ಮನೆಯಲ್ಲಿ ಕುಳಿತು ಬೇಜಾರಾಗುತಿದೆಯಾ? ಮದುವೆ-ಸಮಾರಂಭಗಳಿಗೆ ಅಥವಾ ವಿವಿಧ ಕಾರ್ಯಕ್ರಮಗಳಿಗೆ ತೆರಳುವಾಗ ಚಂದವಾಗಿ ಕಾಣಲು ಬಟ್ಟೆ ಸ್ಟಿಚ್ ಮಾಡಿಕೊಳ್ಳುವುದು, ಡ್ರೆಸ್‌ಗೆ ತಕ್ಕಂತೆ ಹೇರ್‌ಸ್ಟೈಲ್, ಮೆಹಂದಿ, ಸೀರೆ ವಿನ್ಯಾಸ ಹೀಗೆ ನಾನಾ ಕೌಶಲ್ಯಗಳನ್ನು ಕಲಿಯಬೇಕಾ? ಹಾಗಾದರೆ “ಲೇಡೀಸ್ ಕ್ಲಬ್’ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಬಹುದು.
ಶ್ರೀದೇವಿ ಅವರು “ಲೇಡಿಸ್ ಕ್ಲಬ್’ ಯೂಟ್ಯೂಬ್ ಚಾನೆಲ್ ಅನ್ನು 2015ರಲ್ಲಿ ಪ್ರಾರಂಭಿಸಿದ್ದಾರೆ. ಇದುವರೆಗೂ 812ಕ್ಕೂ ಹೆಚ್ಚು ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದ್ದು, 7.51ಲಕ್ಷಕ್ಕೂ ಹೆಚ್ಚು ಸಬ್‌ಸ್ಕೈಬರ್‌ಗಳನ್ನು ಹೊಂದಿದ್ದಾರೆ. ಇವರ ವೀಡಿಯೋಗಳನ್ನು 10 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಜನ ವೀಕ್ಷಿಸಿದ್ದಾರೆ.
ನಿತ್ಯ ಹೊಸದನ್ನು ಕಲಿಯಲು ಬಯಸುವವವರಿಗೆ, ಮುಖ್ಯವಾಗಿ ಮಹಿಳೆಯರಿಗಾಗಿ ಈ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದು, ಇದರಲ್ಲಿ ಹೇರ್‌ಸ್ಟೈಲ್, ಸೀರೆ ವಿನ್ಯಾಸ, ರೇಷ್ಮೆ ದಾರದ ಆಭರಣಗಳ ತಯಾರಿಕೆ, ವಿವಿಧ ಬಗೆಯ ತಿನಿಸುಗಳು, ಮೆಹಂದಿ ಡಿಸೈನ್, ರಂಗೋಲಿ ಬಿಡಿಸುವುದು, ಟೈಲರಿಂಗ್, ಕಸದಿಂದ ರಸ ಎನ್ನುವಂತೆ ತ್ಯಾಜ್ಯ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ಮಾಡುವುದನ್ನು ಹೇಳಿಕೊಡಲಾಗುತ್ತದೆ. ಈ ಕ್ಲಬ್, ಹೊಸ ಮತ್ತು ಕಾಲ್ಪನಿಕ ಆಲೋಚನೆಗಳನ್ನು ರಿಯಾಲಿಟಿ ಆಗಿ ಪರಿವರ್ತಿಸುವ ಕಾರ್ಯವನ್ನು ಒದಗಿಸುತ್ತದೆ.
ಸೀರೆಗಳಿಗೆ ಕುಚ್ಚು ಹಾಕುವ ಜತೆಗೆ ಇಂದಿನ ಆಧುನಿಕತೆ ತಕ್ಕಂತೆ ಬ್ಲೌಸ್‌ಗಳಿಗೆ ವಿವಿಧ ವಿನ್ಯಾಸದ ರೂಪ ಕೊಡಲು ಬಟ್ಟೆಯನ್ನು ಹೇಗೆ ಮತ್ತು ಎಷ್ಟು ಅಳತೆಯಲ್ಲಿ ಕಟ್ ಮಾಡಿಕೊಳ್ಳಬೇಕು, ಗೌನ್ ಸ್ಟಿಚ್ ಮಾಡುವುದು, ಹಳೆಯ ಬಟ್ಟೆಗೆ ಹೊಸ ರೂಪ ಕೊಡುವುದು ಮಾತ್ರವಲ್ಲದೇ, ಆರಿವರ್ಕ್ ಮಾಡುವುದನ್ನೂ ತಿಳಿಸಿಕೊಡಲಾಗುತ್ತದೆ. ಇಷ್ಟೇ ಅಲ್ಲದೇ ರೇಷ್ಮೆ ದಾರ, ಮುತ್ತು ಅಥವಾ ಮಣಿಗಳನ್ನು ಬಳಸಿ, ಪೆಂಡೆಂಟ್, ಓಲೆ, ಬಳೆ ಮಾಡುವುದು, ಸರಳ ರೀತಿಯಲ್ಲಿ ಕಡಿಮೆ ಸಮಯದಲ್ಲಿ ಮೆಹಂದಿ ಹಾಕುವುದು, ರಂಗೋಲಿ ಬಿಡಿಸುವುದು ಹೀಗೆ ಬಹು ರೀತಿಯ ವೀಡಿಯೋಗಳನ್ನು “ಲೇಡಿಸ್ ಕ್ಲಬ್’ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಬಹುದು.
ನೀವು ವಿವಿಧ ಕಲೆಗಳನ್ನು ಕಲಿಯಬೇಕೇ, ಹಾಗಾದರೆ https://youtube.com/@Ladies Club?si= nXWfnqFP6rOlNmNO ಭೇಟಿ ನೀಡಿ, ನಾನಾ ರೀತಿಯ ಕಲೆಗಳನ್ನು ನೀವು ಟ್ರೈ ಮಾಡಿ.
– ಭಾರತೀ ಸಜ್ಜನ್