Advertisement

ರೈಲ್ವೇ ಸಂಪರ್ಕ ಸುಧಾರಣೆಗೆ ಸ್ಪೆಕ್ಟ್ರಂ ನೆರವು : ಕೇಂದ್ರ ಸಂಪುಟದ ಮಹತ್ವದ ನಿರ್ಧಾರ

01:27 AM Jun 10, 2021 | Team Udayavani |

ಹೊಸದಿಲ್ಲಿ: ದೇಶದ ರೈಲ್ವೇ ಜಾಲದ ಸಿಗ್ನಲಿಂಗ್‌ ಮತ್ತು ಸಂಪರ್ಕ ವ್ಯವಸ್ಥೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ 5 ಮೆಗಾಹರ್ಟ್ಸ್ ಸ್ಪೆಕ್ಟ್ರಂ ಅನ್ನು ನೀಡಲು ಸಮ್ಮತಿ ಸೂಚಿಸಲಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಇದು ನೆರವಾಗಲಿದೆ. 5 ಮೆಗಾಹರ್ಟ್ಸ್ ಸ್ಪೆಕ್ಟ್ರಂನ 700 ಮೆಗಾಹರ್ಟ್ಸ್ ಬ್ಯಾಂಡ್‌ನಿಂದಾಗಿ ಎಲ್‌ಟಿಇ ಆಧಾರಿತ ಮೊಬೈಲ್‌ ಟ್ರೈನ್‌
ರೇಡಿಯೋ ಸಂಪರ್ಕ ವ್ಯವಸ್ಥೆಯನ್ನು ಹೊಂದಲು ಸಾಧ್ಯವಾಗಲಿದೆ. ಈ ಯೋಜನೆ ಜಾರಿಗೆ 25 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತದೆ ಮತ್ತು 5 ವರ್ಷಗಳ ಅವಧಿಯಲ್ಲಿ ಅದನ್ನು ಪೂರ್ತಿಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಈ ತಂತ್ರಜ್ಞಾನದಿಂದಾಗಿ ಭಾರತೀಯ ಕಂಪೆನಿಗಳು ಅಭಿವೃದ್ಧಿಪಡಿಸಿದ ರೈಲು ಅಪಘಾತ ತಡೆ ತಂತ್ರಜ್ಞಾನ “ಆ್ಯಂಟಿ ಕೊಲಿಷನ್‌ ಸಿಸ್ಟಮ್‌’ ಅನ್ನು ಸುಸೂತ್ರವಾಗಿ ಜಾರಿ ಮಾಡಲಾಗುತ್ತದೆ. ರೈಲ್ವೇಯ ಸಿಗ್ನಲ್‌ ವ್ಯವಸ್ಥೆ ಮೇಲ್ದರ್ಜೆಗೆ ಏರಿಸುವುದರಿಂದ ಕ್ಷಿಪ್ರವಾಗಿ ಚಾಲಕರು ಮತ್ತು ಸಿಬಂದಿ ನಡುವೆ ಸಂಪರ್ಕ ಸಾಧ್ಯವಾಗಲಿದೆ.

ಪ್ರಸ್ತುತ ಫೈಬರ್‌ ಕೇಬಲ್‌ ಮೂಲಕ ರೈಲ್ವೇಯ ಸಂವಹನ ವ್ಯವಸ್ಥೆ ನಡೆಯುತ್ತಿದೆ.

ಭಾರೀ ಬದಲಾವಣೆ
ಹೊಸ ವ್ಯವಸ್ಥೆ ಜಾರಿಯಿಂದ ರೈಲ್ವೇಯಲ್ಲಿ ಭಾರೀ ಬದಲಾವಣೆ ಆಗಲಿದೆ. ಇರುವ ಮೂಲ ಸೌಕರ್ಯವನ್ನು ಬಳಸಿಕೊಂಡು ಹೆಚ್ಚು ರೈಲುಗಳ ಓಡಾಟ ಸಾಧ್ಯವಾಗಲಿದೆ. ನಿರ್ವಹಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ ಆಗಲಿದ್ದು, ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ರೈಲ್ವೇ ತಿಳಿಸಿದೆ.

Advertisement

ಯೂರಿಯಾ ಹೆಚ್ಚಳಕ್ಕೆ ಕ್ರಮ
ತೆಲಂಗಾಣದ ರಾಮ ಗುಂಡಂ ನಲ್ಲಿರುವ ರಸ ಗೊಬ್ಬರ ಕಾರ್ಖಾ ನೆಯಲ್ಲಿ ಹೆಚ್ಚಿನ ಪ್ರಮಾಣದ ಯೂರಿಯಾ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಾಗಿ ಹಲವು ವಿನಾಯಿತಿ ಕ್ರಮಗಳನ್ನೂ ಪ್ರಕಟಿಸಲಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಯೂರಿಯಾ ಸಿಗಲಿದೆ.

ಮಾತುಕತೆಗೆ ಸಿದ್ಧ
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಜತೆಗೆ ಮಾತುಕತೆ ನಡೆಸಲು ಸರಕಾರ ಬದ್ಧವಾಗಿದೆ ಎಂದಿದ್ದಾರೆ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌. ಮೂರು ಕಾಯ್ದೆಗಳಲ್ಲಿರುವ ಆಕ್ಷೇಪಾರ್ಹ ಅಂಶಗಳನ್ನು ಸಂಘಟನೆಗಳು ಪಟ್ಟಿ ಮಾಡ ಬೇಕು ಎಂದಿದ್ದಾರೆ. ಬಿಕ್ಕಟ್ಟು ಪರಿಹಾರಕ್ಕಾಗಿ ಇದುವರೆಗೆ 11 ಸುತ್ತಿನ ಮಾತುಕತೆಗಳು ನಡೆದಿವೆ. ಹಿಂದಿನ ಸರಕಾರಗಳು ಕೂಡ ಕಾಯ್ದೆ ಜಾರಿಗೆ ಪ್ರಯತ್ನಿಸಿದ್ದರೂ ಯಶಸ್ವಿಯಾಗಲಿಲ್ಲ ಎಂದರು ತೋಮರ್‌.

Advertisement

Udayavani is now on Telegram. Click here to join our channel and stay updated with the latest news.

Next