ಮೈಸೂರು: ಕಾಂಗ್ರೆಸ್ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ರಾಜ್ಯದ ಜನರಿಗೆ ಮಂಕುಬೂದಿ ಎರಚುವ ಪ್ರಣಾಳಿಕೆಯಾಗಿದೆಯೇ ಹೊರತು ಬೇರೇನಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಈ ಪ್ರಣಾಳಿಕೆ ಜನರಿಗೆ ಆಸೆ ತೋರಿಸುವುದಾಗಿದ್ದು, ರಾಜ್ಯದಲ್ಲಿ ಕಳೆದ 5 ವರ್ಷ ಜನರ ತೆರಿಗೆ ಹಣವನ್ನು ಲೂಟಿ ಹೊಡೆದಿರುವ ಕಾಂಗ್ರೆಸ್, ಈ ಬಾರಿ ಮತ್ತಷ್ಟು ಲೂಟಿ ಹೊಡೆಯುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತೇವೆಂದು ಪ್ರಣಾಳಿಕೆಯಲ್ಲಿ ಮಂಕುಬೂದಿ ಎರಚಲು ಮುಂದಾಗಿದೆ. ಐದು ವರ್ಷದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದ್ದು, ಬಡವರ ಕಲ್ಯಾಣವಾಗಿಲ್ಲ ಎಂದ ಅವರು, ಕಾಂಗ್ರೆಸ್ ಪ್ರಣಾಳಿಕೆಗೆ ರಾಜ್ಯದ ಮತದಾರರು ಮರುಳಾಗುವುದಿಲ್ಲ ಎಂದರು.
ಯಾವ ಪರಿಣಾಮ ಬೀರಲ್ಲ: ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಎಷ್ಟು ಪ್ರಚಾರ ಮಾಡಿದರೂ ಅಭ್ಯಂತರವಿಲ್ಲ. ಅವರು ಮಾಡುವ ಪ್ರಚಾರದಿಂದ ನಮಗೇನೂ ಪರಿಣಾಮ ಬೀರುವುದಿಲ್ಲ, ಹೀಗಾಗಿ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಬೇಡಿ ಎನ್ನುವುದಿಲ್ಲ.
ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದು, ಯಾರೋ ಹೇಳಿಕೊಟ್ಟಿದ್ದು, ಬರೆದುಕೊಟ್ಟಿದನ್ನು ಹೇಳಿ ಹೋಗುತ್ತಾರೆ. ಜೆಡಿಎಸ್ ಬಿಜೆಪಿಯ ಬಿ ಟೀಮ್ ಎನ್ನುವ ರಾಹುಲ್ ಗಾಂಧಿ ಅವರಿಗೆ ಯಾವುದು ಬಿ ಟೀಮ್ ಎಂದು ಚುನಾವಣೆ ಬಳಿಕ ಗೊತ್ತಾಗಲಿದ್ದು, ಕರ್ನಾಟಕದಲ್ಲಿ ರಾಹುಲ್ ಗಾಂಧಿ ಪ್ರವಾಸದಿಂದ ಜೆಡಿಎಸ್ ವೇಗ ತಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಆಯೋಗ ಕ್ರಮ ವಹಿಸಲಿ: ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ, ಚುನಾವಣಾ ಆಯೋಗ ಕಠಿಣ ಕ್ರಮಕೈಗೊಳ್ಳಬೇಕು. ಏನಾದರೂ ಜೆಡಿಎಸ್ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ ಚುನಾವಣೆ ಗೆಲ್ಲಬಹುದೆಂಬ ಮಾತುಗಳಿದ್ದರೆ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.
ಕಾರ್ಯಕರ್ತರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಪ್ರಚಾರಮಾಡಲಿದ್ದು, ಸರ್ಕಾರ ಕಾರ್ಯಕರ್ತರನ್ನು ಕೆರಳಿಸುವ ಕೆಲಸ ಮಾಡದೇ ಕ್ರಮ ವಹಿಸಬೇಕಿದೆ. ಗುತ್ತಿಗೆದಾರರ ಮೂಲಕ ಕಿಕ್‌ಬ್ಯಾಕ್ ಪಡೆದುಕೊಂಡಿದ್ದನ್ನು ಅನೇಕ ಬಾರಿ ಹೇಳಿದ್ದು, ಇದೀಗ ಅದು ಸಾಬೀತಾಗುತ್ತಿದೆ. ಐಟಿ ಅಧಿಕಾರಿಗಳು ಮಾಡಿರುವ ದಾಳಿಯಲ್ಲಿ ಸಿಕ್ಕಿ ಬಿದ್ದಿರುವವರು ಯಾರ ಕಡೆಯವರು ಎಂಬುದು ಕಾಣುತ್ತಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.