ಹುಬ್ಬಳ್ಳಿ: ಜಾತಿ ಗಣತಿ ವರದಿಯೇ ಸಲ್ಲಿಕೆಯಾಗಿಲ್ಲ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಲ್ಲಾ ಚರ್ಚೆಗಳು ಈಗ ಕೇವಲ ಊಹೆಗಳ ಮೇಲೆ ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿ ವರದಿಯನ್ನು ಯಾರಾದರೂ ನೋಡಿದ್ದಾರೆಯೇ? ವರದಿ ಸೋರಿಕೆಯಾಗಿದೆ ಎಂದು ಹಿಂದಿನ ನಮ್ಮ ಸರ್ಕಾರ ಅವಧಿಯಲ್ಲಿ ಆರೋಪಿಸಿದ್ದರು. ಇಂದು ನಡೆಯುತ್ತಿರುವ ಚರ್ಚೆಗಳೆಲ್ಲ ಕೇವಲ ಊಹಾಪೋಹಗಳ ಮೇಲೆ ಎಂದರು.
ಅಲ್ಪಸಂಖ್ಯಾತರಿಗೂ ಹಿಂದೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲಾಗಿತ್ತು. ಈ ಬಾರಿಯೂ ಅವರಿಗೆ ಪ್ರಾತಿನಿಧ್ಯ ನೀಡಲಾಗುವುದು. ಈ ವಿಚಾರದಲ್ಲಿ ಬಿಜೆಪಿ ನಿಲುವು ಬಹಿರಂಗಪಡಿಸಬೇಕು. ಮುಸ್ಲಿಮರು ದೇಶದ ನಾಗರಿಕರಲ್ಲವೆ? ಯತ್ನಾಳ ಬುರ್ಕಾ ಹಾಗೂ ಗಡ್ಡ ಬಿಟ್ಟವರು ಬರಬೇಡಿ ಎಂದು ಹೇಳುತ್ತಾರೆ. ಅವರದು ಬಹುತ್ವದ ಪಕ್ಷವೇ ಎಂಬುದನ್ನು ಹೇಳಬೇಕು. ನಮ್ಮ ದೇಶ ಬಹುತ್ವದ ದೇಶ. ಇಲ್ಲಿರುವವರೆಲ್ಲಾ ದೇಶದ ನಾಗರಿಕರು. ಪ್ರಧಾನಿ ನರೇಂದ್ರ ಮೋದಿ, ನಿತಿನ್ ಗಡ್ಕರಿ, ಅಮಿತ್ ಶಾ ಅವರ ಪಕ್ಕದಲ್ಲಿ ಕುಳಿತಿಲ್ಲವೆ. ಕಳೆದ ಚುನಾವಣೆಯಲ್ಲಿ ಅಲ್ಲಿನ ಮೌಲ್ವಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದರು. ಈ ದ್ವೇಷಕ್ಕಾಗಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇವರೊಂದಿಗೆ ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುತ್ತಾರೆ ಅಲ್ಲವೆ ಎಂದರು.
ಭೇಟಿಗೆ ಸಮಯ ಕೊಡುತ್ತಿಲ್ಲ: ಕೇಂದ್ರ ಸಚಿವರ ಭೇಟಿ ಮಾಡಲು ಹೊರಟಿದ್ದೇನೆ. ನ.27ರಂದು ಪತ್ರ ಬರೆದು ತಮ್ಮನ್ನು ಭೇಟಿಯಾಗಲು ಬರುತ್ತಿದ್ದು, ಬರದ ಬಗ್ಗೆ ಚರ್ಚಿಸಲು ಕಾಲಾವಕಾಶ ನೀಡಬೇಕು ಎಂದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಳಿದ್ದೆ. ಇಂದಿಗೂ ಸಮಯ ನೀಡಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ರಾಜ್ಯದ ಮುಖ್ಯಮಂತ್ರಿಗೆ ಈ ಪರಿಸ್ಥಿತಿಯಿದೆ. ಇನ್ನು ರಾಜ್ಯದ ಸಚಿವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಚಿವರಾದ ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಚೆಲುವರಾಯಸ್ವಾಮಿ ಪತ್ರ ಬರೆದು ಕೋರಿದರೂ ಸಮಯ ನೀಡಿಲ್ಲ ಎಂದರು.
ಮಕ್ಕಳನ್ನು ಗುಂಡಿಗೆ ಇಳಿಸಿದ ಪ್ರಕರಣ: ವರದಿಗೆ ಸೂಚನೆ
ಮಾಳೂರು ಶಾಲೆಯೊಂದರಲ್ಲಿ ಮಕ್ಕಳನ್ನು ಗುಂಡಿಗೆ ಇಳಿಸಿರುವ ಪ್ರಕರಣ ಗೊತ್ತಾಗಿದೆ. ಸಂಪೂರ್ಣ ಮಾಹಿತಿಯಿಲ್ಲ. ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತಪ್ಪಿಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.