Advertisement

ಕಸದಿಂದ ಕರೆಂಟ್‌ ತಯಾರಿಸಲು ವೇಗ

01:16 AM Aug 11, 2019 | Lakshmi GovindaRaj |

ಬೆಂಗಳೂರು: ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ (ವೇಸ್ಟ್‌ ಟು ಎನರ್ಜಿ ಪ್ಲಾಂಟ್‌) ಘಟಕ ಸ್ಥಾಪನೆ ಮಾಡುವ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ಮಾವಳ್ಳಿಪುರದ ಜತೆಗೆ ಕನ್ನಹಳ್ಳಿಯಲ್ಲೂ ಕಸದಿಂದ ವಿದ್ಯುತ್‌ ಉತ್ಪಾದನೆ ಮಾಡುವ ಘಟಕ ಸ್ಥಾಪನೆ ಮಾಡಲು ಬೇಕಾದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ.

Advertisement

ಕನ್ನಹಳ್ಳಿ, ಸೀಗೇಹಳ್ಳಿ, ಲಿಂಗಧೀರನಹಳ್ಳಿ, ದೊಡ್ಡಬಿದರಕಲ್ಲು, ಕೊಡ್ಲು, ಚಿಕ್ಕನಾಗಮಂಗಲ, ಸುಬ್ಬರಾಯನ ಪಾಳ್ಯ, ಮಾವಳ್ಳಿಪುರ, ಬಾಗಲೂರಿನ ತ್ಯಾಜ್ಯ ವಿಲೇವಾರಿ ಘಟಕವನ್ನು ವಿದ್ಯುತ್‌ ಉತ್ಪಾದನಾ ಘಟಕಗಳನ್ನಾಗಿ ಪರಿವರ್ತನೆ ಮಾಡುವ ಪ್ರಸ್ತಾವನೆ ಕಗ್ಗಂಟಾಗಿತ್ತು. ಈಗ ಮೊದಲ ಹಂತದಲ್ಲಿ ಮಾವಳ್ಳಪುರ ಹಾಗೂ ಕನ್ನಹಳ್ಳಿಯಲ್ಲಿ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಈ ಮಧ್ಯೆ, ಮಾವಳ್ಳಿಪುರ ಹಾಗೂ ಕನ್ನಹಳ್ಳಿಯಹಲ್ಲಿ ಕಸದಿಂದ ವಿದ್ಯುತ್‌ ಘಟಕ ಸ್ಥಾಪನೆ ಮಾಡುವ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಬಿಎಂಪಿಯ ಕೆಲವು ಅಧಿಕಾರಿಗಳೊಂದಿಗೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಬಿಬಿಎಂಪಿಯ ಕೆಲವರು ಸದಸ್ಯರು ಈ ಹಿಂದೆ ಕೌನ್ಸಿಲ್‌ ಸಭೆಯಲ್ಲಿ, “ತ್ಯಾಜ್ಯ ಘಟಕ ಸ್ಥಾಪನೆಗೆ ನಮ್ಮ ವಾರ್ಡ್‌ನಲ್ಲಿ ಅವಕಾಶ ನೀಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಆದ್ಯತೆ ನೀಡಬೇಕು,ಅನುದಾನ ನೀಡದಿದ್ದಲ್ಲಿ ಘಟಕವನ್ನು ನಿಲ್ಲಿಸುವುದಾಗಿ ಬೆದರಿಕೆಹಾಕಿದ್ದರು.

ಒಂದು ವರ್ಷದಿಂದ ಹಿಂದಿನ ಪ್ರಸ್ತಾವನೆಗಳು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚುರುಕು ಪಡೆದುಕೊಂಡಿವೆ. ಈಗಾಗಲೇ ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿದ್ದು, ಮುಂದೇನು ಎನ್ನುವ ಆತಂಕ ಶುರುವಾಗಿತ್ತು. ಮಿಟಗಾನಹಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಟೆಂಡರ್‌ ಕರೆಯಬೇಕಾಗಿತ್ತು.

Advertisement

ಆದರೆ, ರಾಜ್ಯ ಸರ್ಕಾರ ಬಿಬಿಎಂಪಿ ಬಜೆಟ್‌ ತಡೆಹಿಡಿದಿರುವುದರಿಂದ ಟೆಂಡರ್‌ ಕರೆಯುವುದಕ್ಕೂ ತೊಡಕುಂಟಾಗಿದೆ. ನಗರದಲ್ಲಿ ಮುಂದೆ ತ್ಯಾಜ್ಯ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದಂತೆ ನೋಡಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ತೆರೆ ಮರೆಯಲ್ಲಿ ಸಹಾಸ ಮುಂದುವರಿಸಿದೆ.

ನಗರಾಭಿವೃದ್ಧಿ ಇಲಾಖೆಯ ಮಧ್ಯಸ್ಥಿಕೆ: ನಗರಾಭಿವೃದ್ಧಿ ಇಲಾಖೆಯು ಸಹ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿದೆ.ಈ ಹಿಂದಿನಂತೆ ಪ್ರತಿ ಶನಿವಾರ ಸ್ವತ್ಛತಾ ಆಂದೋಲನ ನಡೆಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದೆ. ಇದರೊಂದಿಗೆ ಯಾವುದೇ ಕಾರಣಕ್ಕೂ ನಗರದಲ್ಲಿ ತ್ಯಾಜ್ಯ ಸಮಸ್ಯೆ ಉಲ್ಬಣವಾಗದಂತೆ ಎಚ್ಚರಿಕೆ ವಹಿಸುವಂತೆಯೂ ನಿರ್ದೇಶಿಸಿದೆ.

ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು: ಮಾವಳ್ಳಿಪುರದಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ ಘಟಕ ನಿರ್ಮಿಸುತ್ತಿರುವ ಕುರಿತು “ಉದಯವಾಣಿ’ ಜತೆ ಮಾತನಾಡಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಘಟಕ ಸ್ಥಾಪನೆ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಆಡಳಿತ ಪಕ್ಷ ಬದಲಾಗಿದೆ ಎಂದು ತ್ಯಾಜ್ಯದ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ.

ಮಾವಳ್ಳಿಪುರದಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಈಗಲೂ ಬದ್ಧನಾಗಿದ್ದೇನೆ. ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕ ಸ್ಥಾಪನೆ ಇನ್ನಷ್ಟೇ ಅಂತಿಮವಾಗಬೇಕಿದೆ. ಇದರಿಂದ ಅಲ್ಲಿನ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಸ್ಥಳೀಯರೊಂದಿಗೆ ಮಾತನಾಡಿಯೇ ಮುಂದುವರೆಯುತ್ತೇನೆ ಎಂದು ಹೇಳಿದರು.

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next