ಚಳಿಗಾಲ ಸಣ್ಣಗೆ ಮಗುಚಿ ಬಿಸಿಲು ಏರುವ ಹೊತ್ತಿಗೆ ಮಾರ್ಚ್ ಎಂಟು ಎನ್ನುವ ದಿನ ಸದ್ದಿಲ್ಲದೆ ಎದುರು ನಿಲ್ಲುತ್ತದೆ. ಈಗ್ಗೆ ಹತ್ತು ವರ್ಷದ ಹಿಂದೆ ಅತಿ ಸಾಮಾನ್ಯ ಎನ್ನುವ ಹಾಗಿದ್ದ ಈ ದಿನಾಂಕವು ಬದುಕು ಮಾಲ್ ಗಳ ಹಂತಕ್ಕೆ ಬಂದು ನಿಂತ ಮೇಲೆ ಅತೀ ಮಹತ್ವ ಪಡೆದುಕೊಂಡಿದೆ. ಸರಕು ಸರಂಜಾಮುಗಳೆ ಜೀವನದ ಮೂಲ ಆಶಯ ಎನ್ನುವ ಕಲ್ಪನೆ ಹೊರಿಸಿದ ಮಾಧ್ಯಮಗಳು, ಜಾಹೀರಾತುಗಳು ಪ್ರತಿಯೊಂದು ಘಟನೆಗಳನ್ನು, ಘಟ್ಟಗಳನ್ನು ಅತೀ ವೈಭವಿಕರಿಸಿ ತಮ್ಮ ಉತ್ಪನ್ನಗಳ ಮಾರಾಟಕ್ಕಿಳಿಯುವುದು ಈ ದಿನಮಾನಗಳ ಅತಿ ಮಾಮೂಲು ವಿಚಾರ. ಹೀಗೆ ಕೈಗೆ ಸಿಕ್ಕ ದಿನಗಳಲ್ಲಿ ಮಹಿಳಾ ದಿನವೂ ಒಂದು ಎನ್ನುವುದು ನನ್ನ ಅಭಿಪ್ರಾಯ. ಇದು ತುಸು ಕಟುಕ ಹೇಳಿಕೆ ಎನ್ನಿಸುತ್ತದೆ. ಎಲ್ಲದರಲ್ಲಿಯೂ ಕೆಸರು ಹುಡುಕುವ ಅಭ್ಯಾಸ ಅಂತಲೂ ಅನ್ನಿಸುತ್ತದೆ. ಆದರೆ ಈ ಅಬ್ಬರದಲ್ಲಿ ಸ್ತ್ರೀಯರ ಕುರಿತಾದ ಆಲೋಚನೆಗಳು ಬದಲಾಗಿವೆಯಾ ? ದೌರ್ಜನ್ಯ ನಿಂತಿದೆಯಾ ? ಎಂದು ನೀವು ಕೇಳಿದರೆ. ಅಥವಾ ಸೂಕ್ಷ್ಮ ಗಮನಿಸಿದರೆ ಈ ಮಾತು ಸತ್ಯ ಎನ್ನಿಸತೊಡಗುತ್ತದೆ. ಹಾಗಂತ ಏನೂ ಬದಲಾಗಿಯೇ ಇಲ್ಲವಾ ಎಂದು ಮತ್ತೊಂದು ಮರು ಪ್ರಶ್ನೆ ಕೇಳಿಕೊಂಡರೆ, ಕೊಂಚ ಮಟ್ಟಿಗೆ ಹೌದು ಎನ್ನಬಹುದು. ಇಡೀ ವರ್ಷ ಅಲ್ಲದಿದ್ದರೂ, ಆ ದಿನದ ಮಟ್ಟಿಗಾದರೂ ಕೆಲ ಸ್ತ್ರೀಯರ ಹೊಸ ಹೊಸ ರೇಷಿಮೆ ಸೀರೆಯುಟ್ಟು ತಮಗೆ ಬೇಕೆನ್ನಿಸಿದ ಹಾಡು ಹಾಡಿ, ಯಾವುದೋ ಆಟ ಆಡಿ, ಗಂಭೀರ ಗೋಷ್ಟಿ ನಡೆಸುತ್ತಾರೆ.
ಇನ್ನು ಹಲವಾರು ಕಾರ್ಪೋರೇಟ್ ಕಂಪನಿಗಳು ತಮ್ಮ ಮಹಿಳಾ ಸಿಬ್ಬಂದಿಗಾಗಿ ಉಡುಗೊರೆಗಳನ್ನು, ಆಫರ್ ಗಳನ್ನು ನೀಡಿ ಉಲ್ಲಾಸಿತಗೊಳಿಸುತ್ತಾರೆ. ಸಾಧಕಿಯರಿಗೆ ಸನ್ಮಾನಗಳು. ಅಲ್ಲೊಂದು ಇಲ್ಲೊಂದು ಸ್ತ್ರೀ ಪರ ಭಾಷಣಗಳು. ಸ್ತ್ರೀಯರನ್ನು ಉದ್ದಾರ ಮಾಡಿಯೇ ಬಿಡಬೇಕು ಎನ್ನುವ ಘೋಷಣೆಗಳು ತಾರಕಕ್ಕೇರಿ ಇಳಿಯುತ್ತವೆ. ಇದೆಲ್ಲವೂ ಸರಿ.
ಆದರೆ, ಇದರಿಂದಾಗುವ ಬದಲಾವಣೆ ಏನು? ಇದೇ ಉಲ್ಲಾಸಗಳು ಸ್ಲಮ್ಮಿನ ಆ ಕೊನೆ ತುದಿಯಲ್ಲಿ ಇರುವ ಮುರುಕು ಮನೆಯ ಹದಿನೆಂಟರ ಬಾಲೆಗೆ ನಿಲುಕುತ್ತದೆಯಾ ? ರಾತ್ರಿಯಾದರೆ ಕುಡಿದು ಬಂದು ದನ ಬಡಿಯುವ ಹಾಗೆ ಬಡಿಯುವ ಆ ಗಂಡನ ಹೆಂಡತಿಗೆ ದಕ್ಕಿದೆಯಾ ? ರಸ್ತೆಯಲ್ಲಿ ಪುಟ್ಟ ಕಂದಮ್ಮನನ್ನು ರಾತ್ರಿಯಾರಾದರೂ ಕೊಂಡೊಯ್ದರೆ ಎಂದು ಕಾಯುವ ಅಮ್ಮನ ಕಣ್ಣಿನಲ್ಲಿ ಇದೆಯಾ? ಅಥವಾ ಅಪ್ಪ ಸತ್ತ ಸುದ್ದಿ ಕೇಳಿದ ಮೇಲೆಯೂ ರಾತ್ರಿ ಬಸ್ಸಿಗೆ ಹೊರಡುವ ಮುಂಚೆ ಹತ್ತು ಬಾರಿ ಯೋಚಿಸಬೇಕಾದ ಮಗಳ ಕೈಗೆ ನಿಲುಕಿದೆಯಾ? ಮೇಲಿನ ಅಧಿಕಾರಿಯ ಕೈಗೆ ಸಿಕ್ಕ ಗಾರ್ಮೆಂಟ್ ಫ್ಯಾಕ್ಟರಿಯ ಬಡ ಜೀವಕ್ಕೆ ತಲುಪಿದೆಯಾ? ಬಹುಶ: ಈ ಎಲ್ಲದಕ್ಕು ನಾವು ಇಲ್ಲ ಎಂತಲೇ ಹೇಳಬೇಕು. ನಾವು ಮಹಿಳೆಯರು ಎಂದಾಕ್ಷಣ ಕೇವಲ ಮಧ್ಯಮ, ಕೆಳಮಧ್ಯಮ. ಅಥವಾ ಮೇಲ್ ಸ್ತರದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಬಿಡುತ್ತೇವೆ. ಯಾರೋ ನಾಲ್ಕು ಜನ ಹೆಣ್ಣು ಮಕ್ಕಳು ಟೋನ್ಡ್ ಜೀನ್ಸ್ ಹಾಕಿ, ಯಾವುದೋ ರೀಲ್ಸ್ ನಲ್ಲಿ ಒಂದು ವಿಡಿಯೋ ಅಪಲೋಡ್ ಮಾಡಿ. ಎರಡು ಪೆಗ್ ವಿಸ್ಕಿ ಏರಿಸಿದರೆ ಅಲ್ಲಿಗೆ ಅವರು ಬಹಳ ಮುಂದುವರೆದಿದ್ದಾರೆ ಅಂದುಕೊಳ್ಳುವುದು, ಸಂಸ್ಕೃತಿಯೇ ಹೋಯ್ತು ಎಂದು ಅರಚಾಡುವುದು, ಹೆಣ್ಣು ಮಕ್ಕಳಿಗೆ ಇಷ್ಟು ಸ್ವಾತಂತ್ರ್ಯ ಕೊಡಬಾರದು ಎಂದು ರಸೀದಿ ಹರಿಯುವುದು.ಅಥವಾ ಅವರಷ್ಟೆ ಸ್ತ್ರೀ ಸಮುದಾಯ ಅಂದುಕೊಳ್ಳುವುದು ವಿಪರ‍್ಯಾಸವೇ ಸರಿ. ಅಥವಾ ಅದೆಲ್ಲ ಮಾಡಿದಾಕ್ಷಣಕ್ಕೆ ಸ್ತ್ರೀಯರ ಸಮಸ್ಯೆಗಳು ಬಗೆ ಹರಿದಿವೆ ಅಂದುಕೊಳ್ಳುವುದು ಕೂಡ ಭ್ರಮೆಯೇ.
ಓದಿ : ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ “ಸ್ವಯಂ-ಆರೈಕೆ”ಯ ಉಡುಗೊರೆ
ಈಗಲೂ ಶೇಕಡಾ 90% ಹೆಣ್ಣು ಜೀವಗಳು ತಮ್ಮ ಅಸ್ತಿತ್ವದ ಸಲುವಾಗಿ ಹೋರಾಡುತ್ತವೆ. ಹೆಣ್ಣು ಎನ್ನುವ ಕಾರಣಕ್ಕೆ ತಿರಸ್ಕರಿಸಿಕೊಳ್ಳುತ್ತವೆ. ನಿಯಂತ್ರಣಕ್ಕೆ ಒಳಪಡುತ್ತವೆ. ಬಹುಶ: ಇದು ಪುರುಷ ಲೋಕದ ಕಲ್ಪನೆಗು ನಿಲುಕದ್ದು. ಯಾವುದೇ ಗಂಡಸರು ರಾತ್ರಿ ತಮಗೆ ಬೇಕಾದ ಹೊತ್ತಿನಲ್ಲಿ ಹೊರಗೆ ಹೋಗಿ ಸಿಗರೇಟು ಸೇದಿ ಬರುವುದಕ್ಕೆ ಯೋಚಿಸಬೇಕಾದ ಸ್ಥಿತಿ ಇರುವುದಿಲ್ಲ. ಆದರೆ ಹೆಣ್ಣು ಮಗಳೊಬ್ಬಳು ಹಗಲು ಕತ್ತಲೆಗೆ ಜಾರಿದ ತಕ್ಷಣಕ್ಕೆ ಭಯಗೊಳ್ಳಲು ಆರಂಭಿಸುತ್ತಾಳೆ. ಆದಷ್ಟು ಬೇಗ ಸುರಕ್ಷಿತ ಜಾಗ ತಲುಪುವ ಸಲುವಾಗಿ ಕಾತರಿಸುತ್ತಾಳೆ. ಎಷ್ಟೇ ತುರ್ತು ಇದ್ದರೂ ಹಗಲನ್ನು ಕಾಯುತ್ತ ಕೂರುತ್ತಾಳೆ. ಎಲ್ಲಿದೆ ಸ್ತ್ರೀ ದೌರ್ಜನ್ಯ ಎನ್ನುತ್ತ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸಿಕೊಳ್ಳುವವರು ಇದಕ್ಕೆ ಉತ್ತರಿಸಬೇಕು ತಾವು ಕಟ್ಟಿಕೊಟ್ಟ ಸಮಾಜವನ್ನು ತಾವೇ ನಿಂತು ಸ್ತ್ರೀಯರ ದೃಷ್ಟಿಕೋನದಲ್ಲಿ ನೋಡಬೇಕು.
ತಮ್ಮಂತೆಯೇ ಬುವಿಗೆ ಬಂದ ಮತ್ತೊಂದು ಜೀವ ಸಂಕುಲಕ್ಕೆ ಧರ್ಮ, ಸಂಸ್ಕೃತಿ, ಆಚರಣೆ ಅದೂ ಇದೂ ರಗಳೆ ಮಣ್ಣು ಮಸಿ ಎಂದೆಲ್ಲ ಬೇಲಿ ಹೆಣೆದುದನ್ನು ತಾವೇ ಅನುಭವಿಸಿ ನೋಡಬೇಕು. ಮಗಳು ಬರುವುದು ಕೊಂಚ ತಡವಾದರೂ ಜೀವ ಬಾಯಿಗೆ ಬಂದವರ ಹಾಗೆ ಥರಗುಟ್ಟುವ ಅಮ್ಮಂದಿರ, ಅಪ್ಪಂದಿರ ಪರಿಸ್ಥಿತಿ ಕಾಣಬೇಕು. ಇನ್ನು ತಮಾಷೆ ಎಂದರೆ ಇದನ್ನೆಲ್ಲ ಸಮರ್ಥಿಸಿಕೊಳ್ಳುವ ಕೆಲವರಿದ್ದಾರೆ ಅವರುಗಳು ನಿಮ್ಮ ಸುರಕ್ಷತೆಯ ಸಲುವಾಗಿ ಇದೆಲ್ಲ ಕಟ್ಟುಪಾಡು ಎನ್ನುತ್ತ ದೊಡ್ಡದೊಂದು ನಗೆ ಬೀರುತ್ತಾರೆ. ಸುಮ್ಮನೆ ಯೋಚಿಸಿ ನೋಡಿ. ನಾವುಗಳು ಯಾವುದರಿಂದ ಸುರಕ್ಷಿತವಾಗಿರಬೇಕು? ಮೃಗಗಳಿಂದಲೆ ಮನುಷ್ಯರಿಂದಲೇ? ಹಸಿವೆಯಾದಾಗಷ್ಟೆ ಭೇಟೆಯನ್ನು ಹುಡುಕುವ ಪ್ರಾಣಿಗಳಿಂದ ಆಗೀಗ ಅಪಾಯ ಎನ್ನಿಸಬಹುದು ಆದರೆ ಯಾರದೋ ಮನೆಯ ಅಣ್ಣ, ಅಪ್ಪ, ಗಂಡ, ಮಾವ, ಇವರೆಲ್ಲರೂ ಅಪರಿಚಿತ ಹೆಣ್ಣಿಗೆ ಅಪಾಯಕಾರಿಯಂತೆ ಕಾಣುವುದು ಯಾವ ಸಜ್ಜನ ಸಮಾಜದ ಲಕ್ಷಣ? ತಮ್ಮಂತೆಯೇ ಇರುವ ಮತ್ತೊಂದು ಜೀವದ ಬದುಕುವ ಹಕ್ಕು ಕಸಿಯುವುದು ಯಾವ ಪುರುಷಾರ್ಥ ? ಹಾಗೆ ನೋಡಿದರೆ ಇಡೀ ಪ್ರಕೃತಿ ನಿಂತಿರುವುದು ಹೆಣ್ಣಿನ ಮೇಲೆಯೇ. ಅಲ್ಲಿ ಗಂಡು ಎನ್ನುವವ ಸೃಷ್ಟಿ ಕ್ರಿಯೆಗೆ ಪೂರಕನಾದವನು. ಸೊಳ್ಳೆ, ಜೇಡ ಮತ್ತು ಇನ್ನಿತರೇ ಕೀಟಗಳಲ್ಲಿ ಹೆಣ್ಣಿನ ಜೊತೆ ಗಂಡು ಸಂಯೋಜಿತಗೊಂಡ ನಂತರ ತನಗೆ ತಾನೆ ಸತ್ತು ಹೋಗುತ್ತದೆ. ಅಲ್ಲಿಗೆ ಅದರ ಕೆಲಸ ಮುಗಿಯಿತು ಎನ್ನುವುದನ್ನು ಸೃಷ್ಟಿ ತೋರಿಸುತ್ತದೆ. ಅಥವಾ ನೀವು ಇಡೀ ಪ್ರಾಣಿ ಸಂಕುಲದ ಸರಪಳಿಯನ್ನೆ ಗಮನಿಸಿ ನೋಡಿ. ಎಲ್ಲಿಯೂ ಗಂಡು ಸರ್ವಾಭಿಷಕ್ತ ಎನ್ನಿಸಿಕೊಳ್ಳುವುದೇ ಇಲ್ಲ.
ಅಷ್ಟೇಕೆ ನಿಮ್ಮ ಮನೆಯಲ್ಲಿರುವ ದನ ಮತ್ತು ಎತ್ತನ್ನೇ ನೋಡಿ. ಯಾವುದಕ್ಕೆ ಮಹತ್ವವಿದೆ ಎಂದು. ಆದರೆ ಮನುಷ್ಯ ವರ್ಗದಲ್ಲಿ ಮಾತ್ರ ಪುರುಷರು ಇಡೀ ಸೃಷ್ಟಿಕ್ರಿಯೆಯ ಮುಖ್ಯಸ್ಥರು ಎಂದು ಬಿಂಬಿಸಿಕೊಳ್ಳುತ್ತಾರೆ. ಇಡೀ ವಂಶ ಅವರ ಹೆಸರಿನಿಂದಲೇ ಮುಂದುವರೆಯುತ್ತದೆ. ಮಕ್ಕಳ ಮುಂದೆ ತಮ್ಮ ಛಾಪನ್ನು ಒತ್ತಿಕೊಳ್ಳುತ್ತ ಹೋಗುತ್ತಾರೆ. ಆದರೆ ನನಗನ್ನಿಸುವ ಮಟ್ಟಿಗೆ ಇದೆಲ್ಲವೂ ಅವರ ಭಯದ ಕಾರಣಗಳು. ಮನುಷ್ಯರ ಆರಂಭಿಕ ಬದುಕಿನ ಘಟ್ಟಗಳನ್ನು ನೋಡಿದರೆ ಈ ಎಲ್ಲವೂ ತಿಳಿದುಬಿಡುತ್ತದೆ. ಮೊದಲು ಇದ್ದದ್ದು ಮಾತೃಪ್ರಧಾನ ಸಂಸ್ಕೃತಿ. ತದನಂತರದಲ್ಲಿ ಆಕೆಗೆ ಹೆರಿಗೆಯ ಕಾರಣಕ್ಕೆ ಮಕ್ಕಳ ಪೋಷಣೆಯ ಕಾರಣಕ್ಕೆ ಆಕೆ ಹಿನ್ನೆಲೆಗೆ ಸರಿಯುತ್ತ ಹೋಗಿ ಪುರುಷರು ಯಜಮಾನ್ಯವನ್ನು ಕೈಗೆತ್ತಿಕೊಂಡರು. ತಮ್ಮ ಅಸ್ತಿತ್ವವನ್ನು ನಿಚ್ಚಳಿಯದೆ ಉಳಿಸುವ ರೀತಿ ಶಾಸ್ತ್ರ, ಸಂಪ್ರದಾಯ, ಧರ್ಮಗಳನ್ನು ತಮಗೆ ಬೇಕಾದ ಹಾಗೆ ರೂಪಿಸಿ ಹೋದರು. ಎಲ್ಲ ದೇವರುಗಳು ಕೂಡ ಪುರುಷರ ರೂಪದಲ್ಲಿಯೇ ಅವತರಿಸಿದರು. ಎಲ್ಲ ಮಹಾನ್ ಗುರುಗಳು ಪುರುಷರೇ ಆದರು. ಬಳಸುವ ಭಾಷೆ, ನಡೆ, ನುಡಿ, ಜನಪದ, ಸಾಹಿತ್ಯ, ಬರವಣಿಗೆ, ಇತಿಹಾಸ.
ಎಲ್ಲವನ್ನು ಅವರುಗಳ ಹೆಸರನ್ನು ದಾಖಲಿಸುತ್ತ ಹೋದವು. ಅದು ಅವರೇ ನಿರ್ಮಿಸಿದ್ದು ಅದು ಬೇರೆ ವಿಷಯ. ಇಡೀ ಮಾನವ ಕುಲ ಅದಕ್ಕೆ ಜೋತು ಬೀಳತೊಡಗಿತು. ಇಲ್ಲಿ ಡಾರ್ವಿನ್ಸ್ ಥಿಯರಿ ನನಗೆ ಬಹಳ ನೆನಪಿಗೆ ಬರುತ್ತದೆ. “ಉಳಿವಿಗಾಗಿ ಹೋರಾಟ” ಯಾರು ಬಲಾಢ್ಯರೋ ಅವರು ಸೃಷ್ಟಿಯನ್ನು ಆಳುತ್ತಾರೆ ಅದು ಬಿಟ್ಟು ಬೇರೆ ಯಾವ ಮಹಾನ್ ಘನಕಾರ್ಯವೂ ಇಲ್ಲಿ ಇಲ್ಲ. ಅದರ ಮತ್ತೊಂದು ರೂಪ ವಂಶವನ್ನು ಪುರುಷರ ಹೆಸರಿನಿಂದ ಗುರುತಿಸಿಕೊಳ್ಳುತ್ತ ಹೋಗುವುದು. ಹೆಂಗಸರ ಇರುವಿಕೆಯನ್ನು ಉದ್ದೇಶ ಪೂರ್ವಕವಾಗಿ ಹತ್ತಿಕ್ಕುವುದು. ಆ ಮೂಲಕ ತಮ್ಮ ಛಾಪು ಎಲ್ಲಿಯೂ ಸುಕ್ಕಾಗದಂತೆ ನೋಡಿಕೊಳ್ಳುವುದು.
ನಾವೀಗಲು ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದೇ ಹೆಂಗಸರ ಕುರಿತಾಗಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಹೆಣ್ಣನ್ನು ಮಾಯೆ ಎಂದುಬಿಡುವುದು. ದೌಭಾಗ್ಯ ಎನ್ನುವುದು, ಅಥವಾ ಆಕೆ ಕೇವಲ ಹೆರಿಗೆಯ ಯಂತ್ರ ಎಂದು ಭಾವಿಸಿ ಬಿಂಬಿಸುವುದು. ಅದೊಂದು ತನ್ನ ತೃಷೆ ನೀಗಿಸುವ ಸಲುವಾಗಿ ಭಗವಂತ ಕಳಿಸಿದ ವಸ್ತು ಎಂದು ಪರಿಕಲ್ಪಿಸುವುದು . ಅಥವಾ ಆಕೆಯನ್ನು ದೇವಿಯೆನ್ನುತ್ತ ಗುಡಿಯಲ್ಲಿ ಕೂಡಿ ಬಿಡುವುದು. ಈ ಎಲ್ಲವೂ ಪುರುಷರು ತಮ್ಮದೇ ಮೂಸೆಯಲ್ಲಿ ರೂಪಿಸಿಕೊಂಡಿರುವ ತಮ್ಮದೇ ಮನೋಭಾವ. ಹಾಗಾಗಿ ಇದರ ಹೊರತಾಗಿ ಅವರಿಗೆ ಹೆಣ್ಣನ್ನು ಮನುಷ್ಯಳಂತೆ ಕಾಣುವುದು, ಆಕೆ ತಮ್ಮ ಸಹಚಾರಿಣಿ, ಸಹಜೀವಿ ಎಂದು ಒಪ್ಪಿಕೊಳ್ಳುವುದು ಈ ಗಳಿಗೆಗೂ ಸಾಧ್ಯವಾಗಿಲ್ಲ. ಇದು ಒಂದು ಕಾಲಮಾನಕ್ಕೆ ಉಲ್ಟಾ ಹೊಡೆದು ಮತ್ತೊಮ್ಮೆ ಮಾತೃಪ್ರಧಾನ ಸಂಸ್ಕೃತಿ ಬಂದಿದ್ದೆ ಆದಲ್ಲಿ. ಈಗ ಯಾವುದೆಲ್ಲ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿದೆಯೋ ಅವೆಲ್ಲವೂ ಬದಲಾಗುವುದರಲ್ಲಿ ಆಶ್ರಯವಿಲ್ಲ.
ಈಗ ಹೆಣ್ಣು ಮಕ್ಕಳ ಭ್ರೂಣ ಕೊಲ್ಲಿಸುವ ಅತ್ತೆ, ಮಾವ, ಗಂಡಂದಿರು. ನಾಳೆ ಗಂಡು ಮಕ್ಕಳ ಭ್ರೂಣ ತೆಗೆಸುತ್ತಾರೆ. ಉದಾಹರಣೆಗೆ ಹೋರಿ ಕರುವನ್ನು ಬೀದಿಗೆ ಬಿಸಾಡಿದ ಹಾಗೆ. ಹಾಗೊಂದು ದಿನ ಎಲ್ಲಿ ಬಂದು ಬಿಡುತ್ತದೆಯೋ ಎನ್ನುವ ಭಯದಲ್ಲಿಯೇ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತಷ್ಟು ಮತ್ತಷ್ಟು ದಾರಿ ತಪ್ಪುತ್ತಿದೆ. ಧರ್ಮ, ಸಂಸ್ಕೃತಿ ಎನ್ನುವ ಹೆಸರಿನಲ್ಲಿ ಬಾಲೆಯರನ್ನು ಅತೀ ನಿಯಂತ್ರಿಸುವ ಮನೋಭಾವ ಹುಟ್ಟಿಕೊಳ್ಳುತ್ತಿದೆ. ಯಾವುದೂ ಸಾಧ್ಯವಾಗದೆ ಇದ್ದಾಗ ಅವಳ ದೇಹದ ಮೇಲೆ, ಅವಳ ವ್ಯಕ್ತಿತ್ವದ ಮೇಲೆ ದಾಳಿ ನಡೆಸುವ ಪ್ರಕ್ರಿಯೆಗಳು ದಿನೆ ದಿನೆ ಹುಟ್ಟಿಕೊಳ್ಳುತ್ತಿವೆ. ಹೀಗಾಗಿಯೆ ನಾಲ್ಕೈದು ತಿಂಗಳ ಮಗುವಿನಿಂದ ಹಿಡಿದು ಎಂಬತ್ತರ ಮುದುಕಿಯರವರೆಗೆ ಅತ್ಯಾಚಾರ ಎನ್ನುವ ಹಣೆಪಟ್ಟಿ ಹೊತ್ತು ನಿಷ್ಕಾರಣವಾಗಿ ಸಾಯುತ್ತಿದ್ದಾರೆ. ಇನ್ನು ಕುಟುಂಬ ವ್ಯವಸ್ಥೆಯ ದೌರ್ಜನ್ಯ ಕುರಿತು ಮಾತಾಡಿದರೆ. ಅದು ಔಟ್ ಡೇಟೆಡ್ ಸಿನೆಮಾದ ಹಾಗಿರತ್ತೆ. ಆದರೆ ಒಂದಂತು ನಿಜ. ಮದುವೆ ಎನ್ನುವ ವ್ಯವಸ್ಥೆ ಹೆಣ್ಣು ಮಕ್ಕಳ ಪಾಲಿಗೆ ನೆಮ್ಮದಿಯ ನೆಲೆಯಾಗಬೇಕಿತ್ತು ಅದು ಕೆಂಡದುಂಡೆಯಂತೆ ಸುತ್ತಿಕೊಳ್ಳುತ್ತಿದೆ. ಅಲ್ಲಿ ಹೆಣ್ಣು ಮತ್ತು ಹೆಣ್ಣು ಹೆತ್ತವರು ಇಬ್ಬರೂ ನಗಣ್ಯ. ಈ ಚೌಕಟ್ಟು ಹೆಣ್ಣಿನ ಅಸ್ತಿತ್ವನ್ನು ಅದೆಷ್ಟು ನಾಜೂಕಾಗಿ ಅಳಿಸುತ್ತದೆ ಎಂದರೆ ಆಕೆಯ ಅಪ್ಪ ಅಮ್ಮನ ಮನೆಯ ದೇವರು ಕೂಡ ಬದಲಾಗಿ ಬಿಡುತ್ತಾರೆ. ಆದರೆ ಒಂದೆಂದರೆ ಆಕೆ ಈಗೀಗ ಅದನ್ನು ಪ್ರಶ್ನಿಸುವ ಹಂತಕ್ಕೆ ಇಳಿದಿದ್ದಾಳೆ. ಅದು ಕೌಟುಂಬಿಕ ವ್ಯವಸ್ಥೆಯನ್ನು ಸಣ್ಣಗೆ ಅಲುಗಾಡಿಸತೊಡಗಿದೆ. ಗಂಡು ಹೆತ್ತವರೆಂಬ ಅಹಮಿಕೆಗಳು, ಗಂಡೆಂಬ ಕಿರೀಟವು, ಸರಳ ಮನುಷ್ಯ ಜೀವನದ ಹಂತಕ್ಕೆ ಇಳಿಯದೆ ಹೋದಲ್ಲಿ ಈ ಅಲುಗುವಿಕೆ ಹೆಚ್ಚಾಗಿ ಯಾವುದು ಉಳಿಯುವುದಿಲ್ಲ ಎನ್ನುವುದು ಯಾರು ಒಪ್ಪಿಕೊಂಡರು ಒಪ್ಪಿಕೊಳ್ಳದೆ ಹೋದರು ಮುಂಬರಲಿರುವ ಸತ್ಯ.
ಇನ್ನು, ಚಹಾ ಮಾಡಿಸುತ್ತಲೇ ಇರುವ ಟಿವಿ ಜಾಹೀರಾತುಗಳು, ವಿಲನ್‌ಗಳನ್ನು ಸೃಷ್ಟಿಸುವ ಧಾರವಾಹಿಗಳು. ಹೆಣ್ಣನ್ನು ಮತ್ತದೇ ಸವಕಲು ಗೂಡೆ ಗೌರಮ್ಮನ ಹಾಗೆ ಬಿಂಬಿಸುವ ಸಂಪ್ರದಾಯಗಳು, ಹೆಣ್ಣನ್ನಷ್ಟೆ ಗುರಿಯಾಗಿಸುವ ಬೈಗುಳಗಳು, ಗಾದೆಗಳು, ಹೆಂಗಸರಿಗೆ ಬುದ್ದಿ ಕಲಿಸಲು ಹೊರಡುವ ಸಿನೆಮಾ ನಾಯಕರುಗಳು, ಪ್ರೀತಿಸದೆ ಇದ್ದುದ್ದಕ್ಕೆ ಚಾಕು ಇರಿಯುವ ಮಹಾನ್ ಹೀರೋಗಳು. ಆಸಿಡ್ ದಾಳಿಗಳು. ಹೇಳಿ ಮುಗಿಯದಷ್ಟಿವೆ. ಅದರ ನಡುವೆಯೂ ಹೆಣ್ಣಿನ ನಡಿಗೆ ನಿಂತಿಲ್ಲ. ಕೈ ಸೋತಂತೆ ಕಂಡರೂ ಈಜುವುದು ನಿಲ್ಲಿಸಿಲ್ಲ. ಲಂಟಾನಗಳಲ್ಲಿ ಮುಚ್ಚಿ ಹೋದ ಕಾಡ ಹಾದಿಯು ತಾನಾಗಿಯೇ ತೆರೆವುದಿಲ್ಲ. ನಡೆದು ನಡೆದು ಹುಡುಕಬೇಕಷ್ಟೆ.
“ತಡೆದು ನಿಲ್ಲಿಸಬಹುದು ನೀವು
ನಮ್ಮ ಹೆಜ್ಜೆಗಳನ್ನು
ಆದರೆ ನೀವೆಂದು ನಮ್ಮ ಪಯಣವನ್ನು
ಹತ್ತಿಕ್ಕಲಾರಿರಿ,
ಕಟ್ಟುತ್ತೇವೆ
ಬದುಕುಗಳ
ಬೊಗಸೆ ಉಸಿರನು ಹೆಕ್ಕಿ..
ಜೊತೆಯಾಗಿ
ಅಥವಾ ಸುಮ್ಮನಿದ್ದು ಬಿಡಿ..”
ದೀಪ್ತಿ ಭದ್ರಾವತಿ
ಕವಯತ್ರಿ, ಕಥೆಗಾರ್ತಿ
ಓದಿ : ಮಹಿಳಾ ದಿನಾಚರಣೆ ವಿಶೇಷ: ನಾವು ಯಾರಿಗೂ ಕಮ್ಮಿ ಇಲ್ಲ…ನಟಿಮಣಿಯರ ಒಕ್ಕೊರಲ ಮಾತು