ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ರಸ್ತೆಗಳಿಗೆ ಡಾಂಬರ್ ಭಾಗ್ಯವಿಲ್ಲದೆ ಗ್ರಾಮಸ್ಥರು, ವಾಹನ ಸವಾರರು ಪರದಾಡುವಂತಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಜೆಎಂಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆದಿದೆ. ಬಳೂರ್ಗಿ ಬಡದಾಳ ರಸ್ತೆಗೆ ಅನುದಾನ ಇಡಲಾಗಿದೆ. ಅನುದಾನ ತರುವಕೆಲಸ ನಾನು ಮಾಡುತ್ತೇನೆ. ಗ್ರಾಮಸ್ಥರ ಸಹಕಾರ ಇದ್ದು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅವುಗಳನ್ನು ಅನುಷ್ಠಾನಕ್ಕೆ ತರುವಕೆಲಸ ಮಾಡಿದರೆ ಅಭಿವೃದ್ಧಿ ಕುಂಠಿತವಾಗುವುದಿಲ್ಲ.
ಎಂ.ವೈ. ಪಾಟೀಲ, ಶಾಸಕ
*ಮಲ್ಲಿಕಾರ್ಜುನ ಹಿರೇಮಠ