ಪಟ್ಲಾ: ಮೂರು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಜಿಎಸ್‌ಟಿಯಿಂದಾದ ಲಾಭವನ್ನು ಪ್ರಶ್ನಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಇದೀಗ, ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಕೇಂದ್ರವನ್ನು ಆಗ್ರಹಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜತೆಗೆ ಕೈ ಜೋಡಿಸಿ ಸರ್ಕಾರ ರಚಿಸಿರುವುದರಿಂದ ವಿಶೇಷ ಸ್ಥಾನಮಾನ ಆಗ್ರಹಕ್ಕೆ ತಡವೇಕೆಂದು ವಿಪಕ್ಷಗಳು ಕೇಳಿರುವ ಬೆನ್ನಲ್ಲೇ ನಿತೀಶ್ ಈ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದಾರೆ. ಪ್ರತಿ ವರ್ಷ ಪ್ರವಾಹ ಮುಂತಾದ ಸಮಸ್ಯೆಗಳಿಂದ ಬೆಳೆನಷ್ಟ, ಜನ ಜೀವನ ಅಸ್ತವ್ಯಸ್ತ ಮುಂತಾದ ಸಮಸ್ಯೆಗಳು ರಾಜ್ಯವನ್ನು ಕಾಡುತ್ತಿರುತ್ತವೆ. ಜನಸಂಖ್ಯೆಯೂ ಹೆಚ್ಚಾಗಿರುವುದರಿಂದ ರಾಜ್ಯದ ಜನರ ತಲಾ ಆದಾಯ ಶೋಚನೀಯ ಸ್ಥಿತಿಯಲ್ಲಿದೆ. ವಿಶೇಷ ಸ್ಥಾನಮಾನದಿಂದ ಸಿಗುವ ಹೆಚ್ಚುವರಿ ಅನುದಾನದಿಂದ ಬಿಹಾರವನ್ನು ಮತ್ತೆ ಸುಭದ್ರವಾಗಿ ಕಟ್ಟಲು ಸಹಾಯವಾಗುತ್ತದೆ ಎಂದಿದ್ದಾರೆ.