Advertisement
ಹವಾಮಾನದ ಬದಲಾವಣೆ, ಉಷ್ಣಾಂಶದಲ್ಲಿ ಏರಿಳಿತಗಳಿಂದ ಜಾನುವಾರುಗಳ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ರೋಗ ವಾಹಕಗಳಾದ ಉಣುಗು ಮತ್ತಿತರ ಸೂಕ್ಷ್ಮ ಜೀವಿಗಳಿಂದ ರೋಗಾಣುಗಳು ವೃದ್ಧಿಸಿ ಹಲವು ರೀತಿಯ ಕಾಯಿಲೆಗಳು ಬಾಧಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಬೇಸಗೆಯಲ್ಲಿ ಸರಿಯಾಗಿ ಕುಡಿಯಲು ನೀರು ನೀಡದಿದ್ದರೆ, ಪೋಷಕಾಂಶದ ಬಗ್ಗೆ ಗಮನಹರಿಸದ್ದಿರೆ, ಸ್ವತ್ಛ ವಾತವರಣ ಕಲ್ಪಿಸದಿದ್ದರೆ ಹೆಚ್ಚಿನ ಸಮಸ್ಯೆಯಾಗುತ್ತದೆ.
ಗಬ್ಬದ / ಕರು ಹಾಕಿದ ದನಗಳು, /ಅಶಕ್ತ ದನಗಳ ಬಗ್ಗೆ ಹೆಚ್ಚಿನ ಜಾಗ್ರತೆ ಮುಖ್ಯ. ಪುಟ್ಟ ಕರುಗಳಿಗೆ ದೇಹದ ಉಷ್ಣತೆ ಸರಿದೂಗಿಸಿಕೊಳ್ಳುವ ಶಕ್ತಿ ಇಲ್ಲದ ಕಾರಣ ಜ್ವರ ಬಾಧಿಸಬಹುದು. ಇಂತಹ ಸಂದರ್ಭ ಫ್ಯಾನಿನ ವ್ಯವಸ್ಥೆ ಇದ್ದರೆ ಉತ್ತಮ. ಕರು ಹಾಕಿದ ದನಗಳ ದೇಹದಲ್ಲಿ ಶಕ್ತಿ ಕುಂಠಿತವಾಗುವುದರಿಂದ ಕರು ಹಾಕಲು ತಿಂಗಳ ಮುಂಚೆ ಮೊಳಕೆ ಬರಿಸಿದ ಹುರುಳಿ ಮುಂತಾದ ಉತ್ತಮ ಪೋಷಕಾಂಶಯುಕ್ತ ಆಹಾರ ನೀಡಬೇಕು. ಅಧಿಕ ತಾಪದಿಂದ ಜಾನುವಾರುಗಳಲ್ಲಿಯೂ ನಿರ್ಜಲೀಕರಣ ಸಮಸ್ಯೆ ತಲೆದೋರಿ ತೀವ್ರ ಸುಸ್ತು ಅನುಭವಿಸುತ್ತವೆ. ಜತೆಗೆ ಒಣ ಮೇವು ತಿನ್ನುವುದರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಬಯಲು ಗುಡ್ಡಗಾಡುಗಳಲ್ಲಿ ಮೇಯುವವು, ಕಾಂಕ್ರೀಟ್ ಛಾವಣಿ, ಶೀಟ್‌ಗಳಿಂದ ನಿರ್ಮಿಸಿದ ಹಟ್ಟಿಗಳಲ್ಲಿ ಸಾಕುವ ಜಾನುವಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೂರ್ಯಾಘಾತಕ್ಕೆ ಒಳಗಾಗುತ್ತವೆ. ಆದ್ದರಿಂದ ಅವುಗಳಿಗೆ ದಿನಕ್ಕೆ 2ರಿಂದ 3 ಸಲ ಶುದ್ಧವಾದ ನೀರನ್ನು ಕುಡಿಸಬೇಕು. ಬೆಳಗ್ಗೆ 11ರಿಂದ ಸಂಜೆ 4ರ ತನಕ ಬಿಸಿಲಿನ ತಾಪ ಹೆಚ್ಚು ಇರುವುದರಿಂದ ನೆರಳಿನಲ್ಲಿ ಸಂರಕ್ಷಿಸಬೇಕು. ಪೌಷ್ಟಿಕ ಆಹಾರ, ಹಸುರು ಹುಲ್ಲು ನೀಡಬೇಕು. ಅಪರಾಹ್ನ ಬಿಸಿಲಿನ ವೇಳೆ ಬೂಸ ಮುಂತಾದ ಪಶು ಆಹಾರ ಒಳ್ಳೆಯದಲ್ಲ. ದೇಹದ ಉಷ್ಣತೆಯನ್ನು ಕಾಪಾಡಲು ದೇಹಕ್ಕೆ ನೀರು ಚಿಮುಕಿಸಿದರೆ ಉತ್ತಮ. ಕಾಂಕ್ರೀಟ್ ಛಾವಣಿ, ಶೀಟ್‌ಗಳಿಂದ ನಿರ್ಮಿಸಿದ ಗಾಳಿ-ಬೆಳಕು ಇಲ್ಲದ ಕೊಟ್ಟಿಗೆಗಳಿದ್ದರೆ ಅದರಿಂದ ದೂರವಿರಿಸಿ ಮರದ ಅಡಿ, ನೆರಳಿನ ಪ್ರದೇಶದಲ್ಲಿ ಕಟ್ಟಿ ಹಾಕುವುದು ಸೂಕ್ತ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ತತ್‌ಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಔಷಧ ನೀಡುವುದು, ಸೂಕ್ತಸಲಹೆ ಪಡೆಯುವುದು ಉತ್ತಮ ಎನ್ನುತ್ತಾರೆ ಬ್ರಹ್ಮಾವರ ತಾಲೂಕು ಆಡಳಿತ ಪಶುವೈದ್ಯಾಧಿಕಾರಿ ಡಾ| ಪ್ರದೀಪ್ ಕುಮಾರ್.
Related Articles
ಬೇಸಗೆಯಲ್ಲಿ ನಾಯಿ, ಬೆಕ್ಕುಗಳು ಕೂಡ ತಂಪಾದ ವಾತಾವರಣಕ್ಕೆ ಹಾತೊರೆಯುತ್ತವೆ. ಬಿಸಿ ಗಾಳಿಯಿಂದ ಅವುಗಳಿಗೆ ಉಸಿರುಗಟ್ಟುವಿಕೆ, ಹೃದಯ ಬಡಿತ ಹೆಚ್ಚಳ, ಜೊಲ್ಲು ಸುರಿಯುವಿಕೆ ಕಾಣಿಸಿಕೊಳ್ಳಬಹುದು. ಆಗ ಅವುಗಳಿಗೆ ನೆರಳಿನಲ್ಲಿ ವಿಶ್ರಾಂತಿ ಸಿಗುವಂತೆ ಮಾಡಿ ಸ್ವತ್ಛ ವಾತಾವರಣ ಕಲ್ಪಿಸಬೇಕು. ತಣ್ಣನೆಯ ಆಹಾರ, ತಂಪಾದ ಗಾಳಿ ಇರುವಂತೆ ನೋಡಿಕೊಳ್ಳಬೇಕು. ನಿತ್ಯ ಸ್ನಾನ ಮಾಡಿಸುವ ಮೂಲಕ ದೇಹ ತಂಪಗಿರುವಂತೆ ಮಾಡಬೇಕು. ಕಾರಿನಲ್ಲಿ ಹೊರಗಡೆ ಕರೆದೊಯ್ಯುವುದು, ಕಾರಿನ ಒಳಗಡೆ ಬಿಡುವುದು ಸರಿಯಲ್ಲ. ಅತಿಯಾಗಿ ಜೊಲ್ಲು ಸುರಿಸುವುದು, ಉಸಿರಾಟದ ತೊಂದರೆಯ ಲಕ್ಷಣ ಕಂಡರೆ ಅಥವಾ ಜ್ವರ, ವಾಂತಿಯ ಲಕ್ಷಣ ಗಮನಕ್ಕೆ ಬಂದರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
Advertisement
ಮೊಸರು ಮತ್ತು ಅನ್ನ, ಮಜ್ಜಿಗೆ ಅಥವಾ ಮೊಸರು ಬೆರೆಸಿದ ಪೀನಟ್ ಬಟರ್ ಅವುಗಳಿಗೆ ಬೇಸಗೆಯ ಉತ್ತಮ ಆಹಾರ. ಮಾಂಸಾಹಾರ, ಉಪ್ಪು ಮತ್ತು ಸಕ್ಕರೆ ಇರುವ ಉತ್ಪನ್ನಗಳನ್ನು ಕಡಿಮೆ ನೀಡಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.
ದ.ಕ., ಉಡುಪಿ ಜಿಲ್ಲೆಯಲ್ಲಿ ತಿಂಗಳಲ್ಲಿ ಹಸುಗಳ 21 ಸಾವುಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 16 ದನಗಳು ಸಾವನ್ನಪ್ಪಿದ್ದು ಅದರಲ್ಲಿ 4 ವಿಷಮಿಶ್ರಿತ ಆಹಾರ ಸೇವನೆಯಿಂದ ಸಂಭವಿಸಿದರೆ, ಮಿಕ್ಕುಳಿದವು ಆರೋಗ್ಯ ಸಮಸ್ಯೆ ಬೇಸಗೆಯಲ್ಲಿ ಉಲ್ಬಣಗೊಂಡು ಸಂಭವಿಸಿದೆ. ದ.ಕ. ಜಿಲ್ಲೆಯಲ್ಲಿ 5 ದನಗಳು ಆರೋಗ್ಯ ಸಮಸ್ಯೆ ಉಲ್ಬಣಗೊಂಡು ಸಾವನ್ನಪ್ಪಿವೆ ಎಂದು ಪಶು ವೈದ್ಯ ಇಲಾಖೆ ಮೂಲಗಳು ತಿಳಿಸಿದೆ. ಮನುಷ್ಯನ ರೀತಿಯಲ್ಲೇ ಬೇಸಗೆಯಲ್ಲಿ ಪ್ರಾಣಿಗಳ ಆರೋಗ್ಯದ ಬಗ್ಗೆ ಕೂಡ ಹೆಚ್ಚು ಕಾಳಜಿ ವಹಿಸಬೇಕು. ಅನಾ ರೋಗ್ಯದ ಲಕ್ಷಣ ಕಾಣಿಸಿದಾಗ ನಿರ್ಲಕ್ಷ್ಯ ತೋರಿದಲ್ಲಿ ಜೀವ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಹೆಚ್ಚಿನ ಜಾಗ್ರತೆ ಅಗತ್ಯ.
– ಡಾ| ರೆಡ್ಡಪ್ಪ /
ಡಾ| ಅರುಣ್ ಕುಮಾರ್,
ಉಪನಿರ್ದೇಶಕರು, ಪಶುಪಾಲನೆ ಇಲಾಖೆ ಉಡುಪಿ / ದ.ಕ. ಜಿಲ್ಲೆ -ರಾಜೇಶ್ ಗಾಣಿಗ ಅಚ್ಲಾಡಿ