Advertisement
ಏಕಾದಶಿಯಂತೆ ನಿರ್ಜಲ ಉಪವಾಸದ ವ್ರತಾಚರಣೆ ಮಾಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಂಗಳವಾರ ಮುಂಜಾ ವ ಪೂಜೆಗಳನ್ನು ನಡೆಸಿದರು. ಮುಖ್ಯಪ್ರಾಣ ದೇವರಿಗೆ ಉಂಡೆ ಚಕ್ಕುಲಿ ಸಮರ್ಪಣೆಯ ಬಳಿಕ ಪಲ್ಲಪೂಜೆಯಾಗಿ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಅನ್ನಪ್ರಸಾದ ಸ್ವೀಕಾರಕ್ಕೆ ಭಕ್ತ ಸಮೂಹ ಕಿಕ್ಕಿರಿದು ತುಂಬಿತ್ತು.
ರಥಬೀದಿಯ ಸುತ್ತ ನೆಟ್ಟಿದ್ದ 13 ಗುರ್ಜಿಗಳ ಮಧ್ಯದಲ್ಲಿ ಮೊಸರು ತುಂಬಿದ ಕುಡಿಕೆ ಇರಿಸಲಾಗಿತ್ತು. ಮೊದಲಿಗೆ ಗೋವಳರು ಆಕರ್ಷಕ ವೇಷ ಧರಿಸಿ, ಕೇಕೆ ಹಾಕುತ್ತ ಶ್ರೀಕೃಷ್ಣ ಮಠದ ಎದುರು ನೆಟ್ಟ ಗುರ್ಜಿಯಲ್ಲಿನ ಮೊಸರು ಕುಡಿಕೆಯನ್ನು ಮೊದಲು ಒಡೆದರು. ಬಳಿಕ ಮೊಸರಿನ ಕುಡಿಕೆಗಳನ್ನು ಒಡೆಯಲಾಯಿತು. ಗೋವಳರು ಕೈಯಲ್ಲಿ ಕೋಲು ಹಿಡಿದು ಮೊಸರು ಕುಡಿಕೆಗೆ ಕುಟ್ಟುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನ ಮಾಡಲಾಯಿತು.
ವೇಷಧಾರಿಗಳ ಸಂಭ್ರಮ ಹುಲಿ ವೇಷ, ಪುಡಿವೇಷಗಳು ಅಷ್ಟಮಿ, ವಿಟ್ಲ ಪಿಂಡಿಯ ಇನ್ನೊಂದು ಆಕರ್ಷಣೆ. ಮಹಿಳಾ ಹುಲಿಗಳು, ಹುಲಿವೇಷ, ರಕ್ಕಸ ವೇಷ, ಸಾಮಾಜಿಕ ಕಳಕಳಿಯಿಂದ ತೊಟ್ಟ ವಿಶೇಷ ಹಾಲಿವುಡ್ ಸಿನೆಮಾದ ಕಾಲ್ಪನಿಕ ಪಾತ್ರದ ವೇಷಗಳು ಗಮನ ಸೆಳೆದವು.
Related Articles
ರಥಬೀದಿಯಲ್ಲಿ ಅಳವಡಿಸಿರುವ ಪ್ರಮುಖ ಎರಡು ವೇದಿಕೆಯಲ್ಲಿ ನಡೆದ ಹುಲಿವೇಷ ಸಹಿತ ವಿವಿಧ ವೇಷಗಳ ಕುಣಿತವನ್ನು ಶ್ರೀಪಾದರು ವೀಕ್ಷಿಸಿದರು. ಶೀರೂರು ಮಠದಿಂದ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಪರ್ಯಾಯ ಶ್ರೀಪಾ ದರು, ಭಂಡಾರಕೇರಿ ಶ್ರೀಪಾದರ ಜತೆಗೆ ಶ್ರೀ ಕೃಷ್ಣಾಪುರದ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕುಳಿತು ಹುಲಿವೇಷ ವೀಕ್ಷಿಸಿದರು. ಶಾಸಕ ಯಶ್‌ಪಾಲ್ ಸುವರ್ಣ ಇದ್ದರು. ಶ್ರೀಪಾದರು ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಹುಲಿವೇಷ ಸ್ಪರ್ಧೆಯನ್ನು ವೀಕ್ಷಿಸಿದರು.
Advertisement
ರಥವೇರಿದ ಮೃಣ್ಮಯ ಮೂರ್ತಿಶ್ರೀಕೃಷ್ಣನ ಸನ್ನಿಧಿಯಲ್ಲಿ ಮೃಣ್ಮಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಸರ್ವಾಲಂಕೃತ ಪಲ್ಲಕ್ಕಿಯಲ್ಲಿ ಮೂರ್ತಿ ಯನ್ನು ರಥಬೀದಿಗೆ ತಂದು ಚಿನ್ನದ ರಥ ದಲ್ಲಿ ಕೂರಿಸಲಾಯಿತು. ಜತೆಗೆ ಅನಂತೇಶ್ವರ ಮತ್ತು ಚಂದ್ರ ಮೌಳೀಶ್ವರ ದೇವರ ಉತ್ಸವ ಮೂರ್ತಿಗಳೂ ಚಿನ್ನ ಮತ್ತು ನವರತ್ನ ರಥದಲ್ಲಿ ಸಾಗಿದವು. ಅಪರಾಹ್ನ 3.30ಕ್ಕೆ ಪರ್ಯಾಯ ಶ್ರೀಪಾದರ ಜತೆಗೆ ಭಂಡಾರಕೇರಿ ಮಠಾಧೀ ಶರಾದ ಶ್ರೀ ವಿದ್ಯೆàಶತೀರ್ಥ ಶ್ರೀಪಾದರು ರಥ ಎಳೆದು ಉತ್ಸವಕ್ಕೆ ಚಾಲನೆ ನೀಡಿದರು. ಭಕ್ತರಿಗೆ ಉಂಡೆ, ಚಕ್ಕುಲಿ ಸಹಿತ ಪ್ರಸಾದವನ್ನು ನೀಡಿದರು.
ಮಲ್ಲಕಂಬ ಪ್ರದರ್ಶನ
ಹುಬ್ಬಳ್ಳಿಯ ವೀರಸಾವರ್ಕರ್ ಬಳಗದ ಸದಸ್ಯರು ರಥಬೀದಿಯ ವೇದಿಕೆಯಲ್ಲಿ ಮಲ್ಲಕಂಬ ವಿಶೇಷ ಪ್ರದರ್ಶನ ನೀಡಿದರು. ಹಲವು ಕಸರತ್ತುಗಳನ್ನು ಶ್ರೀಪಾದರ ಸಮ್ಮುಖದಲ್ಲಿ ನಡೆಸಿ ಮೆಚ್ಚುಗೆ ಗಳಿಸಿದರು. ಸೇರಿದ್ದ ಭಕ್ತರು ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಕಲ್ಸಂಕ ವೃತ್ತ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ತೆಂಕಪೇಟೆ, ಬಡಗುಪೇಟೆ, ವಿದ್ಯೋದಯ ಶಾಲೆಯ ಬಳಿ ಅಡ್ಡಾದಿಡ್ಡಿ ವಾಹನಗಳನ್ನು ನಿಲುಗಡೆ ಮಾಡಿದ ಪರಿಣಾಮ ಸುಗಮ ಸಂಚಾರಕ್ಕೆ ಅನನುಕೂಲವಾಯಿತು. ಟ್ರಾಫಿಕ್ ಪೊಲೀಸರು ಸಂಚಾರ ದಟ್ಟನೆ ನಿಯಂತ್ರಣಕ್ಕೆ ಹರಸಾಹಸ ಪಟ್ಟರೂ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ ಪರಿಣಾಮ ಹಲವಾರು ಮಂದಿ ಪರ್ಯಾಯ ರಸ್ತೆಯನ್ನು ಅವಲಂಬಿಸಬೇಕಾಯಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಪ್ರಯುಕ್ತ ನಗರದೆಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಒಬ್ಬರು ಡಿವೈಎಸ್‌ಪಿ, 4 ಮಂದಿ ಇನ್‌ಸ್ಪೆಕ್ಟರ್‌ಗಳು, 200 ಮಂದಿ ಪೊಲೀಸ್ ಸಿಬಂದಿ, 50 ಮಂದಿ ಹೋಂ ಗಾರ್ಡ್‌ಗಳು, 4 ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, 3 ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಶ್ವಾನದಳದ ಮೂಲಕ ತಪಾಸಣೆ ನಡೆಸಲಾಯಿತು. ಸಿಸಿಟಿವಿ ಕೆಮರಾ ಅಳವಡಿಕೆ
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ರಥಬೀದಿ ಸಹಿತ ಶ್ರೀಕೃಷ್ಣ ಮಠದ ಆಸುಪಾಸು ಪರಿಸರದಲ್ಲಿ 15ಕ್ಕೂ ಅಧಿಕ ಸಿಸಿಟಿವಿ ಅಳವಡಿಕೆ ಮಾಡಲಾಗಿತ್ತು. ಪೊಲೀಸರು ವಿವಿಧೆಡೆ ಮಫ್ತಿಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂತು.
ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಹುಲಿವೇಷ ತಂಡಗಳಿದ್ದು, 50ಕ್ಕೂ ಅಧಿಕ ಹುಲಿವೇಷಧಾರಿಗಳ ತಂಡ ಅಷ್ಟಮಿಯ ಸಂಭ್ರ ಮದಲ್ಲಿ ಪಾಲ್ಗೊಂಡು ಜನರನ್ನು ರಂಜಿಸಿವೆ. ಪ್ರಮುಖ ಮಳಿಗೆಗಳ ಆವರಣದಲ್ಲಿ ಹುಲಿ ಕುಣಿತ ಪ್ರದರ್ಶಿಸಲಾಯಿತು. ಪ್ರಮುಖ ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಹುಲಿವೇಷಧಾರಿಗಳ ಕುಣಿತ, ಘರ್ಜನೆ ಜನರ ಕಣ್ಮನ ಸೆಳೆಯಿತು. ಯುವತಿಯರು, ಮಹಿಳೆಯರು, ಮಕ್ಕಳು ಹುಲಿವೇಷಧಾರಿಗಳ ಜತೆಗೆ ಹೆಜ್ಜೆ ಹಾಕಿದರು. ವಡಭಾಂಡೇಶ್ವರದಲ್ಲೂ ವಿಟ್ಲಪಿಂಡಿ
ಮಲ್ಪೆ: ಉಡುಪಿ ಶ್ರೀಕೃಷ್ಣಮಠದಲ್ಲಿ ಮೊಸರುಕುಡಿಕೆ ಉತ್ಸವ ನಡೆದರೆ ಇತ್ತ ವಡಭಾಂಡೇಶ್ವರ ಬಲರಾಮನ ನಾಡಿನಲ್ಲೂ ವಿಟ್ಲಪಿಂಡಿ ಮಹೋತ್ಸವವು ರವಿವಾರ ಮಧ್ಯಾಹ್ನ ಸಂಭ್ರಮ ಸಡಗರದಿಂದ ಜರಗಿತು. ವಡಭಾಂಡೇಶ್ವರ ಭಕ್ತವೃಂದ ಈ ಬಾರಿ 20ನೇ ವರ್ಷದ ವಿಟ್ಲಪಿಂಡಿ ಮಹೋತ್ಸವವನ್ನು ಏರ್ಪಡಿಸಿತ್ತು. ಪುಟಾಣಿಗಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆಯು ಜರಗಿತು. ಸಾರ್ವಜನಿಕ ಪುರುಷ ಮತ್ತು ಮಹಿಳೆಯರಿಗೆ ಮಡಿಕೆ ಹೊಡೆಯುವ ಸ್ಪರ್ಧೆ ನಡೆಸಲಾಗಿತ್ತು. ಮಾನವ ಗೋಪುರ ರೋಮಾಂಚನವಾಗಿದ್ದು, 18 ಜನರ ತಂಡ ಪಿರಮಿಡ್ ರಚಿಸುವ ಮೂಲಕ ಎತ್ತರದಲ್ಲಿ ತೂಗುಹಾಕಲಾಗಿದ್ದ ಮೊಸರುಕುಡಿಕೆಯನ್ನು ಒಡೆದು ಸಂಭ್ರಮಿಸಿದರು. ಚಿತ್ರ: ಆಸ್ಟ್ರೋ ಮೋಹನ್