Advertisement
ದಿನಕ್ಕೆ 40 ಕಿಲೋ ಅಡಿಕೆಆಲಂಕಾರು ಹಾಗೂ ಸುತ್ತಮುತ್ತಲಿನ ಮನೆಗಳಿಗೆ ತನ್ನ ಮಗನ ಆಸರೆಯೊಂದಿಗೆ ನಡೆದು ಅಥವಾ ಸೈಕಲಿನಲ್ಲಿ ಹೋಗಿ ಅಡಿಕೆ ಸುಲಿಯುತ್ತಾರೆ. ದಿನವೊಂದಕ್ಕೆ 30-40 ಕಿಲೋ ಅಡಿಕೆ ಸುಲಿದು ಸುಮಾರು 200 ರೂ.ಗಳಷ್ಟು ಸಂಪಾದಿಸುತ್ತಾರೆ. ಚೀಂಕ್ರ ಹುಟ್ಟು ಕುರುಡರಲ್ಲ. ಮನೆ ಹತ್ತಿರದ ಕಲ್ಲಿನ ಕೋರೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. 20 ವರ್ಷಗಳ ಹಿಂದೆ ಕಣ್ಣಿನ ನರದೌರ್ಬಲ್ಯದಿಂದ ಒಂದು ಕಣ್ಣಿನ ದೃಷ್ಟಿ ಕ್ಷೀಣಿಸುತ್ತಾ ಬಂತು. ತತ್ ಕ್ಷಣ ತಜ್ಞ ವೈದ್ಯರ ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ ಅಡ್ಡಿಯಾಯಿತು. ಪರಿಣಾಮವಾಗಿ ಒಂದು ಕಣ್ಣಿನ ದೃಷ್ಟಿಯನ್ನು ಕಳೆೆದುಕೊಂಡರು. ಮುಂದೆ ಇದಕ್ಕಾಗಿ ಶಸ್ತ್ರಚಿಕಿತ್ಸೆ ನಡೆಸಿದರೂ ಪರಿಣಾಮವಾಗಲಿಲ್ಲ. ಕ್ರಮೇಣ ಇನ್ನೊಂದು ಕಣ್ಣಿನ ದೃಷ್ಟಿ ಸಾಮರ್ಥ್ಯವೂ ನಶಿಸಿತು. ಅಂಧತ್ವದ ನಡುವೆ ಸಂಸಾರದ ಹೊರೆ ಹೊತ್ತುಕೊಂಡ ಚಿಂಕ್ರಣ್ಣ ಜೀವನ ನಿರ್ವಹಣೆಗೆ ಆರಿಸಿಕೊಂಡದ್ದು ಅಡಿಕೆ ಸುಲಿಯುವ ಕೆಲಸ. ತನ್ನ ಕೈ ಚಲನೆಯನ್ನು ಅಂದಾಜಿಸಿಕೊಂಡು ಅವರು ಅಡಿಕೆ ಸುಲಿಯುವ ಕೆಲಸ ಬಹಳ ಅಚ್ಚುಕಟ್ಟು. ಹೀಗಾಗಿಯೇ ಪರಿಸರದ ಅಡಿಕೆ ಬೆಳೆಗಾರರಿಗೆ ಇವರೇ ಖಾಯಂ ಆಗಿದ್ದಾರೆ. ಮಡದಿ ಬೀಡಿ ಕಟ್ಟಿ ಸಂಸಾರದ ಭಾರಕ್ಕೆ ಹೆಗಲು ಕೊಡುತ್ತಿದ್ದಾರೆ, ಮಗನೂ ಆದಾಯಗಳಿಸುತ್ತಿದ್ದು ಸಾಥ್ ನೀಡಿದೆ.
ಇಪ್ಪತ್ತು ವರ್ಷಗಳಿಂದ ಅಂಧತ್ವ ಹೊಂದಿದ್ದರೂ 4 ವರ್ಷಗಳಿಂದ ಸಿಗುತ್ತಿರುವ ಅಂಗವಿಕಲ ವೇತನ ಬಿಟ್ಟರೆ ಸರಕಾರದ ಯಾವುದೇ ಯೋಜನೆಗಳು ಇವರ ಕೈಸೇರಿಲ್ಲ. ಸುಶಿಕ್ಷಿತರು ಸೂಕ್ತ ಉದ್ಯೋಗ ಲಭಿಸದೆ ಸೋಮಾರಿಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಚೀಂಕ್ರ ಅವರ ಸ್ವಾವಲಂಬಿ ಬದುಕು ಸಮಾಜಕ್ಕೆ ಮಾದರಿಯಾಗಿದೆ. — ಸದಾನಂದ ಆಲಂಕಾರು