Advertisement

Mangaluru: ನೇತ್ರಾವತಿ-ಫಲ್ಗುಣಿ ನದಿಯೊಡಲಿಗೆ ಸೇರುತ್ತಿದೆ ಕೊಳಚೆ ನೀರು!

04:01 PM Apr 02, 2024 | Team Udayavani |

ಮಹಾನಗರ: ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೂರ್ಯನ ಶಾಖದಿಂದಾಗಿ ಜಲ ಮೂಲಗಳೆಲ್ಲ ಬತ್ತಿ ಹೋಗುತ್ತಿದೆ. ಇರುವ ಜಲ ಮೂಲಗಳನ್ನಾದರೂ ಉಳಿಸಿಕೊಳ್ಳುವುದು ಅಗತ್ಯ. ಆದರೆ ನಗರ ವ್ಯಾಪ್ತಿಯಲ್ಲಿ ಹರಿದು ಹೋಗುವ ನೇತ್ರಾವತಿ- ಫಲ್ಗುಣಿ ನದಿಗಳಿಗೆ ನಗರ ರಾಜಕಾಲುವೆಗಳಿಂದಲೇ ನೇರವಾಗಿ ಕೊಳಚೆ ನೀರು ಸೇರುತ್ತಿರುವುದಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.

Advertisement

ವಾಸನೆಯುಕ್ತ ನೀರು
ಸುಲ್ತಾನ್‌ ಬತ್ತೇರಿ: ನಗರದ ಪ್ರಮುಖ ಪ್ರವಾಸಿ ತಾಣ ವಾಗಿದ್ದು, ಇಲ್ಲಿಯೂ ತೋಡಿನ ಮೂಲಕ ಹರಿದು ಬರುವ ಕೊಳಚೆ, ವಾಸನೆ ಯುಕ್ತ ನೀರು ನೇರವಾಗಿ ಫಲ್ಗುಣಿ ನದಿ ಸೇರುತ್ತಿದೆ. ಕೆಸರು ನೀರಿನಲ್ಲಿರುವ ಮೀನು, ಹುಳ ಹುಪ್ಪಟೆಗಳ ತಿನ್ನಲು ಹದ್ದುಗಳು, ಕಾಗೆಗಳ ದಂಡೇ ಇಲ್ಲಿ ಕಂಡುಬರುತ್ತದೆ.

ಕಪ್ಪು ಬಣ್ಣಕ್ಕೆ ತಿರುಗಿದ ನೀರು
ಕೊಂಚಾಡಿ, ಮಾಲೆಮಾರ್‌, ಕೊಟ್ಟಾರ ಚೌಕಿ, ಬಂಗ್ರ ಕೂಳೂರು ಮೂಲಕ ರಾಜಕಾಲುವೆಯಲ್ಲಿ ಹರಿದು ಬರುವ ಕೊಳಚೆ ನೀರು ದಂಬೆಲ್‌ ಪಡ್ಡೋಡಿ ಬಳಿ ನೇರವಾಗಿ ಫಲ್ಗುಣಿ ನದಿಯನ್ನು ಸೇರುತ್ತಿದೆ. ಇಲ್ಲಿಯೂ ವಾಸನೆಯುಕ್ತ ಕಪ್ಪು ಬಣ್ಣದ ನೀರು ನದಿಯೊಡಲು ಸೇರುತ್ತಿದೆ.

Advertisement

ಮರವೂರು: ಬಿಳಿ ನೊರೆಯುಕ್ತ ಕಲುಷಿತ ನೀರು
ಪಚ್ಚನಾಡಿಯ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಶುದ್ಧೀಕರಿಸಿದ ನೀರನ್ನು ಬಿಡಲು ಮರವೂರಿನ ಫಲ್ಗುಣಿ ನದಿ ಅಣೆಕಟ್ಟಿನ ಕೆಳಭಾಗದ ವರೆಗೆ ಅಳವಡಿಸಿರುವ ಕೊಳವೆಯಲ್ಲಿ ಶುದ್ಧ ನೀರಿನ ಬದಲು ಬಿಳಿ ನೊರೆಯುಕ್ತ ಕಲುಷಿತ ನೀರು ಹರಿದು ಬಂದು ಫಲ್ಗುಣಿಯ ಒಡಲು ಸೇರುತ್ತಿದೆ. ಜತೆಗೆ ಘಲ್ಗುಣಿಯ ನೀರು ಈಗಾಗಲೇ ಕೈಗಾರಿಕೆಗಳ ಕೊಳಚೆ ನೀರು ಸೇರಿ ಕಪ್ಪಾಗಿರುವುದು ಆತಂಕ ಸೃಷ್ಟಿಸುತ್ತಿದೆ.

ಜ‌ಪ್ಪಿನಮೊಗರು: ನೇತ್ರಾವತಿ ಒಡಲಿಗೆ ಸೇರುತ್ತಿದೆ ಕೊಳಚೆ
ಪಂಪ್‌ವೆಲ್‌, ಎಕ್ಕೂರು ಮೂಲಕವಾಗಿ ಹರಿದು ಬರುವ ರಾಜಕಾಲುವೆಯಲ್ಲಿ ಕಪ್ಪು ಬಣ್ಣದ ವಾಸನೆಯುಕ್ತ ಕೊಳಚೆ ನೀರು ಜಪ್ಪಿನಮೊಗರಿನ ಸೇತುವೆ ಬಳಿ ನೇತ್ರಾವತಿ ನದಿ ಸೇರುತ್ತಿರು ವುದು ಕಂಡು ಬರುತ್ತದೆ. ನೇತ್ರಾವತಿ ಒಡಲಿಗೆ ಈ ಮೂಲಕ ಕೊಳಚೆ ನೀರು ಸೇರುತ್ತಿದೆ.

ಜಪ್ಪು ಮುಳಿಹಿತ್ಲು ಒಳಚರಂಡಿ ವ್ಯವಸ್ಥೆ ಇಲ್ಲದೆ ಸಮಸ್ಯೆ
ಜಪ್ಪು, ಮುಳಿಹಿತ್ಲು, ಶೆಟ್ಟಿಬೆಟ್ಟು, ಆದರ್ಶನಗರ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ಮನೆ- ವಸತಿ ಸಮುಚ್ಚಯಗಳ ತ್ಯಾಜ್ಯ, ಕೋಳಚೆ ನೀರು ತೆರೆದ ಚರಂಡಿ, ರಾಜಕಾಲುವೆಗಳಲ್ಲಿ ಹರಿದು ನೇರವಾಗಿ ನೇತ್ರಾವತಿ ಒಡಲು ಸೇರುತ್ತಿದೆ.

ಪೋಟೋ ನ್ಯೂಸ್:‌ ಭರತ್‌ ಶೆಟ್ಟಿಗಾರ್‌, ಚಿತ್ರ- ಸತೀಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next