Advertisement

ವಾಕ್‌-ಶ್ರವಣ ಸಮಸ್ಯೆಗಳಿಗೆ ಆಧುನಿಕ ಯಂತ್ರ ಸಂಶೋಧನೆ ಅವಶ್ಯ 

11:31 AM Jan 06, 2018 | |

ಮೈಸೂರು: ದೇಶದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಾಕ್‌ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದ ಆಧುನಿಕ ಯಂತ್ರೋಪಕರಣಗಳನ್ನು ಸಂಶೋಧನೆ ಮಾಡಬೇಕಿದೆ ಎಂದು ರಾಜ್ಯಪಾಲ ವಜುಬಾಯ್‌ ವಾಲಾ ಹೇಳಿದರು.

Advertisement

ಶುಕ್ರವಾರ ನಗರದ ಆಯಿಷ್‌ನ ಪಂಚವಟಿ ಆವರಣದಲ್ಲಿ ಆಯೋಜಿಸಿದ್ದ ಭಾರತೀಯ ವಾಕ್‌-ಶ್ರವಣ ಸಂಘದ 50ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಈ ಹಿಂದೆ ಯಾವುದೇ ಕ್ಷೇತ್ರದಲ್ಲಿ ಸಂಶೋಧನೆಗಳು ಕಡಿಮೆ ಇತ್ತು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಉಪಗ್ರಹಗಳ ಉಡಾವಣೆ, ವಿಮಾನ ತಯಾರಿಕೆ ಸೇರಿದಂತೆ ದೇಶದ ಬಹುತೇಕ ಕ್ಷೇತ್ರಗಳು ಆಧುನಿಕ-ತಂತ್ರಜಾnನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿವೆ.

ಆದ್ದರಿಂದ ವಾಕ್‌ ಮತ್ತು ಶ್ರವಣ ಕ್ಷೇತ್ರದಲ್ಲೂ ಸಂಶೋಧನೆಗಳಿಗೆ ಆದ್ಯತೆ ನೀಡುವ ಮೂಲಕ ಹೊಸ ಆವಿಷ್ಕಾರಗಳ ಬಗ್ಗೆ ಸಂಶೋಧನೆ ಮಾಡಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ವಾಕ್‌ ಮತ್ತು ಶ್ರವಣ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಉಪಕರಣಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲೇ ಇವುಗಳ ಸಂಶೋಧನೆ ಹಾಗೂ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದರೆ, ದುಬಾರಿ ಬೆಲೆಯ ಉಪಕರಣಗಳು ಜನರಿಗೆ ಕಡಿಮೆ ದರದಲ್ಲಿ ಸಿಗುವಂತೆ ಮಾಡಬಹುದಾಗಿದೆ ಎಂದರು.

ಪ್ರಮಾಣಿಕ ಪ್ರಯತ್ನ ಅವಶ್ಯ: ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಪುರುಷರು ಹೆಚ್ಚಾಗಿ ಚಿನ್ನದ ಪದಕಗಳನ್ನು ಪಡೆಯುತ್ತಿದ್ದರು. ಆದರೆ, ಇಂದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನದ ಪದಕಗಳನ್ನು ಪಡೆಯುವ ಮೂಲಕ ತಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಈ ನಿಟ್ಟಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ನಿರ್ದಿಷ್ಟ ಪ್ರಾಮಾಣಿಕ ಪ್ರಯತ್ನದ ಜತೆಗೆ ಧ್ಯೇಯದೊಂದಿಗೆ ಮುನ್ನಡೆಯಬೇಕಿದ್ದು, ಪ್ರತಿ ಕೆಲಸದಲ್ಲೂ ಫ‌ಲಿತಾಂಶ ದೊರೆಯುವ ರೀತಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಸಾಧನೆಯ ಹಾದಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಈ ರೀತಿಯ ಸಾಧನೆಗಳನ್ನು ಮಾಡುವ ಮೂಲಕ ವಿಶ್ವಮಟ್ಟದಲ್ಲಿ ಮನ್ನಣೆ ಪಡೆಯಲು ನೆರವಾಗಲಿದೆ ಎಂದು ಹೇಳಿದರು.

Advertisement

ಸೇವಾ ಮನೋಭಾವವಿರಲಿ: ವೈದ್ಯಕೀಯ ವೃತ್ತಿ ಎಂಬುದು ಸೇವೆ ಆಧಾರಿತ ಕೆಲಸವಾಗಿದ್ದು, ಹಣಗಳಿಕೆಯ ಉದ್ದೇಶ ಮುಖ್ಯವಾಗಬಾರದು. ಕೆಲವು ದಿನಗಳ ಹಿಂದೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2017 (ಕೆಪಿಎಂಇ) ವಿಚಾರದಲ್ಲಿ ಸರ್ಕಾರ ಹಾಗೂ ವೈದ್ಯರ ನಡುವೆ ಉಂಟಾಗಿದ್ದ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದ್ದು, ಇದು ವೈದ್ಯರಿಗೆ ಸಂತೃಪ್ತಿ ನೀಡಿತು.

ಅದೇ ರೀತಿಯಲ್ಲಿ ವೈದ್ಯರು ಉತ್ತಮ ಸೇವೆಯ ಮೂಲಕ ರೋಗಿಗಳಿಗೆ ತೃಪ್ತಿಯಾಗುವಂತೆ ಕೆಲಸ ಮಾಡಬೇಕಿದೆ. ದೇಶದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದ್ದು, ಹೀಗಾಗಿ ವೈದ್ಯರು ಹಣವಂತರಿಂದ ಹಣಪಡೆದು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆ ನೀಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಾಕ್‌ ಮತ್ತು ಶ್ರವಣ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದ ಮುಂಬೈನ ಡಾ.ಗಾಯತ್ರಿ ಹತ್ತಂಗಡಿ, ಮಂಗಳೂರಿನ ಕಸ್ತೂರ್‌ ಬಾ ಮೆಡಿಕಲ್‌ ಕಾಲೇಜಿನ ಡಾ.ಜಯಶ್ರೀ ಎಸ್‌.ಭಟ್‌, ಕಲ್ಲಿಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಮೀರ್‌ ಪೂತೇರಿ ಅವರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಸಂಸ್ಥೆಗೆ ಭೂಮಿ: ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್‌ ಅವರು ಅಮೆರಿಕಾಗೆ ಹೋದಾಗ ಅಲ್ಲಿನ ವಾಕ್‌-ಶ್ರವಣ ಸಂಸ್ಥೆ ನೋಡಿ ಬಂದು ಮೈಸೂರಿನಲ್ಲೂ ವಾಕ್‌-ಶ್ರವಣ ಸಂಸ್ಥೆ ಆರಂಭಕ್ಕೆ 22 ಎಕರೆ ಭೂಮಿ ನೀಡಿದ್ದರು ಎಂದು ಸ್ಮರಿಸಿದರು.

ಸಮಾರಂಭದಲ್ಲಿ ಭಾರತೀಯ ವಾಕ್‌ ಶ್ರವಣ ಸಂಘದ ಅಧ್ಯಕ್ಷೆ ಡಾ. ಆಶಾ ಯತಿರಾಜ್‌, ನಿಕಟಪೂರ್ವ ಅಧ್ಯಕ್ಷೆ ಡಾ.ಮಾಧುರಿ ಘೋರೆ, ಕಾರ್ಯದರ್ಶಿ ಇಂದ್ರನಿಲ್‌ ಕುಲಕರ್ಣಿ, ಡಾ.ಕೃಷ್ಣ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next