Advertisement
ಅನಂತ ಪದ್ಮನಾಭ ದೇವಾಲಯವು ಪರ್ಲತ್ತಾಯ ಕುಟುಂಬದ ಆರಾಧ್ಯ ದೇಗುಲ ವಾಗಿದ್ದರೂ ಈಗ ಸಂತಾನ ಪ್ರಾಪ್ತಿಯ ವಿಶೇಷ ಬೇಡಿಕೆ ಇಟ್ಟುಕೊಂಡು ಹಾಸನ, ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ಕಡೆಯಿಂದಲೂ 5 ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ಬೆಳಗ್ಗೆ 11 ಗಂಟೆಯಿಂದ ಸಂತಾನ ಗೋಪಾಲಕೃಷ್ಣ ಜಪದೊಂದಿಗೆ ಈ ವಿಶೇಷ ಪ್ರಾರ್ಥನೆ ಆರಂಭವಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ ನಡೆಯುತ್ತದೆ.
ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತ ದಂಪತಿ ದೇವಾಲಯದ ಎದುರಿನ ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬೇಕು. ಅರ್ಚಕರು ದೇವಾಲಯದಿಂದ ಪ್ರಸಾದದೊಂದಿಗೆ ವಿಶೇಷ ಅರ್ಚನೆ ಮಾಡಿದ ಅಕ್ಕಿಯನ್ನು ದಂಪತಿಗೆ ನೀಡುತ್ತಾರೆ.ದಂಪತಿಗಳು 3ದಿನ ತಮ್ಮ ಮನೆಯಲ್ಲಿ ಪ್ರತೀ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು, ಈ ಅಕ್ಕಿಯನ್ನು ತಾವು ಸೇವಿಸುವ ಆಹಾರದಲ್ಲಿ ಬೆರೆಸಿ ಸ್ವೀಕರಿಸಬೇಕು. ಹೀಗೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ನಂಬಿಕೆ. ಪ್ರತಿ ವರ್ಷ ನೂರಕ್ಕೂ ಅಧಿಕ ಭಕ್ತರು ಸಂತಾನದ ಅಪೇಕ್ಷೆಯಿಂದ ಹರಕೆ ಹೊರುತ್ತಾರೆ. ಹರಕೆ ರೂಪದಲ್ಲಿ ತೊಟ್ಟಿಲು- ಮಗು
ಈ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿಗೆ ತೊಟ್ಟಿಲು ಮಗು ಹರಕೆ ವಿಶೇಷವಾಗಿದೆ. ಪ್ರಾರ್ಥನೆಯಂತೆ ಸಂತಾನ ಪಡೆದ ದಂಪತಿ ಬೆಳ್ಳಿಯ ತೊಟ್ಟಿಲು, ಮಗು, 4 ಕುಡ್ತೆ ತುಪ್ಪ, ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿಯನ್ನು ದೇವಸ್ಥಾನಕ್ಕೆ ಸಲ್ಲಿಸಬೇಕು. ಕರು ಹಾಕದ ದನಗಳಿದ್ದರೆ ಕ್ಷೇತ್ರದಲ್ಲಿ ನಾಗನ ಹೆಡೆ ಸಮರ್ಪಿಸಿದರೆ ಅವುಗಳೂ ಕರು ಹಾಕುತ್ತವೆ ಎಂಬ ನಂಬಿಕೆ. ಈ ಬಾರಿ ಆ. 11ರಂದು ಶನಿವಾರ ಆಟಿ ಅಮಾವಾಸ್ಯೆ ವಿಶೇಷ ಪೂಜೆ, ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.