Advertisement
ಕಾಪು: ಪೂರ್ಣಕಾಲಿಕ ವೈದ್ಯಾಧಿಕಾರಿ ಮತ್ತು ಹಲವು ಸಿಬಂದಿ ಕೊರತೆಯ ನಡುವೆಯೂ ಮಳೆಗಾಲದ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸಲು ಕಾಪು ಆರೋಗ್ಯ ಕೇಂದ್ರ ಸಜ್ಜಾಗಿದೆ. ಕಾಪು ಪುರಸಭೆ ವ್ಯಾಪ್ತಿಯ ಕಾಪು ಪಡು, ಮೂಳೂರು, ಉಳಿಯಾರಗೋಳಿ, ಕೈಪುಂಜಾಲು, ಮಲ್ಲಾರು ಸಹಿತವಾಗಿ ಪಾಂಗಾಳ, ಇನ್ನಂಜೆ, ಮಜೂರು, ಪಾದೂರು, ಹೇರೂರು ಗ್ರಾಮಗಳ ಜನತೆಗೆ ಇದು ಖಾಯಂ ಆಸ್ಪತ್ರೆಯಾಗಿದೆ. ಇದರೊಂದಿಗೆ ಉಚ್ಚಿಲ, ಬೆಳಪು, ಪಣಿಯೂರು ಸಹಿತ ಹಲವು ಪ್ರದೇಶಗಳ ಜನರೂ ತಮ್ಮ ವೈದ್ಯಕೀಯ ಸಂಬಂಧಿತ ಕಾರಣಗಳಿಗಾಗಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಬಿಸಿಕೊಂಡಿದ್ದಾರೆ.
ಇಲ್ಲಿನ ಆರೋಗ್ಯ ಕೇಂದ್ರಕ್ಕೆ ನಿತ್ಯ 70 ರಿಂದ 80 ರೋಗಿಗಳು ವೈದ್ಯಕೀಯ ತಪಾಸಣೆಗಾಗಿ ಆಗಮಿಸುತ್ತಿದ್ದಾರೆ. ಇಲ್ಲಿನ ವ್ಯಾಪ್ತಿಯಲ್ಲಿ ಹೇರೂರು, ಇನ್ನಂಜೆ, ಮಲ್ಲಾರು, ಪಡು, ಪಾಂಗಾಳ, ಉಳಿಯಾರ ಗೋಳಿ ಸಹಿತ 9 ಉಪ ಆರೋಗ್ಯ ಕೇಂದ್ರಗಳಿವೆ. ಇಲ್ಲೂ ಸಿಬಂದಿ ಮತ್ತು ಕಟ್ಟಡ ಕೊರತೆ ಕಾಡುತ್ತಿದೆ. ನಾಲ್ವರು ವೈದ್ಯರಿಂದ ಸೇವೆ
ಇಲ್ಲಿ ಪೂರ್ಣಕಾಲಿಕ ವೈದ್ಯರ ಕೊರತೆ ಇರುವುದರಿಂದ ಪಡುಬಿದ್ರಿಯ ವೈದ್ಯಾಧಿಕಾರಿ ಡಾ| ಬಿ.ಬಿ. ರಾವ್ ಅವರು ಪ್ರಭಾರ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಹೊರತು ಪಡಿಸಿ ಶಿರ್ವ ಆಸ್ಪತ್ರೆಯ ಡಾ| ಭರತ್ (2 ದಿನ), ಮುದರಂಗಡಿ ಆಸ್ಪತ್ರೆಯ ಡಾ| ಸುಬ್ರಹ್ಮಣ್ಯ ಪ್ರಭು (2 ದಿನ), ಇನ್ನಾ ಆಸ್ಪತ್ರೆಯ ಡಾ| ಸಂಧ್ಯಾ (2 ದಿನ) ಅವರು ಕಾಪು ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯರಿರುತ್ತಾರೆ.
Related Articles
ಪ್ರಸ್ತುತ 6 ಬೆಡ್ (3 ಪುರುಷ – 3 ಮಹಿಳೆ) ಗಳ ಸೌಲಭ್ಯ ಹೊಂದಿರುವ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1.30 ಕೋ. ರೂ. ವೆಚ್ಚದಲ್ಲಿ ನೂತನ ಕಟ್ಟಡ ರಚನೆಯಾಗುತ್ತಿದೆ. ಆದರೆ ತಾ| ಆಸ್ಪತ್ರೆಯಾಗಿ ಮೇಲ್ದರ್ಜೆಗೇರುವ ಕನಸು ಕಾಣುತ್ತಿದ್ದರೂ ಅದಕ್ಕೆ ಸಂಬಂಧಿತ ಕೆಲಸ ಕಾರ್ಯ ಇನ್ನೂ ಕಡತದಲ್ಲೇ ಬಾಕಿ ಇವೆ.
Advertisement
ಯಾವ ಹುದ್ದೆಗಳು ಖಾಲಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ-1, ಸಹಾಯಕ ವೈದ್ಯಾಧಿಕಾರಿ-1, ಪ್ರಥಮ ದರ್ಜೆ ಸಹಾಯಕ-1, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ-1, ಹಿರಿಯ ಪುರುಷ ಆರೋಗ್ಯ ಸಹಾಯಕ-1, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ-1, ಕಿರಿಯ ಪುರುಷ ಆರೋಗ್ಯ ಸಹಾಯಕ-4 ಖಾಲಿ, ಗ್ರೂಪ್ ಡಿ.-1 ಹುದ್ದೆ ಖಾಲಿಯಿದೆ. ಆ್ಯಂಬುಲೆನ್ಸ್ ಸೇವೆ ಲಭ್ಯವಿದ್ದು, ಎರವಲು ಸೇವೆಯ ಮೂಲಕ ಚಾಲಕ ಸೇವೆ ಸಲ್ಲಿಸುತ್ತಿದ್ದಾರೆ. ಏನೇನು ಸೌಲಭ್ಯಗಳಿವೆ?
ಮಲೇರಿಯಾ, ಡೆಂಗ್ಯೂ, ಚಿಕೂನ್‌ಗುನ್ಯಾ ಸಹಿತ ವಿವಿಧ ರೋಗಗಳ ಕುರಿತ ವೈದ್ಯಕೀಯ ಸೌಲಭ್ಯಗಳು, ಔಷಧ ಆಸ್ಪತ್ರೆಯಲ್ಲಿ ಲಭ್ಯವಿವೆೆ. ಇದರೊಂದಿಗೆ ಎಚ್1ಎನ್1ಗೆ ವಿಶೇಷ ಔಷಧಿ, ಅತಿಸಾರ ಭೇದಿ, ಹುಚ್ಚು ನಾಯಿ ಕಡಿತ, ಕ್ಷಯ, ಕುಷ್ಟ ರೋಗ ಸೇರಿದಂತೆ ವಿವಿಧ ಕಾಯಿಲೆಗಳ ಔಷಧ ಲಭ್ಯ. ಇದರೊಂದಿಗೆ ವಿವಿಧ ರೋಗಗಳು, ರೋಗ ನಿಯಂತ್ರಣ ಬಗ್ಗೆ ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಚ್ಛತೆಗೆ ಮನವಿ
ರಾಷ್ಟ್ರೀಯ ಕಾರ್ಯಕ್ರಮಗಳ ಅನುಷ್ಠಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಸ್ವಚ್ಛತೆಗೆ ಮನವಿ ಮಾಡಿದ್ದೇವೆ. ಬಾವಿ ನೀರಿನ ಸ್ವಚ್ಛತೆ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಲಾಗುತ್ತಿದೆ.
– ಡಾ| ಬಿ.ಬಿ. ರಾವ್, ಪ್ರಭಾರ ವೈದ್ಯಾಧಿಕಾರಿ ; ಸಂಪರ್ಕ: 9845367839 — ರಾಕೇಶ್ ಕುಂಜೂರು