ಹೊಸದಿಲ್ಲಿ: “ನಾನು ಭಾರತಕ್ಕೆ ಭೇಟಿ ನೀಡಿದ್ದೇ 2010ರಲ್ಲಿ ಅಮೆರಿಕದ ಅಧ್ಯಕ್ಷನಾದ ಬಳಿಕ. ಚಿಕ್ಕವನಾಗಿದ್ದಾಗ ರಾಮಾಯಣ, ಮಹಾಭಾರತದ ಕತೆಗಳನ್ನು ಕೇಳುತ್ತಾ ಬೆಳೆದೆ. ಮಹಾತ್ಮ ಗಾಂಧಿಯವರು ಅಹಿಂಸಾ ಮಾರ್ಗದ ಮೂಲಕ ನಡೆಸಿದ ಹೋರಾಟ ನನಗೆ ಸ್ಫೂರ್ತಿ’
-ಹೀಗೆಂದು ಬರೆದುಕೊಂಡದ್ದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ. ಮಂಗಳವಾರ ಬಿಡುಗಡೆಯಾದ “ಎ ಪ್ರಾಮಿಸ್ಡ್ ಲ್ಯಾಂಡ್’ ಎಂಬ ಕೃತಿಯಲ್ಲಿ ಅವರು ಭಾರತದ ಜತೆಗಿನ ನಂಟಿನ ಬಗ್ಗೆ ಬರೆದುಕೊಂಡಿದ್ದಾರೆ. ಬಾಲ್ಯದ ದಿನಗಳಲ್ಲಿ ಇಂಡೋನೇಷ್ಯಾದಲ್ಲಿ ಕಳೆದಿರುವ ಬಗ್ಗೆ ಕೃತಿಯಲ್ಲಿ ಪ್ರಸ್ತಾಪಿಸಿರುವ ಅವರು “ಬಾಲ್ಯದ ಕೆಲವು ಸಮಯವನ್ನು ಇಂಡೋನೇಷ್ಯಾದಲ್ಲಿ ಕಳೆದಿದ್ದೇನೆ. ಈ ಸಂದರ್ಭದಲ್ಲಿ ರಾಮಾಯಣ ಮತ್ತು ಮಹಾಭಾರತದ ಕತೆಗಳನ್ನು ಕೇಳುತ್ತಿದ್ದೆ. ಭಾರತದ ನನ್ನ ಕೆಲವು ಸ್ನೇಹಿತರು ದಾಲ್ ಮತ್ತು ಕೀಮಾ ತಯಾರಿಸಲು ಕಲಿಸಿದ್ದಾರೆ’ ಎಂದಿದ್ದಾರೆ. ಇಂಥ ವೈವಿಧ್ಯಮಯ ದೇಶಕ್ಕೆ ಭೇಟಿ ನೀಡಿದ್ದೇ ಅಮೆರಿಕದ ಅಧ್ಯಕ್ಷ ಹುದ್ದೆಗೆ ಬಂದ ಬಳಿಕ ಎಂದು ಬರೆದಿದ್ದಾರೆ.
ದೇಶ ವಿಭಜನೆ ತಪ್ಪಿಸಲಾಗಲಿಲ್ಲ: ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆದಿರುವ ಒಬಾಮ, ಮಹಾತ್ಮ ಗಾಂಧಿ ನೇತೃತ್ವದಲ್ಲಿನ ಅಹಿಂಸಾತ್ಮಕ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಾಂಧೀಜಿಯ ಬರಹಗಳು ನನ್ನ ಆಳವಾದ ಪ್ರವೃತ್ತಿಗೆ ಧ್ವನಿಯಾದವು ಎಂದಿದ್ದಾರೆ. ಇದೇ ವೇಳೆ, ಗಾಂಧೀಜಿಯವರು ಭಾರತದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡುವಲ್ಲಿ ಮತ್ತು ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾಗುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಲಿಲ್ಲ ಎಂದೂ ಒಬಾಮ ಬರೆದುಕೊಂಡಿದ್ದಾರೆ.
ಲಾಡೆನ್ ಕಾರ್ಯಾಚರಣೆ ಮುಚ್ಚಿಟ್ಟಿದ್ದೇಕೆ?: ಉಗ್ರ ಒಸಾಮ ಬಿನ್ ಲಾಡೆನ್‌ನ ಅಡಗುತಾಣದ ಮೇಲೆ ದಾಳಿ ನಡೆಸುವಾಗ ಪಾಕಿಸ್ತಾನಕ್ಕೆ ಮಾಹಿತಿ ನೀಡದೇ ಇದ್ದಿದ್ದಕ್ಕೆ ಕಾರಣವೇನು ಎಂಬುದನ್ನು ಒಬಾಮ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದ ಸೇನೆಯೊಳಗೇ, ವಿಶೇಷವಾಗಿ ಐಎಸ್‌ಐನಲ್ಲಿರುವ ಕೆಲವು ಶಕ್ತಿಗಳು ತಾಲಿಬಾನ್ ಹಾಗೂ ಅಲ್‌ಖೈದಾ ಜತೆ ನಂಟು ಹೊಂದಿದ್ದವು ಎನ್ನುವುದು ಓಪನ್ ಸೀಕ್ರೆಟ್. ವಿಚಾರ ಸೋರಿಕೆಯಾಗದಿರಲಿ ಎಂಬ ಕಾರಣಕ್ಕೆ ಪಾಕ್‌ಗೆ ಮಾಹಿತಿ ನೀಡಲು ನಾನೇ ಒಪ್ಪಲಿಲ್ಲ ಎಂದಿದ್ದಾರೆ.