Advertisement

ಕಾಮಗಾರಿ ತ್ವರಿತಗೊಳಿಸಲು ಸಂಸದರ ತಾಕೀತು

05:19 PM Jan 15, 2021 | Nagendra Trasi |

ವಿಜಯಪುರ: ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೇಂದ್ರ  ಸರ್ಕಾರದ ಯೋಜನೆಗಳ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ಸಂಸದ ರಮೇಶ ಜಿಗಜಿಣಗಿ ಅಧಿ ಕಾರಿಗಳಿಗೆ ತಾಕೀತು ಮಾಡಿದರು. ಜಿಪಂ ಸಭಾಂಗಣದಲ್ಲಿ ಜರುಗಿದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಂಡಿ ಪಟ್ಟಣದಿಂದ ಹಳ್ಳಗುಣಕಿ ವರೆಗಿನ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

Advertisement

ಜಿಪಂ ಸಿಇಒ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಮನರೇಗಾ ಯೋಜನೆಯಲ್ಲಿ ಹೆಸರು ನೋಂದಾಯಿಸಿದ 2,70,396 ಕುಟುಂಬಗಳಲ್ಲಿ 2,70,280 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. 1046 ಕುಟುಂಬಗಳು 100 ದಿನ ಉದ್ಯೋಗ ಮಾಡಿದ್ದು, 1,08,359 ಕುಟುಂಬಗಳು ಉದ್ಯೋಗ ಬೇಡಿ ಅರ್ಜಿ ಸಲ್ಲಿಸಿದ್ದು, 92,851 ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ. ಒಟ್ಟು 44,519 ಕಾಮಗಾರಿಗಳಿವೆ. ಅದರಲ್ಲಿ 16138 ಕಾಮಗಾರಿಗಳು ಪೂರ್ಣಗೊಂಡಿದ್ದು 28381 ಕಾಮಗಾರಿಗಳು ಪ್ರಗತಿಯಲ್ಲಿದ್ದು, 38,29,549 ಮಾನವ ದಿನಗಳ ಸೃಜಿಸಲಾಗಿದೆ ಎಂದು ವಿವರಿಸಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನಾ ನಿರ್ದೇಶಕರು ಮಾತನಾಡಿ, 212 ಗ್ರಾಪಂಗಳಲ್ಲಿ 159 ಗ್ರಾಪಂ ಒಕ್ಕೂಟಗಳ ರಚಿಸಿದ್ದು, 83 ಒಕ್ಕೂಟಗಳ ಸ್ವಸಹಾಯ ಸಂಘಗಳ ಮಹಿಳೆಯರಿಗೆ 8.03 ಕೋಟಿ ರೂ. ಸಾಲ ನೀಡಲಾಗಿದೆ. ಸಾಲ ಪಡೆದವರು ವಿವಿಧ ಜೀವನೋಪಾಯ ಚಟುವಟಿಕೆ ಮಾಡಿ ಆರ್ಥಿಕ ಸಬಲರನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.

ದೀನ್‌ ದಯಾಳ ಗ್ರಾಮೀಣ ಕೌಶಲ್ಯ ಯೋಜನಾ ನಿರ್ದೇಶಕರು ಮಾತನಾಡಿ, ಕೋವಿಡ್‌-19ರ ಪ್ರಯುಕ್ತ ಇಲ್ಲಿಯವರೆಗೆ ಎಲ್ಲ ತರಬೇತಿ ಸ್ಥಗಿತಗೊಳಿಸಲಾಗಿದೆ.
ಭವಿಷ್ಯದಲ್ಲಿ ರೂಪಿಸುವ ತರಬೇತಿಗಳ ಕುರಿತು ಮುಂದಿನ ಸಭೆಯಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದರು.

ಪಿಎಂ ಗ್ರಾಮ ಸಡಕ್‌ ಯೋಜನೆ ಕಾರ್ಯನಿರ್ವಾಹಕ ಅಭಿಯಂತರು ಮಾತನಾಡಿ, ಯೋಜನೆಯಡಿ 111.52 ಕಿಮೀ ರಸ್ತೆ ಮಂಜೂರಾಗಿದ್ದು 4.5 ಕಿಮೀ ಕಾಮಗಾರಿ ಪೂರ್ಣಗೊಂಡಿವೆ. ಬಾಕಿ ಕಾಮಗಾರಿಗಳನ್ನು ಮುಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ: ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಮಾತನಾಡಿ, 2018-19ರಲ್ಲಿ 10 ಗ್ರಾಮಗಳು ಹಾಗೂ 2019-20ರಲ್ಲಿ 10 ಗ್ರಾಮಗಳು ಆಯ್ಕೆ ಮಾಡಲಾಗಿದೆ. 2018-19ನೇ ಸಾಲಿನ ಕ್ರಿಯಾ ಯೋಜನೆ ತಡವಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ. 2019-20ನೇ ಸಾಲಿನ ಕ್ರಿಯಾ ಯೋಜನೆ ಅನುಮೋದಿಸಲ್ಪಟ್ಟ ನಂತರ ಕಾಮಗಾರಿ ಆರಂಭಿಸುವುದಾಗಿ ವಿವರಿಸಿದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯ ಕಾರ್ಯನಿರ್ವಾಹಕ ಅಭಿಯಂತರು ಮಾತನಾಡಿ, ಕುಡಿಯುವ ನೀರು ಯೋಜನೆಯಡಿ ವಿಜಯಪುರ-96 ಇಂಡಿ-40 ಬಸವನ ಬಾಗೇವಾಡಿ-85 ಮುದ್ದೇಬಿಹಾಳ-68 ಮತ್ತು ಸಿಂದಗಿ-39 ಒಟ್ಟು 328 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಮಂಜೂರಾಗಿವೆ. ಇವುಗಳಲ್ಲಿ 235 ಪೂರ್ಣಗೊಂಡಿದ್ದು, 93 ಪ್ರಗತಿಯಲ್ಲಿವೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಜಲಜೀವನ
ಪ್ರಧಾನ ಮಂತ್ರಿ ಜಲಜೀವನ ಯೋಜನೆ ವಿವರ ನೀಡಿದ ಇಲಾಖೆ ಅಧಿ ಕಾರಿಗಳು, ಬರುವ 4 ವರ್ಷಗಳಲ್ಲಿ ಪ್ರತಿ ಗ್ರಾಮದ ಮನೆ ಮನೆಗೂ 55 ಎಲ್‌ಪಿಸಿಡಿ ನೀರು ತಲುಪಿಸುವ ಕೇಂದ್ರ ಸರ್ಕಾರದ ಯೋಜನೆಯನ್ನು 3 ವರ್ಷಗಳಲ್ಲೇ ಗುರಿ ತಲುಪುವ ಆಶಯ ಹೊಂದಲಾಗಿದೆ. ಪ್ರಸಕ್ತ ವರ್ಷದಲ್ಲಿ 298 ಗ್ರಾಮಗಳಲ್ಲಿ 1,15,000 ಮನೆಗಳಿಗೆ ತಲುಪಿಸಬೇಕೆಂಬ ನಿಟ್ಟಿನಲ್ಲಿ 88 ಕಡೆಗಳಲ್ಲಿ ವರ್ಕ್‌ ಆರ್ಡರ್‌ ನೀಡಿದ್ದು, 15 ಕಾಮಗಾರಿ ಪ್ರಾರಂಭವಾಗಿದೆ. ಇತರೆ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಅದರಂತೆ 150 ಗ್ರಾಮಗಳಲ್ಲಿ 100 ದಿನಗಳ ಮಿಶನ್‌ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಕುಡಿಯುವ ನೀರು ಸಂಪರ್ಕವನ್ನು ಇನ್ನೆರಡು ತಿಂಗಳಲ್ಲಿ ಕಲ್ಪಿಸಲಾಗುವುದು ಎಂದು ವಿವರಿಸಿದರು.

10415 ಶೌಚಾಲಯ ಸಾಧನೆ
ಸ್ವತ್ಛ ಭಾರತ್‌ ಮಿಷನ್‌ (ಗ್ರಾಮೀಣ)ಯ ಉಪ ಕಾರ್ಯದರ್ಶಿಗಳು ಮಾತನಾಡಿ, 2020-21ನೇ ಸಾಲಿಗೆ ಒಟ್ಟು 10419 ವೈಯಕ್ತಿಕ ಶೌಚಾಲಯ ನಿರ್ಮಾಣದ
ಗುರಿ ಇದ್ದು, ಇದರಲ್ಲಿ 10415 ಸಾಧನೆ ಮಾಡಲಾಗಿದೆ. 09 ಶೌಚಾಲಯಗಳು ಪ್ರಗತಿಯಲ್ಲಿದ್ದು, 4 ಶೌಚಾಲಯ ಕಾಮಗಾರಿ ಬಾಕಿ ಇವೆ. ಸ್ವತ್ಛ ಭಾರತ್‌ ಮಿಷನ್‌
(ಗ್ರಾಮೀಣ) ಆರ್ಥಿಕ ಪ್ರಗತಿಯ ವರದಿಯ ಲಭ್ಯವಿರುವ ಅನುದಾನ 6.18 ಕೋಟಿ ರೂ.ಗಳಲ್ಲಿ 4.90 ಕೋಟಿ ರೂ. ಬಳಕೆಯಾಗಿದ್ದು, 1.28 ಕೋಟಿ ರೂ. ಇದೆ ಎಂದು ಸಭೆಗೆ ಗಮನಕ್ಕೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next