ಹೊಸದಿಲ್ಲಿ: “ಆಧಾರ್ ಸಂಖ್ಯೆಯನ್ನು ಮೊಬೈಲ್, ಬ್ಯಾಂಕ್ ಖಾತೆ ಜತೆಗೆ ಲಿಂಕ್ ಮಾಡದೇ ಇದ್ದ ಕೂಡಲೇ ಏನೋ ಆಗಿ ಹೋಗುತ್ತದೆ ಎಂಬಂತೆ ಚಿತ್ರಣ ನೀಡಬೇಡಿ. ಜನರನ್ನು ಗಾಬರಿಗೊಳಿಸಬೇಡಿ.’ ಹೀಗೆಂದು ಬ್ಯಾಂಕ್, ದೂರಸಂಪರ್ಕ ಕಂಪೆನಿಗಳಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ಲಿಂಕ್ ಮಾಡುವಂತೆ ಮೊಬೈಲ್‌ಗಳಿಗೆ ಸಂದೇಶ ನೀಡುವ ಸಂದರ್ಭದಲ್ಲಿ ಕೊನೆಯ ದಿನಾಂಕವನ್ನು ನಮೂದಿಸಲೇ ಬೇಕು ಎಂದೂ ಹೇಳಿದೆ. ಜತೆಗೆ, ಆಧಾರ್ ವಿಚಾರದಲ್ಲಿ ಯಾವುದೇ ಮಧ್ಯಾಂತರ ತಡೆಯಾಜ್ಞೆ ನೀಡುವುದಿಲ್ಲ ಎಂದು ನ್ಯಾ| ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠ ಶುಕ್ರವಾರ ಹೇಳಿದೆ.
ಪದೇ ಪದೆ ಬ್ಯಾಂಕ್, ಟೆಲಿಕಾಂ ಕಂಪೆನಿಗಳು ಎಸ್‌ಎಂಎಸ್ ಕಳುಹಿಸುತ್ತಿರುವುದನ್ನು ಬಲವಾಗಿಯೇ ತರಾಟೆಗೆ ತೆಗೆದುಕೊಂಡ ನ್ಯಾ| ಎ.ಕೆ. ಸಿಕ್ರಿ, “ಮೊಬೈಲ್ ಕಂಪೆನಿಗಳಿಂದ ಮತ್ತು ಬ್ಯಾಂಕ್‌ಗಳಿಂದ ನನಗೇ ಪದೇ ಪದೆ ಫೋನ್, ಸಂದೇಶಗಳು ಬರುತ್ತಿವೆ. ಸುಖಾಸುಮ್ಮನೆ ಹೆದರಿಸುವ ಬದಲು, ಯಾವ ದಿನಾಂಕದ ಒಳಗಾಗಿ ಆಧಾರ್ ಲಿಂಕ್ ಮಾಡಬೇಕು ಎಂಬುದನ್ನು ನಮೂದಿಸಿ’ ಎಂದು ಖಡಕ್ ಆಗಿ ಹೇಳಿದರು.
ಆಧಾರ್ ಜೋಡಣೆ ಮಾಡದೇ ಇದ್ದರೆ ಮೊಬೈಲ್ ಕಂಪೆನಿಗಳು, ಬ್ಯಾಂಕ್‌ಗಳು ಹೆದರಿಸುವ ರೀತಿಯಲ್ಲಿ ಸಂದೇಶ ಕಳುಹಿಸುತ್ತಿವೆ ಎಂದು ಹಿರಿಯ ನ್ಯಾಯವಾದಿ ಕೆ.ವಿ.ವಿಶ್ವನಾಥನ್ ವಾದಿಸಿದರು. “ಇಂಥ ಸಂದೇಶಗಳಲ್ಲಿ ಲಿಂಕ್ ಮಾಡದೇ ಇದ್ದರೆ ಬ್ಯಾಂಕ್ ಖಾತೆ ಅಥವಾ ಮೊಬೈಲ್ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ಮಾಹಿತಿ ನೀಡಲಾಗುತ್ತದೆ. ಇದರಿಂದಾಗಿ ಸಾರ್ವಜನಿ ಕರಲ್ಲಿ ಅನಗತ್ಯ ಗೊಂದಲ, ಭೀತಿ ಸೃಷ್ಟಿಯಾಗುತ್ತದೆ. ಹೀಗಾಗಿ, ಕೇಂದ್ರ ಸರಕಾರ ಬ್ಯಾಂಕ್ ಮತ್ತು ದೂರ ಸಂಪರ್ಕ ಕಂಪನಿಗಳಿಗೆ ಆ ರೀತಿ ನಡೆದುಕೊಳ್ಳದಂತೆ ಆದೇಶಿಸಬೇಕು’ ಎಂದು ಮನವಿ ಮಾಡಿದರು. ಅದಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಆಕ್ಷೇಪಿಸಿ ಇದೊಂದು ಕೇವಲ ಮೌಖೀಕ ವಾದ ಎಂದು ತಿರುಗೇಟು ನೀಡಿದರು. ಜತೆಗೆ, ದೇಶದಲ್ಲಿ 118 ಕೋಟಿ ಮಂದಿ ಈಗಾಗಲೇ ಆಧಾರ್ ಕಾರ್ಡ್ ಹೊಂದಿದ್ದು, ಅದರ ವಿರುದ್ಧ ಯಾವುದೇ ಆದೇಶ ಬಂದರೂ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ಮಾಸಾಂತ್ಯದಿಂದ ವಿಚಾರಣೆ: ಆಧಾರ್‌ಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠ ಮಾಸಾಂತ್ಯದಿಂದ ಶುರು ಮಾಡಲಿದೆ. ಆಧಾರ್‌ಗೆ ಸಂಬಂಧಿಸಿದಂತೆ ಇನ್ನೂ ಹಲವು ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಅವುಗಳನ್ನೂ ಅದೇ ಪೀಠವೇ ವಿಚಾರಣೆಗೆ ಒಳಪಡಿಸಲಿದೆ ಎಂದಿದೆ ನ್ಯಾಯಪೀಠ.
ಈ ನಡುವೆ ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್, ಕೇಂದ್ರ ಸರಕಾರ ಇತ್ತೀಚೆಗೆ ಹೊರಡಿಸಿದ ಡಿ.31ರ ಅವಧಿಯನ್ನು ಮುಂದಿನ ವರ್ಷದ ಮಾ.31ರ ವರೆಗೆ ವಿಸ್ತರಿಸಲು ಅವಕಾಶ ಉಂಟು ಎಂದು ಹೇಳಿದ್ದನ್ನು ಪ್ರಸ್ತಾಪಿಸಿದರು. ಅಟಾರ್ನಿ ಜನರಲ್ ಲಿಂಕ್ ಮಾಡದೇ ಇದ್ದರೆ ಬಲವಂತದ ಕ್ರಮಗಳನ್ನು ಅನುಸರಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠದ ಮುಂದೆ ಅರಿಕೆ ಮಾಡಿದ್ದರು. ಆದರೆ ಯಾವುದೇ ಹೇಳಿಕೆ ನೀಡಲಿಲ್ಲ ಎಂದರು ದಿವಾನ್. ಈ ಬಗ್ಗೆ ನ್ಯಾಯಪೀಠ ಅಟಾರ್ನಿ ಜನರಲ್‌ಗೆ ಕೇಳಿದಾಗ “ಖಾಸಗಿತನ ಎನ್ನುವುದು ಮೂಲಭೂತ ಹಕ್ಕು ಎಂದು ನ್ಯಾ| ಡಿ.ವೈ.ಚಂದ್ರಚೂಡ್ ಹೇಳಿದ್ದರು. ಜತೆಗೆ ಆಧಾರ್ ಮಾಹಿತಿ ರಕ್ಷಣೆಗೆ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಲು ಸೂಚಿಸಿದ್ದರು’ ಎಂದು ಹೇಳಿದ್ದಾರೆ. ನ್ಯಾ| ಶ್ರೀಕೃಷ್ಣ ನೇತೃತ್ವದ ಸಮಿತಿ ಮಾಹಿತಿ ರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸುತ್ತಿದ್ದು, ಅದು 2018 ಮಾ.31ರ ಒಳಗಾಗಿ ಮುಕ್ತಾಯವಾಗುವ ಸಾಧ್ಯತೆ ಇದೆ. ಹೀಗಾಗಿಯೇ ಲಿಂಕ್ ಮಾಡುವ ಕೊನೆಯ ದಿನವನ್ನು ಆ ದಿನದ ವರೆಗೆ ವಿಸ್ತರಿಸಲೂ ಅವಕಾಶ ಉಂಟು ಎಂದು ಪ್ರಸ್ತಾಪಿಸಿದ್ದಾಗಿ ಅಟಾರ್ನಿ ಜನರಲ್ ನ್ಯಾಯಪೀಠಕ್ಕೆ ಅರಿಕೆ ಮಾಡಿದರು.
ಆಧಾರ್ ಲಿಂಕ್ ಆಗಿದ್ದರೆ 12 ಟಿಕೆಟ್
ಭಾರತೀಯ ರೈಲ್ವೆಯ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ರೈಲು ಟಿಕೆಟ್ ಕಾಯ್ದಿರಿಸುವವರಿಗೆ ಸಂತಸದ ಸುದ್ದಿ. ವೆಬ್‌ಸೈಟ್‌ನಲ್ಲಿರುವ ಖಾತೆಗೆ ಆಧಾರ್ ಲಿಂಕ್ ಮಾಡಿರುವವರು ಸದ್ಯದ ಆರು ಟಿಕೆಟ್‌ಗಳಿಗೆ ಬದಲಾಗಿ 12 ಟಿಕೆಟ್‌ಗಳನ್ನು ಕಾಯ್ದಿರಿಸಲು ಅವಕಾಶ ಉಂಟು. ಅ.26ರಿಂದಲೇ ಈ ಸೌಲಭ್ಯ ಜಾರಿಯಲ್ಲಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದವರಿಗೆ ಕಾರ್ಡ್ ಮೂಲಕ ಆರು ಟಿಕೆಟ್ ಕಾಯ್ದಿರಿಸಲು ಮಾತ್ರವೇ ಅವಕಾಶ ಇದೆ.