ಖಡ್ಗಕ್ಕಿಂತ ಲೇಖನಿ ಹರಿತವಾದದ್ದು ಎಂಬ ಮಾತಿದೆ. ಹಾಗೆಂದು ಲೇಖನಿಯೇ ಮೊದಲ ಆವಿಷ್ಕಾರವಾಗಿರಲಿಲ್ಲ. ನಮ್ಮೆಲ್ಲ ಶಾಲಾ ಜೀವನ ಸ್ಲೇಟ್ ಬಳಪ ಹಿಡಿದು ಅಕ್ಷರ ತಿದ್ದುತ್ತಾ ಪ್ರಾರಂಭವಾಯಿತು. ಅನಂತರ ಪೆನ್ಸಿಲ್ ಹಿಡಿದು ಕಾಪಿ ಬರೆದೆವು. ಬಳಪ ಹಿಡಿದ ಕೈಗೆ ಪೆನ್ಸಿಲ್ ಹಿಡಿಯುವುದೇ ದೊಡ್ಡ ಆಸೆಯಾಗಿತ್ತು. ಕ್ರಮೇಣ ನಮ್ಮ ಕೈಗೂ ಪೆನ್ ಕೊಡಲಾಯಿತು. ಮೊದಲೆಲ್ಲ ಶಾಯಿ ಪೆನ್ನು ಬಳಸುತ್ತಿದ್ದು ಅದರ ಶಾಯಿ ನಮ್ಮ ಮೇಲೂ ಜತೆಗಿರುವವರ ಮೇಲೂ ಚೆಲ್ಲಿ ಕಿರಿಕಿರಿಯಾಗುತ್ತಿತ್ತು. ಬಾಲ್ ಪೆನ್ನುಗಳು ಬಂದ ಬಳಿಕ ಈ ಕಿರಿಕಿರಿ ನಿಂತಿತು. ಜತೆಗೆ ಬಾಲ್ ಪೆನ್ ಶಾಯಿಯ ಬರವಣಿಗೆಯು ಬಾಳಿಕೆಯ ಅವಧಿಯೂ ಅಧಿಕ. ಸರಿಸುಮಾರು ಶತಮಾನದ ಹಿಂದೆ ಆವಿಷ್ಕರಿಸಲ್ಪಟ್ಟ ಈ ಬಾಲ್ ಪಾಯಿಂಟ್ ಪೆನ್ ಇಂದಿಗೂ ಬರವಣಿಗೆ ಸಾಧನಗಳಲ್ಲಿ ತನ್ನ ಪಾರಮ್ಯವನ್ನು ಮೆರೆಯುತ್ತಲೇ ಬಂದಿದೆ.
ಬಾಲ್ ಪಾಯಿಂಟ್ ಪೆನ್ನಿನ ಇತಿಹಾಸ :
16ನೇ ಶತಮಾನದಲ್ಲಿ ಈಜಿಪ್ಟ್ನಲ್ಲಿ ಬಿದಿರನ್ನು ಸಣ್ಣ ಮೊನಚು ಮೊನೆಯನ್ನಾಗಿಸಿ ಶಾಯಿಗೆ ಅದ್ದಿ ಬರೆಯುತ್ತಿದ್ದರಂತೆ. ಅನಂತರ ಯೂರೋಪ್‌ನಲ್ಲಿ ಪಾರಿವಾಳ, ಟರ್ಕಿ ಕೋಳಿ ಮತ್ತು ಬಾತುಕೋಳಿಯಿಂದ ಗರಿ ಸಂಗ್ರಹಿಸಿ ಗರಿಯ ಬುಡ ಭಾಗವನ್ನು ಮೊನಚುಗೊಳಿಸಿ ಕ್ವಿಲ್ ಪೆನ್ (ಪಕ್ಷಿಯಗರಿಯನ್ನು ಪೆನ್‌ನಂತೆ) ಬಳಸುವ ಪರಿ ಕಂಡುಹಿಡಿಯಲಾಯಿತು. ರೊಮ್ಯಾನಿಯೊ ಸಂಶೋಧಕ ಪೆಟ್ರಾಚೆ ಪಿಯೊನ್ಯಾರೊ 1824ರಲ್ಲಿ ಫೌಂಟನ್ ಪೆನ್ ಆವಿಷ್ಕಾರಿಸಿದರು. ಇದು ಉಳಿದ ಎರಡು ಆವಿಷ್ಕಾರಕ್ಕಿಂತ ಹೆಚ್ಚು ಉಪಯುಕ್ತವಾಗಿ ಪ್ರಾರಂಭದಲ್ಲಿ ಕಂಡರೂ ಬಳಿಕ ಫೌಂಟೆನ್ ಪೆನ್°ನಲ್ಲಿ ಶಾಯಿ ಕಾಗದದಲ್ಲಿ ಚೆಲ್ಲುತ್ತಿದ್ದದ್ದು ಮತ್ತು ಅಕ್ಷರ ಅಳಿಸಿಹೋಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನೆಲೆಯಲ್ಲಿ ಬಾಲ್‌ಪಾಯಿಂಟ್ ಪೆನ್ ಆವಿಷ್ಕಾರವಾಗಿದೆ. 1888 ಜಾನ್ ಜೆ ಲಾಡ್ ಮೊದಲು ಬಾಲ್ ಪೆನ್ ಮಾದರಿ ತಯಾರಿಸಿದರೂ ಅದಕ್ಕೆ ಪರಿಪೂರ್ಣ ರೂಪ ದೊರೆತಿರಲಿಲ್ಲ. 1938ರಲ್ಲಿ ಹಂಗೇರಿಯನ್ ಪತ್ರಕರ್ತ ಬಿಯೊ ಎನ್ನುವವರು ಶಾಯಿಯನ್ನು ರಿಫಿಲ್‌ಮಾದರಿ ಬಳಸಿ ಪೆನ್ನನ್ನು ಆವಿಷ್ಕರಿಸಿದರೂ ಆದರೆ ಇದರಲ್ಲಿ ಶಾಯಿ ಚಲ್ಲುತ್ತಿತ್ತು. ಅಂತಿಮವಾಗಿ 2ನೇ ಜಾಗತೀಕ ಯುದ್ಧದ ಕಾಲದಲಿ1938ರ ಜೂನ್ 10ರಂದು ಬೈರೆ ಸಹೋದರರು (ಲಾಸ್ಲೆ ಮತ್ತು ಗೈರ್ಗಿ), ಯು ಎಸ್ ಪೇಟೆಂಟ್ 2,390,636 ರ ಮಲಕರಾದರು. ಇದೇ ಮುಂದೆ ವಿಶ್ವದಾದ್ಯಂತ ಬಾಲ್ ಪಾಯಿಂಟ್ ಪೆನ್ ಪೆಟೆಂಟ್ ಎಂದು ಜನಮಾನ್ಯತೆ ಪಡೆಯಿತು. 1945ರಲ್ಲಿ ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ವಸ್ತುವಾಗಲ್ಪಟ್ಟಿತ್ತು. ಹಾಗಿದ್ದರೂ ಇಂಗ್ಲೆಂಡ್, ಐರ್ಲೆಂಡ್, ಆಸ್ಟ್ರೇಲಿಯಾ, ಇಟಲಿ ಇಂದಿಗೂ ಇದನ್ನು ಬೀರೋ ಅಂತಲೇ ಕರೆಯುತ್ತಿದೆ. ಪೆನ್ನಿನ ತುದಿಯಲ್ಲಿ ಸಣ್ಣ ರಬ್ಬರ್ ತುಣುಕನ್ನು ಶಾಯಿ ತೊಟ್ಟಿಕ್ಕದಂತೆ ಮಾಡಲು ಉಪಯೋಗಿಸುತ್ತಿದ್ದರು. ಇದರ ಶಾಯಿ ಬಹುಬೇಗ ಒಣಗುತ್ತಿದ್ದು ಇಂದು ಎಲ್ಲೆಡೆ ಈ ಪೆನ್ನಿನ ಬಳಕೆ ಹೇರಳವಾಗಿದೆ.
ಕ್ಯಾಪ್ ನುಂಗಿ ಸಾವು:
ಇದರ ಬಳಕೆಯೂ ಹೆಚ್ಚಾಗಿ ಶಿಕ್ಷಣ ಕೇತ್ರದಲ್ಲಿ ನಡೆಯುತ್ತಿದ್ದು. ಬಹುತೇಕ ದೇಶದಲ್ಲಿ ಸಣ್ಣ ಮಕ್ಕಳು ಕ್ಯಾಪ್ ನುಂಗಿ ಉಸಿರುಗಟ್ಟಿ ಸಾಯುತ್ತಿದ್ದರು. ಹಾಗಾಗಿಯೇ ಕ್ಯಾಪ್ ಇಲ್ಲದೇ ಪೆನ್‌ನ ಆವಿಷ್ಕಾರ ಮಾಡಿದರೂ ಬೇಡಿಕೆ ಕಡಿಮೆ ಇತ್ತು. ಪ್ರತಿ ವರ್ಷ ಪೆನ್‌ನ ಕ್ಯಾಪ್ ನುಂಗಿ 100ಕ್ಕೂ ಅಧಿಕ ಮಕ್ಕಳು ಸಾಯುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಕ್ಯಾಪ್‌ನ ಮಾದರಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಣ್ಣ ರಂಧ್ರವಿರುವ ಕ್ಯಾಪ್ ಆವಿಷ್ಕರಿಸಿದರು. ಸಣ್ಣ ರಂಧ್ರವಿರುವ ಕಾರಣ ಮಕ್ಕಳು ಒಂದುವೇಳೆ ಇದನ್ನು ನುಂಗಿದರೂ ಅವರನ್ನು ಬದುಕಿಸುವ ಸಾಧ್ಯತೆ ಇತ್ತು. ಪರಿಣಾಮ ಹೀಗೆ ಸಾಯುವ ಪ್ರಮಾಣ ತಗಲ್ಪಟ್ಟಿದೆ.
ಲೀಕ್‌ಗೆ ಬ್ರೇಕ್ :
ಫೌಂಟೇನ್ ಪೆನ್ ಶಾಯಿ ಲೀಕ್ (ಚೆಲ್ಲಿ ಹೋಗುತ್ತಿತ್ತು). ಆದರೆ ಬಾಲ್ ಪೆನ್‌ನಲ್ಲಿ ನಿಬ್ (ರಬ್ಬರ್ ತುಣುಕು) ಹಾಕುತ್ತಿದ್ದು ಲೀಕ್ ಸಮಸ್ಯೆ ಕಡಿಮೆಯಾಗಿತ್ತು. 2ನೇ ಜಾಗತೀಕ ಯುದ್ಧದ ಕಾಲದಲ್ಲಿ ಈ ಪೆನ್ ಅತೀ ಎತ್ತರಕ್ಕೆ ಕೊಂಡೊಯ್ದರೂ ಲೀಕ್ ಆಗದಿರುವ ಹೆನ್ನೆಲೆ ಯುದ್ಧವಿಮಾನದ ಪೈಲೇಟ್‌ಗಳು ಹೆಚ್ಚಾಗಿ ಬಳಸುತ್ತಿದ್ದರಂತೆ. ಒಂದು ಬಾಲ್ ಪಾಯಿಂಟ್ ಪೆನ್ 45 ಸಾವಿರ ಪದವನ್ನು ಬರೆಯುವ ಸಾಮರ್ಥ್ಯ ಹೊಂದಿದೆ.
ಕಳಕಳಿ :
ಇಂದು ಬೀದಿ ಬೀದಿಯಲ್ಲೂ ಈ ಪೆನ್ ಲಭ್ಯವಾಗುತ್ತಿವೆ. ಆದರೆ ಪೆನ್‌ನ ಬಳಕೆ ವಿಚಾರದಲ್ಲೂ ಸಮಸ್ಯೆಯಿದ್ದು ಈ ಕುರಿತು ಸಾಮಾಜಿಕ ಕಳಕಳಿಯ ಅಗತ್ಯವಿದೆ.
* ರೀಫಿಲ್ ಮಾದರಿಯ ಪೆನ್‌ನನ್ನು ಅಧಿಕ ಬಳಸಿ ಶಾಯಿ ಕಾಲಿಯಾದೊಡನೆ ರಿಫೀಲ್ ಕೊಳ್ಳ ಬೇಕು ಇದರಿಂದ ಅನಗತ್ಯ ಪ್ಲಾಸ್ಟಿಕ್‌ಗೆ ಕಡಿವಾಣ ಹಾಕಿದಂತಾಗುತ್ತದೆ.
* ಒಮ್ಮೆ ಬಳಸಿ ಬಿಸಾಕುವ ಪೆನ್ ಗಿಂತಲೂ ಆದಷ್ಟು ಪುನರ್ ಉತ್ಪತ್ತಿಯಾಗುವ ಪೆನ್ ಬಳಕೆ ಮಾಡೋಣ.
* ಕ್ಯಾಪ್‌ನ್ನು ಪರಿಸರಕ್ಕೆ ಎಸೆಯಬೇಡಿ. ಇದು ಮಣ್ಣಿನಲ್ಲಿ ಕರಗಲಾರದು ಮತ್ತು ಪ್ರಾಣಿಗಳು ತಿಂದು ಹಾನಿಯಾಗುವ ಸಾಧ್ಯತೆ ಇದೆ.
* ಕಾಲಿಯಾದ ಪೆನ್ ಕಸವಾಗಿ ಕಾಣದೆ ಅದರಲ್ಲಿ ಕರಕುಶಲ ವಸ್ತು ತಯಾರಿಸುವುದು ಸಹ ಒಂದು ಪರಿಸರ ಕಾಳಜಿಯೇ ಆಗಿದೆ.
ಜಾಗತಿಕ ಮಾರುಕಟ್ಟೆಯ ಪೈಪೊಟಿ :
3ರೂ. ನಿಂದ ಲಕ್ಷ ರೂ. ವರೆಗೂ ಪೆನ್ ಲಭ್ಯವಿದೆ. ಪ್ಲಾಸ್ಟಿಕ್, ಲೋಹ, ಚಿನ್ನಾ, ಬೆಳ್ಳಿ, ಪ್ಲಾಟಿನಂನಲ್ಲೂ ಬಾಲ್ ಪಾಯಿಂಟ್ ಪೆನ್ ಲಭ್ಯವಿದ್ದು ಗಿಫ್ಟ್ ಆಗಿ ನೀಡುವವರು ಅಧಿಕವಿದ್ದಾರೆ. ಇಂದು ಕೆಮಲಿನ್, ಸೆಲ್ಲೋ, ಅರೊರಾ, ಕ್ಲಾಸ್ ಮೆಟ್, ಕ್ರಸ್ ಇನ್ನೂ ಅನೇಕ ಕಂಪೆನಿಗಳು ಪ್ರಬಲ ಪೈಪೊಟಿಯಲ್ಲಿವೆ. ಚೀನಾ ಜಗತ್ತಿನ ಬಾಲ್ ಪಾಯಿಂಟ್ ಪೆನ್‌ಗಳಲ್ಲಿ 80ಶೇ. ಉತ್ಪಾದನೆ, ಪೂರೈಕೆ ಮಾಡುತಿದ್ದು ಸುಮಾರು 3000 ಕಂಪೆನಿ ಹಾಗೂ ವರ್ಷಕ್ಕೆ 4000 ಕೋಟಿ ಪೆನ್‌ಗಳನ್ನು ಉತ್ಪಾದಿಸುತ್ತಿದೆ. ಬಾಲ್ ಪಾಯಿಂಟ್ ಪೆನ್‌ಗಳಂತೆ ರೋಲರ್ ಪೆನ್‌ಗಳು ಲಭ್ಯವಿದ್ದರೂ ಅದನ್ನು ಸಹ ಬಾಲ್ ಪೆನ್ ಎಂದೆ ಕರೆಯುತ್ತಾರೆ. ಭಾರತದಲ್ಲಿ ಪೆನ್ ಮಾರುಕಟ್ಟೆಯೂ ವಹಿವಾಟು 2400 ಕೋಟಿಯಷ್ಟು ಅದರಲ್ಲಿ ಸ್ಥಳೀಯ ತಯಾರಕರ ಪಾಲು ಕಡಿಮೆ ಇದೆ. ದೇಶದಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಪೆನ್‌ನ್ನು ಬಳಸುವವರ ಪ್ರಮಾಣ ಅಧಿಕವಿದೆ. ಸೆಲ್ಲೋ ಕಂಪೆನಿ ದಿನವೊಂದಕ್ಕೆ 50ಲಕ್ಷ ಪೆನ್ ಮಾರಾಟಮಾಡುತ್ತಿದ್ದು ದೇಶದ ಅತೀ ಹೆಚ್ಚು ಬಾಲ್ ಪೆನ್ ಮಾರಟವಾಗುವ ಕಂಪೆನಿಯಾಗಿದೆ. ಸೆಲ್ಲೋ ಗ್ರಿಪ್ಪರ್ ಬಳಸುವವರ ಪ್ರಮಾಣ ಅಧಿಕವಿದೆ. ಹಾಗಿದ್ದರೂ ಪ್ರಸ್ತುತ ಕೊರೊನಾ ಅಲೆಗಳ ನಡುವೆ ಪೆನ್‌ನ ಬೇಡಿಕೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ. ಬಹುತೇಕರು ಟ್ಯಾಬ್, ಕಂಪ್ಯೂಟರ್, ಸ್ಮಾರ್ಟ್ ಫೋನ್‌ನಲ್ಲಿ ತಮ್ಮ ವ್ಯವಹಾರ, ಮಕ್ಕಳ ಅಸೈನ್‌ಮೆಂಟ್ ಕೂಡ ಆನ್‌ಲೈನ್ ಮೂಲಕವೇ ಸಲ್ಲಿಕೆಯಾಗುತ್ತಿದೆ. ಪೆನ್ ಬಳಸುವವರ ಪ್ರಮಾಣ ಮತ್ತು ಬೇಡಿಕೆ ಹಿಂದಿಗಿಂತ ಕಡಿಮೆ ಇದೆ. ಅತಿಯಾದ ಆಧುನಿಕತೆಯೂ ಮಕ್ಕಳಿಗೆ ಬರವಣಿಗೆ ಕೌಶಲ, ಖಚಿತತೆ ಮರೆಸಲು ಬಹುದು. ಆದ್ದರಿಂದ ಪೆನ್‌ನ ಬಳಕೆ ಮಾಡುವ ಪರಿ ಮರೆಯದೇ ಬಳಸುವ ಪರಿಯನ್ನೇ ಹೆಚ್ಚಾಗಿ ಕಲಿಸೋಣ.
-ವಿನೋದ್ ನಾಯಕ್, ಪರ್ಕಳ