Advertisement

ಸ್ಪೀಡ್‌ ಬ್ರೇಕರ್‌ಗಳಾದ ರಸ್ತೆ ಹೊಂಡಗಳು!

01:12 PM Jun 11, 2018 | Team Udayavani |

ಸುರತ್ಕಲ್ : ಇಲ್ಲಿಯ ಕಾನಾದಿಂದ ಎಂಆರ್‌ಪಿಎಲ್‌ ಕಾರ್ಗೊಗೇಟ್‌ ವರೆಗಿನ ರಸ್ತೆ ಒಂದೇ ಮಳೆಗೆ ಕೆಟ್ಟು ಹೋಗಿದ್ದು, ತಾತ್ಕಾಲಿಕ ದುರಸ್ತಿ ಹೇಳ ಹೆಸರಿಲ್ಲದಂತೆ ನಾಪತ್ತೆಯಾಗಿದೆ.

Advertisement

ರಸ್ತೆ ನಡುವೆಯೇ ಬೃಹತ್‌ ಹೊಂಡಗಳಾಗಿದ್ದು, ಘನ ಲಾರಿಗಳ ಓಡಾಟದಿಂದ ಪ್ರತಿನಿತ್ಯ ಮತ್ತಷ್ಟು ಹಾಳಾಗುತ್ತಿವೆ. ಕಳೆದ ಸೆಪ್ಟಂಬರ್‌ ತಿಂಗಳಲ್ಲಿ ತೀರಾ ಹದೆಗೆಟ್ಟಿದ್ದ ರಸ್ತೆಯನ್ನು ಸ್ಥಳೀಯರ, ಸಂಘ-ಸಂಸ್ಥೆಗಳ ಹೋರಾಟದ ಫಲವಾಗಿ ನಿಕಟಪೂರ್ವ ಶಾಸಕ ಮೊಯಿದಿನ್‌ ಬಾವಾ ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಂಡಿದ್ದರು. ಇದರ ಜತೆಗೆ ಉಳಿದ ಭಾಗದಲ್ಲಿ ಹಾಕಲಾದ ಪ್ಯಾಚ್‌ ವರ್ಕ್‌ ಹತ್ತು ತಿಂಗಳಲ್ಲಿ ಎದ್ದು ಹೋಗಿ ಪ್ರಥಮ ಮಳೆಗೆ ಹೊಂಡ ಬಿದ್ದಿದ್ದು ವಾಹನ ಸವಾರರು ಇನ್ನು ಮಳೆಗಾಲ ಮುಗಿಯುವ ತನಕ ಕಚ್ಚಾ ರಸ್ತೆಯಲ್ಲಿಯೇ ಓಡಾಟ ನಡೆಸಬೇಕಾದ ಸ್ಥಿತಿ ಉಂಟಾಗಿದೆ.

ವಾಹನಗಳ ಡ್ಯಾನ್ಸ್‌ !
ಬೃಹತ್‌ ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ದಿಢೀರನೇ ತಿರುಗಿಸುವ ಕಾರಣ ಎಲ್ಲಿ ಅಪಘಾತವಾಗುವುದೋ ಎಂದು ಭೀತಿ ಪಡುವಂತಾಗಿದೆ. ಈಗ ಹೊಂಡ ತುಂಬೆಲ್ಲ ನೀರು ನಿಂತು ಆಳ ತಿಳಿಯದೆ ವಾಹನ ನಿಯಂತ್ರಣ ತಪ್ಪುವ
ಆತಂಕವೂ ಇದೆ.

ಬೃಹತ್‌ ಕಂಪೆನಿಗಳ ಮುಂಭಾಗ ರಸ್ತೆ ನಾಮಾವಶೇಷ !
ಕಾನಾದಿಂದ ಗಣೇಶಪುರದವರೆಗೆ ಬೃಹತ್‌ ಕಂಪೆನಿಗಳಿದ್ದು, ಇವುಗಳ ಮುಂಭಾಗ ರಸ್ತೆ ಇದೆಯೆ ಎಂಬ ಅನುಮಾನ ಮೂಡದಿರದು. ಘನ ವಾಹನಗಳ ಓಡಾಟದಿಂದ ಡಾಮರು ಕಿತ್ತುಹೋಗಿದೆ. ಹಿಂದಿನ ಸರಕಾರ ಈ ರಸ್ತೆಗೆ 58 ಕೋಟಿ ರೂ. ಮಂಜೂರು ಮಾಡಿದ್ದು, ಮಾಜಿ ಶಾಸಕ ಬಾವಾ ಚತುಷ್ಪಥ ರಸ್ತೆಯಾಗಲಿದೆ ಎಂದು ಘೋಷಣೆ ಮಾಡಿದ್ದರು. ಆದರೆ ಟೆಂಡರು ಅನುಮೋದನೆ ಸಿಗುವ ಮೊದಲೇ ಸರಕಾರ ಬದಲಾಗಿದ್ದು, ಹೊಸ ಸರಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಸ್ತೆ ನಿರ್ಮಾಣಕ್ಕೆ ಆದ್ಯತೆ
ಕಾನಾ ಬಾಳ ರಸ್ತೆ ನಾದುರಸ್ತಿಯಲ್ಲಿರುವುದು ಗಮನಕ್ಕೆ ಬಂದಿದೆ. ಹೊಸ ಸರಕಾರದ ಮೇಲೆ ಒತ್ತಡ ಹಾಕುವ ಮೂಲಕ ಅನುದಾನ ಹಿಂದಕ್ಕೆ ಹೋಗದಂತೆ ಕ್ರಮ ವಹಿಸಿ ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ನೂತನ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರನ್ನು ಭೇಟಿ ಮಾಡಿ ಟೆಂಡರು ಅನುಮೋದನೆಗೆ ಒತ್ತಡ ಹೇರಲಾಗುವುದು. ಅಭಿವೃದ್ಧಿಗೆ ಸರಕಾರ ಸ್ಪಂದಿಸುವ ಆಶಾಭಾವನೆ ಹೊಂದಿದ್ದೇನೆ.
– ಡಾ| ವೈ. ಭರತ್‌ ಶೆಟ್ಟಿ ,
ಶಾಸಕರು ಮಂಗಳೂರು ಉತ್ತರ 

Advertisement

ಟೆಂಡರ್‌ ವಿಳಂಬ ಸಾಧ್ಯತೆ
ಸುರತ್ಕಲ್‌ ಗಣೇಶಪುರವರೆಗೆ 58 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಟೆಂಡರು ಪ್ರಕ್ರಿಯೆ ನಡೆದಿದ್ದು ಅಂತಿಮ ಹಂತದಲ್ಲಿತ್ತು. ಹಿಂದಿನ ಸರಕಾರ ಅನುಮೋದನೆ ಕೊಡುವ ಮೊದಲೇ ಚುನಾವಣೆ ಘೋಷಣೆಯಾಗಿದ್ದರಿಂದ ಇನ್ನು ಹೊಸ ಸರಕಾರದ ನಿರ್ಧಾರವೇ ಅಂತಿಮವಾಗಲಿದೆ. ಇದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದ್ದು, ಮಳೆಗಾಲದಲ್ಲಿ ಪಾಲಿಕೆ ತಾತ್ಕಾಲಿಕ ದುರಸ್ತಿ ಮಾಡುವ ಅಗತ್ಯವಿದೆ.
– ಕಾಂತರಾಜು,
ಲೋಕೋಪಯೋಗಿ ಇಲಾಖೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next