Advertisement

Channapatna ಜೆಡಿಎಸ್‌ ಪಾಲು: ಅಭ್ಯರ್ಥಿ ಇಂದು ಅಂತಿಮ?ಸಿಪಿವೈ ಬಂಡಾಯ?

11:50 PM Oct 19, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರುತ್ತಿದೆ. ಈಗಾಗಲೇ ಸಂಡೂರು ಮತ್ತು ಶಿಗ್ಗಾವಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಈ ಮೂಲಕ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಪರೋಕ್ಷ ಸಂದೇಶವನ್ನು ರವಾನೆ ಮಾಡಿದಂತಾಗಿದೆ. ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ-ಜೆಡಿಎಸ್‌ ಶನಿವಾರ ತಡರಾತ್ರಿವರೆಗೂ ಸಭೆ ನಡೆಸಿದ್ದು, ರವಿವಾರ ಅಭ್ಯರ್ಥಿಯ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

Advertisement

ಸಭೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಬಗ್ಗೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯ ಘೋಷಣೆ ರವಿವಾರ ಅಂತಿಮವಾಗಲಿದೆ. ಆದರೆ ಜೆಡಿಎಸ್‌ ಚಿಹ್ನೆಯಡಿಯೇ ಸ್ಪರ್ಧೆ ನಡೆಯುತ್ತದೆ ಎಂದಿದ್ದಾರೆ. ಈ ಮೂಲಕ ಚನ್ನಪಟ್ಟಣದಲ್ಲಿ ಜೆಡಿಎಸ್‌ ಸ್ಪರ್ಧೆ ಖಚಿತವಾದಂತಾದರೂ ಅಭ್ಯರ್ಥಿ ಯಾರು ಎಂಬ ಕುತೂಹಲ ಮುಂದುವರಿದಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ತಡರಾತ್ರಿಯವರೆಗೂ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸಭೆ ನಡೆಸಿದರು. ಚನ್ನಪಟ್ಟಣ ಟಿಕೆಟ್‌ ವಿಚಾರವಾಗಿಯೂ ಗಂಭೀರ ಚರ್ಚೆಗಳು ನಡೆದಿವೆ.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಸಭೆ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಈ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸಿದ್ದ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್‌ ಸಭೆಯಿಂದ ದೂರ ಉಳಿದಿದ್ದರು.

ಜೆಡಿಎಸ್‌ ಚಿಹ್ನೆ ಅಡಿಯೇ ಸ್ಪರ್ಧೆ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು ಮಾಧ್ಯಮದವರೊಂದಿಗೆ ಮಾತನಾಡಿ, 3 ಕ್ಷೇತ್ರಗಳ ಚುನಾವಣೆ ಬಗ್ಗೆ ಚರ್ಚೆ ನಡೆದಿದೆ.ಎಲ್ಲ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿ ಗಳನ್ನು ಗೆಲ್ಲಿಸುವ ಬಗ್ಗೆ ನಾಯಕರು ಚರ್ಚೆ ಮಾಡಿದ್ದಾರೆ. 2 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯ ಘೋಷಣೆ ರವಿವಾರ ಅಂತಿಮವಾಗಲಿದೆ. ಯಾರೇ ಸ್ಪರ್ಧೆ ಮಾಡಿದರೂ ಜೆಡಿಎಸ್‌ ಚಿಹ್ನೆಯಡಿಯೇ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

Advertisement

ಸ್ಪರ್ಧೆಗೆ ಯೋಗೇಶ್ವರ್‌ ನಿರ್ಧಾರ
ಈ ಮಧ್ಯೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ ಸ್ಪರ್ಧೆಯಿಂದ ಹಿಂಜರಿಯದೆ ಇರಲು ತೀರ್ಮಾನಿಸಿದ್ದಾರೆ. 2 ಕ್ಷೇತ್ರದ ಟಿಕೆಟ್‌ ಘೋಷಣೆಯ ಬಳಿಕವೂ ತಾವೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು, ಕೊನೆಯವರೆಗೂ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದಾರೆ. ಒಂದೊಮ್ಮೆ ಜೆಡಿಎಸ್‌ ಸ್ಪರ್ಧೆ ಖಚಿತವಾದರೆ ಯೋಗೇಶ್ವರ್‌ ಬಂಡಾಯ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ. ಈ ಮಧ್ಯೆ ಬಿಜೆಪಿ-ಜೆಡಿಎಸ್‌ ನಾಯಕರ ಸಭೆಯಲ್ಲಿ ಯೋಗೇಶ್ವರ್‌ ಅವರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆಯೂ ಪ್ರಸ್ತಾವವಾಗಿದೆ. ಆದರೆ ಒಮ್ಮತ ಮೂಡಿಲ್ಲ. ಬಿಜೆಪಿ ನಾಯಕರು ಕೂಡ ಇದು ಜೆಡಿಎಸ್‌ ಕ್ಷೇತ್ರ ಎಂದು ಸಭೆಯಲ್ಲಿ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಂತಿಮವಾಗಿ ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟರೂ ಅಚ್ಚರಿ ಇಲ್ಲ.

”ಯಾರು ಯಾರ ಮೇಲೂ ದಬ್ಬಾಳಿಕೆ ಮಾಡಲು ಆಗುವುದಿಲ್ಲ. ಪ್ರೀತಿ ವಿಶ್ವಾಸದಿಂದ ಚುನಾವಣೆ ನಡೆಸಬೇಕು. ವಿಶ್ವಾಸಕ್ಕೆ ಧಕ್ಕೆ ಆಗಬಾರದು. ಅದನ್ನು ಎರಡೂ ಪಕ್ಷದ ನಾಯಕರು ಮನವರಿಕೆ ಮಾಡಿಕೊಳ್ಳಬೇಕು. ಒಂದು ಕಡೆ ಪ್ರೀತಿ, ವಿಶ್ವಾಸ ಇದ್ದರೆ ಸಾಲದು. ಎರಡು ಕಡೆಯೂ ಪರಸ್ಪರ ಸ್ಪಂದನೆ ಇರಬೇಕು.”
– ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next