ಚಾಮರಾಜನಗರ: ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದ್ದು, ಆರ್ಥಿಕ ಚಟುವಟಿಕೆಗಳಿಗೂ ಅನುಕೂಲವಾಗಲಿದೆ. ಇಲ್ಲಿನ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರನ್ನು ಸೆಳೆಯಲು ವಾರಾಂತ್ಯ ಪ್ರವಾಸಗಳನ್ನು ಆಯೋಜಿ ಸಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದಕ್ಕಾಗಿ ವಾರಾಂತ್ಯದಲ್ಲಿ, ರಜೆ ದಿನಗಳಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ವಿಶೇಷ ಪ್ಯಾಕೇಜ್ ಟೂರ್ ಆಯೋಜನೆ ಮಾಡಬಹುದು. ಕೆಎಸ್‌ಆರ್ ಟಿಸಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅಗತ್ಯ ರೂಪುರೇಷೆ ತಯಾರಿಸಬೇಕೆಂದು ಸೂಚನೆ ನೀಡಿದರು.
ಪ್ರವಾಸಿ ತಾಣಗಳು, ಧಾರ್ಮಿಕ ಪ್ರವಾಸಿ ಕ್ಷೇತ್ರಗಳಲ್ಲಿ ಪ್ರವಾಸಿಗರು, ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈಗಾ ಗಲೇ ಅನೇಕ ಅಭಿವೃದ್ಧಿ ಕಾಮಗಾರಿಗಳು ಜಿಲ್ಲೆಯಲ್ಲಿ ಆರಂಭವಾಗಿವೆ. ಇನ್ನೂ ಹಲವು ಕೆಲಸಗಳು ಪೂರ್ಣವಾಗಬೇಕಿದೆ. ವಿಳಂಬ ಮಾಡದೇ ಇಂತಹ ಕಡೆ ವಿಶೇಷ ಗಮನ ನೀಡಿ ಕಾಮಗಾರಿ ಆದಷ್ಟು ಶೀಘ್ರ ವಾಗಿ ನಿರ್ವಹಿಸಬೇಕೆಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿ ಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದ ಕೆಲಸಗಳು ನಡೆಯಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ವಿಶ್ರಾಂತಿ ಧಾಮಗಳು, ಡಾರ್ಮಿಟರಿ, ಯಾತ್ರಿನಿವಾಸ ಯಾವುದೇ ಇರಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಪ್ರವಾಸಿಗರ ವಾಸ್ತವ್ಯಕ್ಕೆ ಅಗತ್ಯ ಸೌಕರ್ಯ ಅನುಕೂಲಗಳು ಇರಬೇಕು ಎಂದು ಸೂಚಿಸಿದರು.
ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗ ನಾಥಸ್ವಾಮಿ ದೇವಾಲಯದಲ್ಲಿ ಪೂರ್ಣಗೊಳಿಸಿರುವ ನೆಲಹಾಸು ಕೆಲಸದ ವಿವರ ಪಡೆದ ಜಿಲ್ಲಾಧಿಕಾರಿಯವರು ಮಧ್ಯರಂಗ ದೇವಾಲಯದಲ್ಲಿಯೂ ನೆಲಹಾಸು ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಬೇಕು. ಜಿಲ್ಲೆಯಲ್ಲಿ ಅಭಿವೃಧಿª ಪಡಿಸಬೇಕಿರುವ ಪ್ರವಾಸಿ ಸ್ಥಳಗಳು ಧಾರ್ಮಿಕ ಪ್ರವಾಸಿ ಕ್ಷೇತ್ರಗಳ ಬಗ್ಗೆ ಸೂಕ್ತ ಸಮಗ್ರ ಮಾಹಿತಿಯುಳ್ಳ ಪ್ರಸ್ತಾವನೆ ನೀಡಬೇಕು ಎಂದರು.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಸಿ. ಕೆಂಪರಾಜು, ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ರಮೇಶ್, ಜಿಲ್ಲಾ ಪರಿಸರ ಅಧಿಕಾರಿ ಉಮಾಶಂಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕ ರಾಘವೇಂದ್ರ, ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿ. ಪ್ರಭಾಕರ್, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಅಂಕಶೆಟ್ಟಿ ಇದ್ದರು.