Advertisement

ವಿಶೇಷ ವರದಿ: ಬಂಟ್ವಾಳದಲ್ಲಿ ಅನುಷ್ಠಾನಗೊಳ್ಳುತ್ತಿದೆ ಮೆಸ್ಕಾಂನ ಜಿಐ ಸಬ್‌ಸ್ಟೇಶನ್‌!

11:59 AM Jul 18, 2020 | mahesh |

ಬಂಟ್ವಾಳ: ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ತಲಾ ಎರಡೆರಡು ಜಿಐ(ಗ್ಯಾಸ್‌ ಇನ್ಸುಲೇಟೆಡ್‌) ಸಬ್‌ಸ್ಟೇಶನ್‌ಗಳ ಅನುಷ್ಠಾನಕ್ಕೆ ಮೆಸ್ಕಾಂ ಮುಂದಾಗಿದ್ದು, ದ.ಕ. ಜಿಲ್ಲೆಯ ಒಂದು ಜಿಐ ಸಬ್‌ಸ್ಟೇಶನ್‌ ಬಂಟ್ವಾಳದಲ್ಲಿ ಅನುಷ್ಠಾನಗೊಳುತ್ತಿದೆ. ಜಪಾನ್‌ ತಂತ್ರಜ್ಞಾನದ ಈ ಸಬ್‌ಸ್ಟೇಶನ್‌ಗಳು ಅತ್ಯಂತ ಕಡಿಮೆ ಸ್ಥಳವಕಾಶ, ಹೆಚ್ಚು ಗುಣಮಟ್ಟದಿಂದ ಕೂಡಿರುತ್ತದೆ.

Advertisement

ಕೇಂದ್ರ ಸರಕಾರದ ಸಮಗ್ರ ವಿದ್ಯುತ್‌ ಅಭಿವೃದ್ಧಿ ಯೋಜನೆ (ಐಪಿಡಿಎಸ್‌)ಯಡಿಜಿಐ ಸಬ್‌ಸ್ಟೇಶನ್‌ಗಳು ಅನುಷ್ಠಾನ ಗೊಳ್ಳುತ್ತಿದ್ದು, ಈ ಯೋಜನೆಯಲ್ಲಿ ಮಂಗಳೂರಿನ ಉರ್ವ, ಬಂಟ್ವಾಳ, ಉಡುಪಿ, ಸಾಲಿಗ್ರಾಮಗಳಲ್ಲಿ ಒಟ್ಟು 39 ಕೋ.ರೂ. ವೆಚ್ಚದಲ್ಲಿ ಇದು ಅನುಷ್ಠಾನವಾಗುತ್ತದೆ.

ಕಾಮಗಾರಿ ಈಗಾಗಲೇ ಪ್ರಾರಂಭ
ಬಂಟ್ವಾಳ ಪುರಸಭಾ ವ್ಯಾಪ್ತಿಯ ನಿತ್ಯಾನಂದ ನಗರ ಅರ್ಬಿಗುಡ್ಡೆ ಪ್ರದೇಶ (ಮೂಡುಬಿದಿರೆ ರಸ್ತೆಯ ವಿದ್ಯಾಗಿರಿ ಸಮೀಪ)ದಲ್ಲಿ ಈ ಜಿಐ ಸಬ್‌ಸ್ಟೇಶನ್‌ನ
ಕಾಮಗಾರಿ ಈಗಾಗಲೇ ಪ್ರಾರಂಭ ಗೊಂಡಿದೆ. ಸಾಮಾನ್ಯವಾಗಿ ಇಂತಹ ಸಬ್‌ಸ್ಟೇಶನ್‌ ಅನುಷ್ಠಾನಗೊಳ್ಳಬೇಕಾದರೆ ಸುಮಾರು 50 ಸೆಂಟ್ಸ್‌ ಜಾಗಬೇಕಿದ್ದು, ಪ್ರಸ್ತುತ ಇದು ಕೇವಲ 16 ಸೆಂಟ್ಸ್‌ ಪ್ರದೇಶದಲ್ಲಿ ಅನುಷ್ಠಾನವಾಗುತ್ತಿದೆ.

ತಲಾ 8 ಎಂವಿಎ ಸಾಮರ್ಥ್ಯದ ಎರಡು ಅತ್ಯಾಧುನಿಕ ಟ್ರಾನ್ಸ್‌ಫಾರ್ಮರ್‌ಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ. ಬಂಟ್ವಾಳ ನಗರ ಪ್ರದೇಶಕ್ಕೆ ಪ್ರಸ್ತುತ ತಲಪಾಡಿ ಸಬ್‌ಸ್ಟೇಷನ್‌ನಿಂದ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಇದರ ಕಾಮಗಾರಿ ಪೂರ್ಣಗೊಂಡರೆ ಇಡೀ ನಗರಕ್ಕೆ ಇದೇ ಸಬ್‌ಸ್ಟೇಶನ್‌ನಿಂದ ವಿದ್ಯುತ್‌ ಪೂರೈಕೆಯಾಗಲಿದೆ. ಲೈನ್‌ ಫಾಲ್ಟ್ ಸಹಿತ ಎಲ್ಲ ರೀತಿಯ ತಾಂತ್ರಿಕ ತೊಂದರೆಗಳು ಕಂಡುಬಾರದೇ ಇರುವುದು ಜಿಐ ಸಬ್‌ಸ್ಟೇಶನ್‌ನ ವಿಶೇಷ.
ಜಪಾನ್‌ ತಂತ್ರಜ್ಞಾನದ ಜಿಐ ಪ್ರಥಮ ಬಾರಿಗೆ ಜಪಾನ್‌ನಲ್ಲಿ ಗ್ಯಾಸ್‌ ಇನ್ಸುಲೇಟೆಡ್‌(ಜಿಐ) ವಿಧಾನ ಅಭಿವೃದ್ಧಿ ಪಡಿಸಲಾಗಿದ್ದು, ಹೈ ವೋಲ್ಟೆಜ್‌ ವಿದ್ಯುತ್‌ ಪ್ರಸರಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಕಿರಿದಾಗಿಸಿ, ಸಲ್ಪರ್‌ ಹೆಕ್ಸಾಫ್ಲೋರಿಡ್‌ ಗ್ಯಾಸ್‌ ಕವಚದಲ್ಲಿ ಮುಚ್ಚಿಡುವ ವಿಧಾನ ಇದಾಗಿದೆ. ಬ್ರೇಕರ್‌, ಟ್ರಾನ್ಸ್‌ಫಾರ್ಮರ್‌ ಯಾರ್ಡ್‌ ಸಣ್ಣ ಕಂಟ್ರೋಲ್‌ ರೂಂನಿಂದ ಇದನ್ನು ನಿಯಂತ್ರಿಸಬಹುದು.

ವಿದ್ಯುತ್‌ ಸಬ್‌ಸ್ಟೇಶನ್‌ಗಳಲ್ಲಿ ಸಾಮಾನ್ಯ
ವಾಗಿ ಏರ್‌ ಇನ್ಸುಲೇಟೆಡ್‌ ವಿಧಾನ ಅಳವಡಿಸಲಾಗುತ್ತಿದ್ದು, ಹೈ ವೋಲ್ಟೆಜ್‌ ವಿದ್ಯುತ್‌ ಪ್ರಸರಣವಾಗುವ ಕಾರಣ ವಿದ್ಯುತ್‌ ತಂತಿಗಳ ಮಧ್ಯೆ ಸಾಕಷ್ಟು ಅಂತರ ಅಗತ್ಯವಾಗಿದೆ. ಹೀಗಾಗಿ ಸಬ್‌ಸ್ಟೇಶನ್‌ಗಳಿಗೆ ಸುಮಾರು ಅರ್ಧ ಎಕರೆಯಷ್ಟು ಜಾಗ ಬೇಕಾಗುತ್ತದೆ. 110 ಕೆವಿಗೆ 3ರಿಂದ 4 ಎಕರೆ ಪ್ರದೇಶ ಬೇಕಾಗುತ್ತದೆ. ಹೀಗಾಗಿ ಕಡಿಮೆ ಸ್ಥಳಾವಕಾಶ, ಗುಣಮಟ್ಟಕ್ಕಾಗಿ ಕೊಂಚ ದುಬಾರಿಯಾದರೂ ಜಿಐ ಸಬ್‌ಸ್ಟೇಷನ್‌ ಅನುಷ್ಠಾನಕ್ಕೆ ನಿರ್ಧ ರಿಸಲಾಗಿದೆ.

Advertisement

ಕಡಿಮೆ ಸ್ಥಳದಲ್ಲಿ ಅನುಷ್ಠಾನ
ಬಂಟ್ವಾಳ ನಗರ ಪ್ರದೇಶಕ್ಕೆ ವಿದ್ಯುತ್‌ ಪೂರೈಕೆಯ ದೃಷ್ಟಿಯಿಂದ ಬಂಟ್ವಾಳದಲ್ಲಿ ಜಿಐ ಸಬ್‌ಸ್ಟೇಶನ್‌ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ಕಡಿಮೆ ಸ್ಥಳವಕಾಶಬೇಕಿದ್ದು, ಪ್ರಸ್ತುತ ಇದು 16 ಸೆಂಟ್ಸ್‌ ಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಜಿಐ ತಂತ್ರಜ್ಞಾನದಲ್ಲಿ ಲೈನ್‌ ಫಾಲ್ಟ್ ಸೇರಿದಂತೆ ಹೆಚ್ಚಿನ ತಾಂತ್ರಿಕ ತೊಂದರೆಗಳಿರುವುದಿಲ್ಲ.
– ರಾಮಚಂದ್ರ ಎಂ.  ಕಾರ್ಯನಿರ್ವಾಹಕ ಎಂಜಿನಿಯರ್‌ ಮೆಸ್ಕಾಂ ಬಂಟ್ವಾಳ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next