Advertisement
ಭುವನೇಂದ್ರ ಕಲ್ಯಾಣ ಮಂಟಪದ ಕಡೆಯಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ರೈಲ್ವೇ ಸ್ಟೇಷನ್ ರಸ್ತೆ ಬದಿಯಲ್ಲಿ ಹಾದು ಹೋಗುವ ಚರಂಡಿಯಲ್ಲಿ ತ್ಯಾಜ್ಯಗಳು ತುಂಬಿಕೊಂಡು ಹರಿಯುವ ಕೊಳಚೆ ನೀರಿಗೆ ತಡೆಯಾಗಿದೆ. ನೆಲ್ಲಿಕಟ್ಟೆ ಜಂಕ್ಷನ್ ವ್ಯಾಪ್ತಿಯಲ್ಲಿ ಚರಂಡಿಯಲ್ಲೇ ಅಳವಡಿಸಲಾಗಿರುವ ನೀರು ಸರಬರಾಜು ಯೋಜನೆಯ ಪೈಪ್ ಒಡೆದು ಹೋದ ಪರಿಣಾಮ ಅದರೊಳಗೆ ಚರಂಡಿಯಲ್ಲಿ ಹಾದು ಹೋಗುವ ಕೊಳಚೆ ನೀರು ತುಂಬಿಕೊಂಡು ನೆಲ್ಲಿಕಟ್ಟೆ ಪರಿಸರದ ಹಲವು ಮನೆಗಳಿಗೆ ನಾಲ್ಕು ದಿನಗಳಿಂದ ಸರಬರಾಜಾಗಿತ್ತು. ದುರ್ವಾಸನೆಯುಕ್ತ ಈ ಮಲೀನ ನೀರು ಬಳಕೆಗೆ ಅಯೋಗ್ಯವಾಗಿದೆ.
ಗುರುವಾರ ಸ್ಥಳೀಯ ನಗರಸಭಾ ಸದಸ್ಯ ಶಕ್ತಿ ಸಿನ್ಹಾ ಅವರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸುವ ನಗರಸಭೆಯ ಸಿಬಂದಿ ಸ್ಥಳಕ್ಕೆ ಆಗಮಿಸಿ ಚರಂಡಿಗೆ ಅಳವಡಿಸಲಾಗಿದ್ದ ಸ್ಲಾಬ್‌ಗಳನ್ನು ತೆರದು ನೋಡಿದಾಗ ಚರಂಡಿಯಲ್ಲಿ ಪೂರ್ತಿಯಾಗಿ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ತ್ಯಾಜ್ಯಗಳು ತುಂಬಿಕೊಂಡು ಹರಿದು ಹೋಗುವ ಕೊಳಚೆ ನೀರಿಗೆ ತಡೆಯುಂಟಾಗಿರುವುದು ಕಂಡು ಬಂದಿದೆ. ನಗರಸಭೆಯ ಸಿಬಂದಿ ಚರಂಡಿಯಲ್ಲಿ ತುಂಬಿಕೊಂಡಿದ್ದ ಬಾಟಲಿಗಳನ್ನು ಮತ್ತು ತ್ಯಾಜ್ಯಗಳನ್ನು ತೆರವುಗೊಳಿಸಿ ಪರಿಶೀಲಿಸಿದಾಗ, ಚರಂಡಿಯೊಳಗೆ ಅಳವಡಿಸಲಾಗಿದ್ದ ನೀರು ಸರಬರಾಜು ಯೋಜನೆಯ ಪೈಪ್ ಹೊಡೆದು ಹೋಗಿರುವುದು ಹಾಗೂ ಹೊಡೆದು ಹೋದ ಪೈಪಿನೊಳಗೆ ಚರಂಡಿಯ ಕೊಳಚೆ ನೀರು ಸೇರಿಕೊಂಡಿರುವುದು ಕಂಡು ಬಂದಿತ್ತು.
Related Articles
ನೆಲ್ಲಿಕಟ್ಟೆ ಪರಿಸರದಲ್ಲಿ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸಮಸ್ಯೆ ಪರಿ ಹರಿಸುವ ಕೆಲಸ ನಡೆಸ ಲಾಗುತ್ತಿದೆ. ಚರಂಡಿಯ ಸ್ಲಾಬ್ ಗಳನ್ನು ತೆಗೆದು ಸಮಸ್ಯೆಯ ಕಾರಣ ಹುಡುಕಲಾಗಿದೆ. ಇದೀಗ ಚರಂಡಿ ಯೊಳಗಿದ್ದ ಕುಡಿಯುವ ನೀರಿನ ಯೋಜನೆಯ ಪೈಪನ್ನು ತುಂಡರಿಸಿ ಬ್ಲಾಕ್ ಮಾಡಿ, ಆ ಭಾಗದ 5 ಮನೆಗಳಿಗೆ ಕೊಳವೆ ಬಾವಿಯಿಂದ ಹೊಸಪೈಪ್ ಅಳವಡಿಸಿ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಗರಸಭೆಯ ಆಯುಕ್ತೆ ರೂಪಾ ಟಿ. ಶೆಟ್ಟಿ ಅವರು ತಿಳಿಸಿದ್ದಾರೆ.
Advertisement