ಜೈಪುರ: ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಅಧಿಕಾರಿಗೆ ಮಹಿಳಾ ಸಿಬಂದಿಯೋರ್ವರು ಕಪಾಳಮೋಕ್ಷ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಸ್ಪೈಸ್‌ಜೆಟ್ ಮಹಿಳಾ ಉದ್ಯೋಗಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಮತ್ತು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ತಪಾಸಣೆಗೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಮಹಿಳಾ ಸಿಬಂದಿ ಅಧಿಕಾರಿಯ ಕೆನ್ನೆಗೆ ಹೊಡೆದಿರುವುದಾಗಿ ಹೇಳಲಾಗಿದೆ.
ಏರ್‌ಲೈನ್ಸ್‌ನ ಆಹಾರ ಮೇಲ್ವಿಚಾರಕಿಯಾಗಿರುವ ಅನುರಾಧಾ ರಾಣಿ ಅವರು ಬೆಳಿಗ್ಗೆ 4 ಗಂಟೆಗೆ ಇತರ ಉದ್ಯೋಗಿಗಳೊಂದಿಗೆ ‘ವಾಹನ ಗೇಟ್‌ನಿಂದ’ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುತ್ತಿದ್ದಾಗ ಆ ಗೇಟ್ ಬಳಸದಂತೆ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗಿರಿರಾಜ್ ಪ್ರಸಾದ್ ತಡೆದಿದ್ದಾರೆ. ಮೊದಲೇ ಕೆಲಸಕ್ಕೆ ಹೋಗಲು ತಡವಾಗಿದ್ದ ನಿಟ್ಟಿನಲ್ಲಿ ಅನುರಾಧ ಗಡಿಬಿಡಿಯಲ್ಲಿದ್ದರು ಈ ನಡುವೆ ಗೇಟ್ ಬಳಿ ಅಧಿಕಾರಿಗಳು ತಡೆದಾಗ ವಾಗ್ವಾದ ನಡೆದಿದೆ ಇದರಿಂದ ಕುಪಿತಗೊಂಡ ಮಹಿಳಾ ಸಿಬಂದಿ ಅಧಿಕಾರಿ ಕೆನ್ನೆಗೆ ಹೊಡೆದಿದ್ದಾರೆ.
ಮಹಿಳಾ ಸಿಬಂದಿ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಅನುರಾಧ ಅವರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ, ಈ ನಡುವೆ ತನ್ನ ಉದ್ಯೋಗಿಯ ಮೇಲೆ ದೂರು ದಾಖಲಿಸುತ್ತಿದ್ದಂತೆ ಸ್ಪೈಸ್‌ಜೆಟ್ ಅನುರಾಧ ಪರವಾಗಿ ನಿಂತಿದೆ ಅಲ್ಲದೆ ಅಧಿಕಾರಿ ನಮ್ಮ ಸಿಬಂದಿಗೆ ಕಿರುಕುಳ ನೀಡಿದ್ದು ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮಾಹಿತಿಯಂತೆ ಇಂತಹ ಪ್ರಕರಣ ನಡೆದಿರುವುದು ಜೈಪುರ ವಿಮಾನ ನಿಲ್ದಾಣದಲ್ಲಿ ಇದೆ ಮೊದಲು ಎಂದು ಕೂಡ ಹೇಳಲಾಗುತ್ತಿದೆ.