ಮೈಸೂರು: ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಅರ್ಧ ಕುಂಭಮೇಳಕ್ಕೆ ಹೋಗುವ ಯಾತ್ರಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿ. (ಐಆರ್‌ಸಿಟಿಸಿ) ವಿಶೇಷ ಪ್ರವಾಸಿ ರೈಲಿನ ವ್ಯವಸ್ಥೆ ಮಾಡಿದೆ. ಈ ವಿಶೇಷ ರೈಲು ಮಧುರೈ ರೈಲು ನಿಲ್ದಾಣದಿಂದ ಹೊರಟು ಫೆ.15ರಂದು ಬೆಂಗಳೂರಿನ ವೈಟ್‌ಫೀಲ್ಡ್ ರೈಲು ನಿಲ್ದಾಣದ ಮೂಲಕ ಹಾದು ಹೋಗಲಿದೆ ಎಂದು ಐಆರ್‌ಸಿಟಿಸಿ ಪ್ರಾದೇಶಿಕ ಅಧಿಕಾರಿ ಡಿ.ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರವಾಸಿ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ 12,230 ರೂ. ನಿಗದಿಪಡಿಸಲಾಗಿದ್ದು, ಈ ಪ್ಯಾಕೇಜ್‌ನಲ್ಲಿ ಧರ್ಮಶಾಲಾ, ಹಾಲ್, ಡಾರ್ಮಿಟೊರೀಸ್ ವ್ಯವಸ್ಥೆ, ಊಟ, ವಸತಿ, ರಸ್ತೆ ಮಾರ್ಗದಲ್ಲಿ ಪ್ರಯಾಣ, ಭದ್ರತಾ ವ್ಯವಸ್ಥೆ, ಗೈಡ್ ವ್ಯವಸ್ಥೆಯನ್ನೂ ಒಳಗೊಂಡಿದೆ ಎಂದು ತಿಳಿಸಿದರು.
ಫೆ.15ರಂದು ಮದುರೈನಿಂದ ಹೊರಡುವ ಈ ರೈಲು ಬೆಂಗಳೂರಿನ ವೈಟ್‌ಫೀಲ್ಡ್ ರೈಲು ನಿಲ್ದಾಣದ ಮೂಲಕ ಹಾದು ಹೋಗಿ 17ರಂದು ಸಂಜೆ ವಾರಾಣಸಿ ತಲುಪಲಿದ್ದು, ಯಾತ್ರಿಕರು ಅಂದು ರಾತ್ರಿ ವಾರಾಣಸಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. 18ರಂದು ಪವಿತ್ರ ಗಂಗಾ ಸ್ನಾನ, ಕಾಶಿ ವಿಶ್ವನಾಥ, ಕಾಶಿ ವಿಶಾಲಾಕ್ಷಿ ದರ್ಶನ ಪಡೆದು ವಾರಾಣಸಿಯಲ್ಲೇ ತಂಗಲಿದ್ದಾರೆ.
19ರಂದು ಮುಂಜಾನೆ ವಾರಾಣಸಿಯಿಂದ ರಸ್ತೆ ಮಾರ್ಗವಾಗಿ ಹೊರಟು ಅಲಹಾಬಾದ್ ತಲುಪಲಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಅರ್ಧ ಕುಂಭಮೇಳದಲ್ಲಿ ಪಾಲ್ಗೊಂಡ ಬಳಿಕ ರಾತ್ರಿ ವಾರಣಸಿ ತಲುಪಲಿದ್ದಾರೆ. 20ರಂದು ಮುಂಜಾನೆ ಗಯಾ ತಲುಪಲಿದ್ದು, ಅಲ್ಲಿಂದ ರಾತ್ರಿ 21ರಂದು ರಾತ್ರಿ ಹರಿದ್ವಾರ ತಲುಪಿ ವಾಸ್ತವ್ಯ ಹೂಡಲಿದ್ದಾರೆ. 22ರಂದು ಗಂಗಾ ಸ್ನಾನದೊಂದಿಗೆ ಮಾನಸ ದೇವಿ ಮಂದಿರಕ್ಕೆ ಭೇಟಿ ನೀಡಿ, ಸಂಜೆ ಆರತಿ ದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ ಹರಿದ್ವಾರದಿಂದ ಹೊರಟು 23ರಂದು ಮುಂಜಾನೆ ದೆಹಲಿ ತಲುಪಿ ನಗರ ವೀಕ್ಷಣೆ ನಂತರ ರಾತ್ರಿ ವಾಸ್ತವ್ಯ ಹೂಡಲಿದ್ದು, 24ರಂದು ಮುಂಜಾನೆ ಹೊರಟು ಮಥುರೆಯ ಶ್ರೀಕೃಷ್ಣ ಜನ್ಮ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಧ್ಯಾಹ್ನ ವಾಪಸ್ ಹೊರಟು 26ರ ರಾತ್ರಿ ಮದುರೈ ರೈಲು ನಿಲ್ದಾಣ ತಲುಪಲಿದ್ದಾರೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿಟೂರಿಸಂ ವ್ಯವಸ್ಥಾಪಕ ಕಿಶೋರ್ ಸತ್ಯ, ಇಮ್ರಾನ್ ಇತರರು ಉಪಸ್ಥಿತರಿದ್ದರು.
ಮಾಹಿತಿ: ಕುಂಭಮೇಳ ಯಾತ್ರೆ ಸಂಬಂಧ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2426001,ಮೊಬೈಲ್ ಸಂಖ್ಯೆ 9741421486, 080-22960014, ಮೊ.9686575203 ಸಂಪರ್ಕಿಸಬಹುದು.
ವಿದೇಶ ಪ್ರವಾಸಕ್ಕೆ ಪ್ಯಾಕೇಜ್: ದೇಶಿಯವಾಗಿ ರೈಲು ಹಾಗೂ ರಸ್ತೆ ಮಾರ್ಗದ ಪ್ರವಾಸದ ಜೊತೆಗೆ ಐಆರ್‌ಸಿಟಿಸಿವತಿಯಿಂದ ಅಂತಾರಾಷ್ಟ್ರೀಯ ಏರ್ ಪ್ಯಾಕೇಜ್‌ನಡಿ ಜನವರಿ 22 ರಿಂದ 27ರವರೆಗೆ ಥೈಲ್ಯಾಂಡ್, ಬ್ಯಾಂಕಾಕ್, ಪಟ್ಟಾಯ ಪ್ರವಾಸ ಆಯೋಜಿಸಿದ್ದು, ಪ್ರತಿ ವ್ಯಕ್ತಿಗೆ 44,910 ರೂ. ನಿಗದಿಪಡಿಸಲಾಗಿದೆ. ಫೆ.2ರಿಂದ 6ರವರೆಗೆ ದುಬೈ ಮತ್ತು ಅಬುಧಾಬಿ ಪ್ರವಾಸ ಆಯೋಜಿಸಿದ್ದು, ಪ್ರತಿ ವ್ಯಕ್ತಿಗೆ 55,950 ರೂ. ನಿಗದಿಪಡಿಸಲಾಗಿದೆ ಎಂದು ಐಆರ್‌ಸಿಟಿಸಿ ಪ್ರಾದೇಶಿಕ ಅಧಿಕಾರಿ ಡಿ.ಶಿವಕುಮಾರ್ ತಿಳಿಸಿದರು.