Advertisement

Feb.9ರಂದು ಶಾಸಕರಿಗೆ ವಿಶೇಷ ತರಬೇತಿ ಕಾರ್ಯಾಗಾರ: ಯು.ಟಿ.ಖಾದರ್‌

09:40 PM Feb 05, 2024 | Team Udayavani |

ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಫೆ.9ರಂದು ಶಾಸಕರು ಹಾಗೂ ಮಾಧ್ಯಮದ ವರದಿಗಾರರಿಗೆ ವಿಶೇಷ ತರಬೇತಿ ಕಾರ್ಯಾಗಾರ ಆಯೋಜಿಸಲು ಉದ್ದೇಶಿಸಿದ್ದು, ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ (ಐಐಎಂ) ಆವರಣದಲ್ಲಿ ಶಿಬಿರ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.

Advertisement

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಫೆ.12ರಿಂದ 23ರ ವರೆಗೆ 16ನೇ ವಿಧಾನಸಭೆಯ 3ನೇ ಅಧಿವೇಶನ ನಡೆಯಲಿದ್ದು, ಜಂಟಿ ಅಧಿವೇಶನ ಹಾಗೂ ಬಜೆಟ್‌ ಅಧಿವೇಶನಗಳು ಒಂದರ ಹಿಂದೆ ಒಂದು ನಡೆಯಲಿದ್ದು, ಇದಕ್ಕೂ ಮುನ್ನ ಫೆ.9ರ ಶುಕ್ರವಾರದಂದು ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಸದಸ್ಯರಿಗೆ ಕಾರ್ಯಾಗಾರ ನಡೆಸಲಾಗುವುದು ಎಂದರು.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಐಐಎಂ ಆವರಣದಲ್ಲಿ ಶಾಸಕರಿಗೆ ಆರೋಗ್ಯ ತಪಾಸಣೆ ಶಿಬಿರ, ಉಪಾಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿರುತ್ತದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ತರಬೇತಿ ಕಾರ್ಯಾಗಾರ ನಡೆಯಲಿದ್ದು, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹ ಭಾಗಿಯಾಗಲಿದ್ದು, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಬಜೆಟ್‌ ತಯಾರಿ, ಅನುದಾನ ಹಂಚಿಕೆ, ನಿಧಿ ವಿತರಣೆ, ಇತರ ಮಸೂದೆಗಳಿಗೂ ಧನವಿನಿಯೋಗ ಮಸೂದೆಗಳಿಗೂ ಇರುವ ವ್ಯತ್ಯಾಸ ಮತ್ತು ಸಾಮ್ಯತೆಯಂತಹ ವಿಷಯಗಳ ಕುರಿತು ತಿಳಿಸಿಕೊಡಲಿದ್ದಾರೆ.

ಫೆ.12ಕ್ಕೆ ಜಂಟಿ ಅಧಿವೇಶನ, ರಾಜ್ಯಪಾಲರ ಭಾಷಣ
ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಸ್ವಲ್ಪ ಹೊತ್ತು ಕಲಾಪ ಮುಂದೂಡಿ, ಅನಂತರ ಸಂತಾಪ ಸೂಚಕ ನಿರ್ಣಯ ಮಂಡನೆ ಮುಂತಾದ ಕಾರ್ಯಕಲಾಪಗಳನ್ನು ಮುಂದುವರಿಸಲಾಗುತ್ತದೆ ಎಂದರು.

Advertisement

ಫೆ.16ರ ಬೆಳಗ್ಗೆ ಬಜೆಟ್‌ ಮಂಡನೆ
ಒಟ್ಟು 10 ದಿನ ನಡೆಯಲಿರುವ ಕಲಾಪದ ಮೊದಲ ವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗಳು ನಡೆಯಲಿವೆ. ಮೊದಲ ವಾರದ ಕೊನೆಯ ದಿನವಾದ ಫೆ.16ರ ಶುಕ್ರವಾರ ಬೆಳಗ್ಗೆ 10.15ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್‌ ಅನ್ನು ಮಂಡಿಸಲಿದ್ದಾರೆ. ಫೆ.19ರಿಂದ 23ರ ವರೆಗೆ ಬಜೆಟ್‌ ಮೇಲಿನ ಚರ್ಚೆ ನಡೆಯಲಿದೆ.

ಶಾಸಕರಿಗೆ ಬೆಳಗ್ಗಿನ ಉಪಾಹಾರದ ವ್ಯವಸ್ಥೆ
ಅಧಿವೇಶನವನ್ನು ಸರಿಯಾದ ಸಮಯಕ್ಕೆ ಆರಂಭಿಸಬೇಕೆಂಬ ಉದ್ದೇಶದಿಂದ ಶಾಸಕರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲು ನಿರ್ಧರಿಸಿದ್ದು, ಪ್ರತಿ ದಿನ ಬೆಳಗ್ಗೆ 8ರಿಂದ 9 ಗಂಟೆವರೆಗೆ ವಿಧಾನಸೌಧದಲ್ಲಿ ಉಚಿತವಾಗಿ ತಿಂಡಿ ವಿತರಿಸಲಾಗುತ್ತದೆ. ಒಂದೊಂದು ದಿನ ಬೆಂಗಳೂರಿನ ಪ್ರಮುಖ ಒಂದೊಂದು ಹೊಟೇಲ್‌ನಿಂದ ತಿಂಡಿ ತರಿಸಲಾಗುವುದು. ಶಾಸಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.

ಜಾಲತಾಣದಲ್ಲಿ ಗೀಚುವವರನ್ನು
ಇತಿಹಾಸ ನೆನಪಲ್ಲಿಡದು: ಸ್ಪೀಕರ್‌
ಉಳ್ಳಾಲದಲ್ಲಿ ದೈವದ ನೇಮದಲ್ಲಿ ಪಾಲ್ಗೊಂಡಿದ್ದಕ್ಕೆ ತನ್ನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಕುರಿತು ಪ್ರತಿಕ್ರಿಯಿಸಿದ ಖಾದರ್‌, ಎಲ್ಲೋ ಕುಳಿತು ಗೀಚುವವರನ್ನು ಇತಿಹಾಸ ನೆನಪಿಟ್ಟುಕೊಳ್ಳುವುದಿಲ್ಲ. ಕೆಲಸ ಮಾಡುವವರು ಇತಿಹಾಸ ಬರೆಯಲು ಸಾಧ್ಯ. ನಾನದನ್ನು ಮಾಡುತ್ತಿದ್ದೇನೆ. ಯಾರೋ ಒಬ್ಬರು ಜಾಲತಾಣದಲ್ಲಿ ಏನೋ ಬರೆದ ಮಾತ್ರಕ್ಕೆ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಬ್ಲಾಕ್‌ ಅಧ್ಯಕ್ಷರು ಕರೆದಿದ್ದರು, ಹೋಗಿದ್ದೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಹೋಗಿದ್ದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next