Advertisement

ರಸ್ತೆ ವಿಸ್ತರಣೆ ಕಾಮಗಾರಿಗೆ ವೇಗ; ಫ್ರೀ ಲೆಫ್ಟ್ ಗೆ ಅವಕಾಶ

10:00 PM Oct 01, 2020 | mahesh |

ಮಹಾನಗರ: ನಗರದ ಕೇಂದ್ರ ಭಾಗಗಳ ಪೈಕಿ ಒಂದಾದ ಪಿವಿಎಸ್‌ ಸರ್ಕಲ್‌- ಬಂಟ್ಸ್‌ ಹಾಸ್ಟೆಲ್‌ ರಸ್ತೆ ವಿಸ್ತರಣೆ ಸಹಿತ ಈ ಭಾಗದಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳು ಇದೀಗ ವೇಗ ಪಡೆದುಕೊಂಡಿವೆ.

Advertisement

ಪಿವಿಎಸ್‌ ಸರ್ಕಲ್‌ ಪರಿಸರ ಇಕ್ಕಟ್ಟಾದ ಕಾರಣ ಇಲ್ಲಿ ವಾಹನ, ಜನ ಸಂಚಾರಕ್ಕೆ ಅಡಚಣೆಯಾಗಿತ್ತು. ಫ‌ುಟ್‌ಪಾತ್‌ ಇಲ್ಲದೆ ಜನರು ಪ್ರಾಣಭೀತಿ ಯಿಂದಲೇ ನಡೆದು ಕೊಂಡು ಹೋಗುವ ಸ್ಥಿತಿ ಇತ್ತು. ಅಲ್ಲದೆ ಎಂಜಿ ರಸ್ತೆಯಿಂದ ಬರುವ ವಾಹನಗಳಿಗೆ ಸಿಗ್ನಲ್‌ನಲ್ಲಿ ಫ್ರೀ ಲೆಫ್ಟ್ಗೆ ಸ್ಥಳಾವಕಾಶ ಇಲ್ಲದೆಯೂ ಸಮಸ್ಯೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗ ಳೂರು ಸ್ಮಾರ್ಟ್‌ಸಿಟಿ ಯೋಜನೆಯಡಿ ಇಲ್ಲಿನ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿಗೆ ಕಳೆದ ಮಾರ್ಚ್‌ನಲ್ಲಿ ಚಾಲನೆ ದೊರೆತಿದ್ದರೂ ಕಾಮಗಾರಿ ಆರಂಭವಾದ ಕೆಲವೇ ದಿನಗಳಲ್ಲಿ ಲಾಕ್‌ಡೌನ್‌ ಜಾರಿಯಾದ ಹಿನ್ನೆಲೆಯಲ್ಲಿ 2 ತಿಂಗಳುಗಳ ಕಾಲ ಕಾಮಗಾರಿ ಸ್ಥಗಿತಗೊಂಡಿತು. ಅನಂತರ ಕಾಮಗಾರಿ ಆರಂಭಗೊಂಡರೂ ನಿಧಾನ ಗತಿಯಲ್ಲಿ ಸಾಗಿತ್ತು. ಬಳಿಕ ಮಳೆಯಿಂದ ತೊಡಕಾಯಿತು. ಮಳೆ ಕಡಿಮೆಯಾದ ಅನಂತರ ಸುಮಾರು 2 ವಾರಗಳಿಂದ ಕಾಮಗಾರಿ ಚುರುಕಾಗಿದೆ.

ವ್ಯವಸ್ಥಿತ ಫ‌ುಟ್‌ಪಾತ್‌
ಪಿವಿಎಸ್‌ ಜಂಕ್ಷನ್‌ನಿಂದ ಮಲ್ಲಿ ಕಟ್ಟೆವರೆಗೂ ಅತ್ತ ಪಿವಿಎಸ್‌ ಜಂಕ್ಷನ್‌ನಿಂದ ಕೆ.ಎಸ್‌.ರಾವ್‌ ರಸ್ತೆಯವರೆಗೂ ರಸ್ತೆ ವಿಸ್ತರಿಸಲು ಎರಡೂ ಬದಿ ಕೂಡ ವ್ಯವಸ್ಥಿತವಾದ ಫ‌ುಟ್‌ಪಾತ್‌ ನಿರ್ಮಿಸಲಾಗುತ್ತದೆ. ಈಗಾಗಲೇ ಪಿವಿಎಸ್‌ ಸರ್ಕಲ್‌ ಕಡೆಯಿಂದ ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಹಲವೆಡೆ ಫ‌ುಟ್‌ಪಾತ್‌ ನಿರ್ಮಾಣ ವಾಗಿದೆ. ಮಳೆನೀರು ಹರಿ ಯುವ ಚರಂಡಿ ನಿರ್ಮಾಣ ಕೂಡ ಪ್ರಗತಿಯಲ್ಲಿದೆ. ಹಲವೆಡೆ ರಸ್ತೆಯ ಇಕ್ಕೆಲಗಳ ಜಾಗದ ಮಾಲಕರೊಂದಿಗೆ ಶಾಸಕರು ಮಾತುಕತೆ ನಡೆಸಿದ ಪರಿಣಾಮ ರಸ್ತೆ ವಿಸ್ತರಿಸಲು, ಫ‌ುಟ್‌ಪಾತ್‌ ನಿರ್ಮಿಸಲು ಸಾಧ್ಯವಾಗಿದೆ. ಇನ್ನಷ್ಟು ಮಂದಿಯ ಸಹಕಾರದ ಅಗತ್ಯವಿದೆ. ಆಗ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲು, ವ್ಯವಸ್ಥಿತವಾಗಿ ಅಭಿವೃದ್ಧಿ ಕಾರ್ಯ ನಡೆಸಲು ಸಾಧ್ಯವಾಗಲಿದೆ. ಸಹಕಾರ ದೊರೆಯುವ ನಿರೀಕ್ಷೆ ಇದೆ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಹ್ಯಾಂಡ್‌ ರೇಲಿಂಗ್‌ ಅಳವಡಿಕೆ
ಪಿವಿಎಸ್‌ ಸರ್ಕಲ್‌ ಬಳಿ ಒಂದು ಬದಿಯಲ್ಲಿ ಫ‌ುಟ್‌ಪಾತ್‌ಗೆ ಸ್ಟೀಲ್‌ ಹ್ಯಾಂಡ್‌ ರೇಲಿಂಗ್‌ ಅಳವಡಿಸುವ ಕಾಮಗಾರಿ ಆರಂಭಗೊಂಡಿದೆ. ಇದು ಪ್ರಯಾಣಿಕರು ಸುರಕ್ಷಿತವಾಗಿ ನಡೆದಾಡಲು ಅವಕಾಶ ಮಾಡಿಕೊಡಲಿದೆ. ಅಲ್ಲದೆ ವಾಹನಗಳು ಫ‌ುಟ್‌ಪಾತ್‌ ಮೇಲೇರದಂತೆ ತಡೆಯಲು ಸಣ್ಣ ಕಂಬಗಳನ್ನು(ಬೊಲ್ಲಾರ್ಡ್ಸ್‌) ಕೂಡ ಅಳವಡಿಸಲಾಗುತ್ತಿದೆ. ಪಿವಿಎಸ್‌ ಸರ್ಕಲ್‌-ಬಂಟ್ಸ್‌ ಹಾಸ್ಟೆಲ್‌ ರಸ್ತೆಯ ನಡುವೆ ಡಿವೈಡರ್‌ ನಿರ್ಮಿಸಿ ದಾರಿದೀಪ ಅಳವಡಿಸುವ ಕಾಮಗಾರಿಯೂ ಶೀಘ್ರ ದಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಡಬದಿಗೆ ಮುಕ್ತ ಸಂಚಾರ
ಪಿವಿಎಸ್‌ ಸರ್ಕಲ್‌ ಬಳಿ ರಸ್ತೆ ವಿಸ್ತರಣೆಗೊಂಡಿರುವುದರಿಂದ ವಾಹನಗಲು ಎಂ.ಜಿ. ರೋಡ್‌ನಿಂದ ಬಂದು ಪಿವಿಎಸ್‌ ಸರ್ಕಲ್‌ ಮೂಲಕ ಎಡಕ್ಕೆ (ಬಂಟ್ಸ್‌ ಹಾಸ್ಟೆಲ್‌ ಕಡೆಗೆ) ಮುಕ್ತವಾಗಿ ಸಂಚರಿಸಲು (ಫ್ರೀ ಲೆಫ್ಟ್) ಸಾಧ್ಯವಾಗಿದೆ.

Advertisement

ಪಾರ್ಕಿಂಗ್‌ಗೆ ಮೀಸಲಾಗದೆ ಇರಲಿ
ಪಿವಿಎಸ್‌ ಸರ್ಕಲ್‌ನಿಂದ ಬಂಟ್ಸ್‌ ಹಾಸ್ಟೆಲ್‌ವರೆಗಿನ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ಬಹುತೇಕ ಪೂರ್ಣ ಗೊಂಡು ಫ‌ುಟ್‌ ಪಾತ್‌, ಚರಂಡಿ ನಿರ್ಮಾಣ ಪ್ರಗತಿಯಲ್ಲಿದೆ. ಆದರೆ ವಿಸ್ತರಣೆ ಗೊಂಡ ರಸ್ತೆಯ ಕೆಲವೆಡೆ ಈಗಾಗಲೇ ವಾಹನಗಳನ್ನು ಪಾರ್ಕಿಂಗ್‌ ಮಾಡಲಾ ಗುತ್ತಿದೆ. ಒಂದು ವೇಳೆ ವಿಸ್ತರಣೆ ಗೊಂಡ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಮುಕ್ತ ಅವಕಾಶ ನೀಡಿದರೆ ಸಂಚಾರಕ್ಕೆ ಮತ್ತೆ ಅಡಚಣೆಯಾಗಿ ಅಭಿವೃದ್ಧಿ ಕಾಮಗಾರಿಯ ಉದ್ದೇಶವೇ ನಿರರ್ಥಕವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

3 ತಿಂಗಳುಗಳಲ್ಲಿ ಪೂರ್ಣ
ರಸ್ತೆ ವಿಸ್ತರಣೆಗೊಳಿಸುವ ಜತೆಗೆ ಮಳೆನೀರು ಚರಂಡಿ, ಫ‌ುಟ್‌ಪಾತ್‌ ನಿರ್ಮಾಣ ಮೊದಲಾದ ಮೂಲಸೌಕರ್ಯ ಒದಗಿಸುವ ಕಾಮಗಾರಿ ಆರಂಭವಾದ ಒಂದು ವಾರದಲ್ಲಿ ಲಾಕ್‌ಡೌನ್‌ ಜಾರಿಗೆ ಬಂತು. ಹಾಗಾಗಿ 2 ತಿಂಗಳುಗಳ ಕಾಲ ಕೆಲಸ ಮಾಡಲು ಸಾಧ್ಯವಾಗಿಲ್ಲ. ಅನಂತರ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಮುಂದಿನ 3 ತಿಂಗಳುಗಳೊಳಗೆ ಕಾಮಗಾರಿ ಮುಗಿಸುವ ಪ್ರಯತ್ನ ನಡೆಸಲಾಗುತ್ತಿದೆ. -ಲಿಂಗೇಗೌಡ, ಕಾರ್ಯನಿರ್ವಾಹಕ ಎಂಜಿನಿಯರ್‌, ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ

ಪಿವಿಎಸ್‌ ಸರ್ಕಲ್‌ ಪರಿಸರದಲ್ಲಿ ಕಾಮಗಾರಿ ನಡೆಯುತ್ತಿರುವುದು.

Advertisement

Udayavani is now on Telegram. Click here to join our channel and stay updated with the latest news.

Next