ಬೆಂಗಳೂರು: ಬೇಸಿಗೆಯ ಹಿನ್ನೆಲೆಯಲ್ಲಿ ಅಶುದ್ಧ ನೀರು, ಗುಣಮಟ್ಟವಲ್ಲದ ತಂಪು ಪಾನೀಯಗಳು, ಟ್ಯಾಂಕರ್ ನೀರು, ಐಸ್‌ಕ್ರೀಮ್ ಹಾಗೂ ಐಸ್‌ಕ್ಯಾಂಡಿಗಳ ಸೇವನೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕಾಗಿ ಬಿಬಿಎಂಪಿ ವಿಶೇಷ ಕಾರ್ಯಪಡೆಗಳನ್ನು ಸಿದ್ಧಗೊಳಿಸಿದೆ.
ಈ ಕಾರ್ಯಪಡೆಯು ಸ್ವತ್ಛತೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದ ಹೋಟೆಲ್‌ಗಳು, ಬೀದಿ ಬದಿಯ ಹೋಟೆಲ್‌ಗಳು ಹಾಗೂ ನೈರ್ಮಲ್ಯವಿಲ್ಲದ ಸ್ಥಳಗಳಲ್ಲಿನ ಆಹಾರ ಪೂರೈಕೆ, ತಳ್ಳುಗಾಡಿಯಲ್ಲಿ ಕತ್ತರಿಸಿದ ಹಣ್ಣು ಮಾರಾಟ ಹೀಗೆ ಗುಣಮಟ್ಟ ಕಾಪಾಡದ ಹಾಗೂ ಪಾಲಿಕೆಯಿಂದ ವಿಧಿಸಿದ ನಿಯಮಗಳನ್ನು ಪಾಲಿಸದವರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲಿದೆ.
ಪ್ರತಿ ಬೇಸಿಗೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಗಂಟಲು ಬೇನೆ, ಶೀತ -ಜ್ವರ, ಅಲರ್ಜಿಯೊಂದಿಗೆ ಹಲವು ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕೆ ಪ್ರಮುಖ ಕಾರಣ ಅಶುದ್ಧ ನೀರು ಹಾಗೂ ಗುಣಮಟ್ಟವಿಲ್ಲ ಆಹಾರ ಪಾದರ್ಥಗಳ ಸೇವನೆ. ಆ ಹಿನ್ನೆಲೆಯಲ್ಲಿ ಬಿಬಿಎಂಪಿ, ಪಾಲಿಕೆಯ ಎಲ್ಲ ವಲಯಗಳಲ್ಲಿ ಕಾರ್ಯಪಡೆಯ ಮೂಲಕ ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಮುಂದಾಗಿದೆ.
ಟ್ಯಾಂಕರ್‌ಗಳಿಗೂ ಕಡಿವಾಣ: ಬೇಸಿಗೆಯ ಸಂದರ್ಭದಲ್ಲಿ ನೀರಿನ ಸಮಸ್ಯೆಯಿರುವ ಭಾಗಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಟ್ಯಾಂಕರ್ ನೀರು ಬಳಕೆಗೆ ಮುಂದಾಗುತ್ತಾರೆ. ಆದರೆ, ಟ್ಯಾಂಕರ್‌ಗಳು ಪಾಲಿಕೆಯಿಂದ ನಿಗದಿಪಡಿಸಿರುವ ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಆ ನೀರು ಸೇವನೆಯಿಂದ ಸಾರ್ವಜನಿಕರು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಟ್ಯಾಂಕರ್‌ಗಳ ಮೇಲೆಯೂ ನಿಗಾವಹಿಸಲು ತೀರ್ಮಾನಿಸಿದ್ದು, ಪಾಲಿಕೆಯಿಂದ ವಿಧಿಸಲಾಗಿರುವ ನಿಯಮ ಉಲ್ಲಂ ಸುವ ಟ್ಯಾಂಕರ್‌ಗಳನ್ನು ಜಪ್ತಿ ಮಾಡಲಿದ್ದಾರೆ.
ಕ್ರಿಮಿನಲ್ ಕೇಸು ದಾಖಲು: ನಗರದಲ್ಲಿ ಅಶುದ್ಧ ನೀರು, ನೈರ್ಮಲ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಆಹಾರ ಪದಾರ್ಥಗಳ ತಯಾರಿಸುವ ಹಾಗೂ ಮಾರಾಟ ಮಾಡುವರ ವಿರುದ್ಧ ಕಾರ್ಯಪಡೆ ಕಠಿಣ ಕ್ರಮಕೈಗೊಳ್ಳಿದ್ದು, ಅಂತಹ ಉದ್ಯಮಗಳ ವಾಣಿಜ್ಯ ಪರವಾನಗಿಯನ್ನು ರದ್ದುಪಡಿಸಲಿದೆ. ಒಂದೊಮ್ಮೆ ಕಾನೂನು ಬಾಹಿರವಾಗಿ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದಾರೆ.
ಬೇಸಿಗೆಯಲ್ಲಿ ಹಿನ್ನೆಲೆಯಲ್ಲಿ ಅಶುದ್ಧ ನೀರು ಹಾಗೂ ಗುಣಮಟ್ಟವಿಲ್ಲದ ಆಹಾರ ಪದಾರ್ಥಗಳ ಸೇವನೆಯಿಂದಾಗಿ ಹಲವು ಕಾಯಿಲೆಗಳು ಬರುವ ಸಾಧ್ಯತೆಯಿದೆ. ಹೀಗಾಗಿ ಪಾಲಿಕೆಯ ಎಲ್ಲ ವಲಯಗಳಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ.
-ಸಫ್ರಾರ್ಜ್ ಖಾನ್, ಜಂಟಿ ಆಯುಕ್ತ ಘನತ್ಯಾಜ್ಯ ವಿಭಾಗ
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಗರದಲ್ಲಿ ನಿಯಮ ಬಾಹಿರವಾಗಿ ತಯಾರಾಗುತ್ತಿರುವ ಐಸ್‌ಕ್ಯಾಂಡಿ, ಸ್ವತ್ಛತೆ ಹಾಗೂ ನೈರ್ಮಲ್ಯ ಕಾಪಾಡದ ಬೀದಿ ಬದಿ ಹೋಟೆಲ್‌ಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರತ್ಯೇಕ ತಂಡ ರಚಿಸಲಾಗಿದ್ದು, ಆ ಮೂಲಕ ಕಾಯಿಲೆಗಳ ಹರಡುವಿಕೆಗೆ ಕಡಿವಾಣ ಹಾಕಲಾಗುವುದು.
-ಆರ್.ಸಂಪತ್‌ರಾಜ್, ಮೇಯರ್
ಎಂಟು ತಂಡಗಳ ರಚನೆ: ಪಾಲಿಕೆಯ ಪ್ರತಿ ವಲಯಕ್ಕೆ ಒಂದರಂತೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ವಿಶೇಷ ಕಾರ್ಯಪಡೆಯಲ್ಲಿ ಬಿಬಿಎಂಪಿಯ ವೈದ್ಯಕೀಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ಪರಿವೀಕ್ಷಕರು ಹಾಗೂ ಸಾರ್ವಜನಿಕ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಇರಲಿದ್ದಾರೆ. ಪರಿಶೀಲನೆಯ ವೇಳೆ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡವರವ ವಿರುದ್ಧ ಸ್ಥಳದಲ್ಲಿಯೇ ಕ್ರಮಕೈಗೊಳ್ಳಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
* ವೆಂ.ಸುನೀಲ್ ಕುಮಾರ್