Advertisement

ವಿಶೇಷ ವರದಿ : ಮೆಟ್ರಿಕ್‌ ಟನ್‌ ಮರಳು ದರ 300 ರೂ. ಏರಿಕೆ?

07:50 AM Sep 16, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಮರಳು ಲಭ್ಯವಾಗುತ್ತಿರುವ ಬೆನ್ನಲ್ಲೇ ಈಗ ದರ ಪರಿಷ್ಕರಣೆ ಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಮರಳು ಪರವಾನಿಗೆದಾರರು ದರವನ್ನು ಪರಿಷ್ಕೃತ ಗೊಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Advertisement

ಜಿಲ್ಲಾಧಿಕಾರಿಯನ್ನೂ ಒಳಗೊಂಡ ಏಳು ಜನರ ಸಮಿತಿ ಮನವಿಯ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಒಂದುವೇಳೆ ಮನವಿಯನ್ನು ಪುರಸ್ಕರಿಸಿದ್ದೇ ಆದಲ್ಲಿ ಸಾರ್ವಜನಿಕರು ಮರಳಿಗೆ ಹೆಚ್ಚಿನ ದರವನ್ನು ನೀಡಬೇಕಾಗಲಿದೆ. ಸರಕಾರ ರಾಜಧನ ಏರಿಕೆ ಮಾಡಿದ ಹಿನ್ನೆಲೆ ಯಲ್ಲಿ ಮರಳಿನ ಬೆಲೆಯನ್ನೂ ಏರಿಸುವಂತೆ ಪರವಾನಿಗೆದಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಪ್ರತಿ 10 ಮೆಟ್ರಿಕ್‌ ಟನ್‌ ಮರಳಿನ ಹಿಂದಿನ ಮೂಲ ಬೆಲೆಗಿಂತ ಶೇ. 64ರಷ್ಟು ಬೆಲೆ ಏರಿಸುವಂತೆ ಕೋರಿಕೆ ಸಲ್ಲಿಸಲಾಗಿದೆ.

ಸರಕಾರಿ ಯೋಜನೆಗಳಿಗೆ ಹಿನ್ನಡೆ!
3 ಯೂನಿಟ್‌ ಮರಳಿನ ಮೇಲೆ 3,000 ರೂ. ಏರಿಕೆಯಾದರೆ ಸರಕಾರದ ವಿವಿಧ ಯೋಜನೆಗಳಡಿ ಮನೆ ನಿರ್ಮಿಸುವ ಫ‌ಲಾನುಭವಿಗಳಿಗೆ, ವಿವಿಧ ನಿರ್ಮಾಣ ಕಾರ್ಯಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೊರೊನಾದಿಂದಾಗಿ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮರಳಿನ ದರ ಮತ್ತೂಮ್ಮೆ ಏರಿಕೆಯಾದರೆ ನಿರ್ಮಾಣ ಕಾಮಗಾರಿ ಮತ್ತೆ ಕುಂಠಿತಗೊಳ್ಳಬಹುದೆಂಬ ಆತಂಕ ಸಾರ್ವಜನಿಕರದ್ದು.

ಪ್ರಾರಂಭವಾಗದ ಮರಳು ತೆರವು
ಜಿಲ್ಲೆಯಲ್ಲಿ ಸಿಆರ್‌ಝೆಡ್‌ ವ್ಯಾಪ್ತಿಯಲ್ಲಿ ಆ. 1ರಿಂದ ಮರಳು ದಿಬ್ಬ ತೆರವಿಗೆ ಸಂಬಂಧಿಸಿ ಇಲ್ಲಿಯವರೆಗೆ 147 ಮಂದಿಗೆ ತಾತ್ಕಾಲಿಕ ಪರವಾನಿಗೆ ವಿತರಿಸಲಾಗಿದೆ. ಆದರೆ ಸೆ. 14ವರೆಗೆ ಕೇವಲ 55 ಪರವಾನಿಗೆದಾರರು ಮರಳು ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧೆಡೆ ಪೂರ್ಣ ಪ್ರಮಾಣದಲ್ಲಿ ಮರಳು ತೆರವು ಕಾರ್ಯವಿನ್ನೂ ಆರಂಭವಾಗಿಲ್ಲ.

ಮರಳು ದಿಬ್ಬ ತೆರವು ನಿಧಾನವಾಗಲು ಕಾರ್ಮಿಕರ ಕೊರತೆಯೇ ಕಾರಣವಾಗಿದ್ದು, ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಇನ್ನೊಂದು ವಿಚಾರವೂ ಇದೆ. ದರ ಏರಿಕೆಯಾಗುವವರೆಗೆ ಕಾದು ನೋಡುವ ತಂತ್ರ ಇದು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Advertisement

7.13 ಲಕ್ಷ ಮೆಟ್ರಿಕ್‌ ಟನ್‌
ಉಡುಪಿ ಜಿಲ್ಲೆಯ ಜಿಆರ್‌ಝಡ್‌ ವ್ಯಾಪ್ತಿಯಲ್ಲಿ 10 ಕಡೆಗಳಲ್ಲಿ ಮರಳು ದಿಬ್ಬಗಳ ತೆರವಿಗೆ ಅವಕಾಶ ನೀಡಲಾಗಿದೆ. ಸ್ವರ್ಣಾ ನದಿ ವ್ಯಾಪ್ತಿಯಲ್ಲಿ 6, ಪಾಪನಾಶಿನಿ 1, ಸೀತಾ ನದಿಯಲ್ಲಿ 3 ಮರಳು ದಿಬ್ಬಗಳಲ್ಲಿ ಒಟ್ಟು ಸೇರಿ 7.13 ಲಕ್ಷ ಮೆಟ್ರಿಕ್‌ ಟನ್‌ ಮರಳು ಸಂಗ್ರಹವಿದೆ. ಸದ್ಯ ಪೂರ್ಣ ಪ್ರಮಾಣದಲ್ಲಿ ಮರಳುಗಾರಿಕೆ ಆರಂಭವಾಗದೇ ಇರುವುದರಿಂದ ಆ್ಯಪ್‌ ಬುಕ್ಕಿಂಗ್‌ ತಾತ್ಕಾಲಿಕ ಸ್ಥಗಿತವಾಗಿದೆ.

3,000 ರೂ. ಏರಿಕೆ ಸಾಧ್ಯತೆ!
ಜಿಲ್ಲೆಯಲ್ಲಿ ಪ್ರಸ್ತುತ 1 ಮೆಟ್ರಿಕ್‌ ಟನ್‌ ಮರಳಿನ ಬೆಲೆ 550 ರೂ. ಇದ್ದು, 3 ಯೂನಿಟ್‌ (10 ಮೆಟ್ರಿಕ್‌ ಟನ್‌) ಮರಳು ಬೆಲೆ 5,500 ರೂ.ಗೆ ಮಾರಾಟವಾಗುತ್ತಿದೆ. ಪ್ರಸ್ತುತ ಮರಳು ಸಂಘದ ಸದಸ್ಯರು 3 ಯೂನಿಟ್‌ ಮರಳು ಬೆಲೆಯನ್ನು 8,500 ರೂ.ಗೆ ಏರಿಸಲು ಮನವಿ ಮಾಡಿದ್ದಾರೆ. ಅದರಂತೆ ಪ್ರತಿ ಒಂದು ಮೆಟ್ರಿಕ್‌ ಟನ್‌ ಮೇಲೆ 300 ರೂ. ನಂತೆ 10 ಮೆಟ್ರಿಕ್‌ ಟನ್‌ ಮೇಲೆ 3,000 ಏರಿಕೆಯಾಗುವ ಸಾಧ್ಯತೆ ಇದೆ.

ಕಾರ್ಮಿಕರ ಕೊರತೆ
ಉಡುಪಿ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. 147 ಮಂದಿಗೆ ಟಿಪಿ ವಿತರಿಸಲಾಗಿದೆ. ಸ್ಯಾಂಡ್‌ ಬಜಾರ್‌ ಆ್ಯಪ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಕಾರ್ಮಿಕರ ಕೊರತೆಯಿಂದ ಪರವಾನಿಗೆದಾರರು ಪೂರ್ಣ ಪ್ರಮಾಣದಲ್ಲಿ ಕೆಲಸ ಪ್ರಾರಂಭಿಸಿಲ್ಲ.
– ರಾನ್ಜಿ ನಾಯಕ್‌, ಹಿರಿಯ ಭೂ ವಿಜ್ಞಾನಿ ಉಡುಪಿ ಜಿಲ್ಲೆ

ಚರ್ಚಿಸಿ ನಿರ್ಧಾರ
ಪರವಾನಿಗೆದಾರರು ಮರಳು ದರ ಪರಿಷ್ಕೃತಗೊಳಿಸುವಂತೆ ಮನವಿ ಮಾಡಿದ್ದಾರೆ. ಅದನ್ನು ಏಳು ಸದಸ್ಯರ ಜಿಲ್ಲಾ ಮಟ್ಟದ ಸಮಿತಿ ಮುಂದಿಟ್ಟು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮರಳು ದಿಬ್ಬ ತೆರವುಗೊಳಿಸಲು
ಯಾವುದೇ ಅಡೆತಡೆಯಿಲ್ಲ.
ಜಿ. ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ

ಮರಳಿಗೆ ಆ್ಯಪ್‌
ಜಿಲ್ಲೆಯಲ್ಲಿ ಮರಳು ಬೇಕಾದರೆ ಸ್ಯಾಂಡ್‌ ಬಜಾರ್‌ ಆ್ಯಪ್‌ ಮೂಲಕ ಪಡೆಯಬಹುದಾಗಿದೆ. ಮರಳು ಬೇಕಾದಲ್ಲಿ www.udupiesand.com ಮೂಲಕ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next