Advertisement

ಸೌಕರ್ಯಗಳಿಗೆ ಕಾಯುತ್ತಿದೆ ಗಡಿನಾಡ ಒಡ್ಯದ ಸ.ಉ.ಹಿ. ಪ್ರಾ.ಶಾಲೆ

02:50 AM Jun 06, 2018 | Team Udayavani |

ನಿಡ್ಪಳ್ಳಿ: ಪಾಣಾಜೆಯ ಒಡ್ಯದಲ್ಲಿರುವ ದ.ಕ. ಜಿ. ಪಂ. ಸ. ಉ.ಹಿ.ಪ್ರಾಥಮಿಕ ಶಾಲೆ ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿದೆ. 1960ರಲ್ಲಿ ದಾನಿಗಳ ಸಹಕಾರದಿಂದ ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತ್ತು. ನಾಲ್ಕು ವರ್ಷಗಳ ಹಿಂದೆ ಉನ್ನತೀಕರಣಗೊಂಡರೂ ಸೌಕರ್ಯಗಳು ಇಲ್ಲದೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಸುಮಾರು 58 ವರ್ಷಗಳಷ್ಟು ಹಳೆಯದಾದ ಗಡಿನಾಡಿನ ಒಡ್ಯ ಶಾಲೆಯನ್ನು ಸರಕಾರ ಮುತುವರ್ಜಿ ವಹಿಸಿ, ಅಭಿವೃದ್ಧಿ ಪಡಿಸಬೇಕೆಂದು ಶಾಲಾಭಿವೃದ್ಧಿ ಸಮಿತಿ ಕಳಕಳಿ ವ್ಯಕ್ತಪಡಿಸಿದೆ.

Advertisement

ಟ್ಯಾಂಕ್‌, ಶೌಚಾಲಯ ದುರಸ್ತಿ
ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ ಅನ್ನು ಹಲವು ವರ್ಷಗಳ ಹಿಂದೆ ಕಾಂಕ್ರೀಟ್‌ ರಿಂಗ್‌ ಮಾಡಿ ಕಟ್ಟಲಾಗಿದೆ. ಈಗ ಸಿಮೆಂಟ್‌ ಕಿತ್ತು ಹೋಗಿ, ನೀರು ಸೋರುತ್ತಿದೆ. ಇದನ್ನು ತತ್‌ ಕ್ಷಣವೇ ದುರಸ್ತಿ ಮಾಡಬೇಕು ಅಥವಾ ಹೊಸದಾಗಿ ನಿರ್ಮಿಸಬೇಕು. ಶಾಲೆಯಲ್ಲಿ ಸದ್ಯ ಇರುವ ಶೌಚಾಲಯ ಬಹಳ ಹಳೆಯದಾಗಿದೆ. ಸಿಮೆಂಟ್‌ ಶೀಟ್‌ಗಳು ಗಾಳಿ – ಮಳೆಗೆ ಹಾರುವ ಭೀತಿ ಸದಾ ಇರುತ್ತದೆ. ನೆಲವೂ ಸಾರಣೆ ಕಿತ್ತುಹೋಗಿ, ತೀರಾ ನಾದುರಸ್ತಿಯಲ್ಲಿದೆ. ಹೊಸ ಶೌಚಾಲಯ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲ.

ತರಗತಿ ಕೊಠಡಿ
ಶಾಲೆಯ ಕೊಠಡಿಗಳ ಪುನರ್‌ ನಿರ್ಮಾಣ ಆಗದೆ ನಿತ್ಯದ ಪಾಠ ಮಾಡಲು ತುಂಬಾ ತೊಂದರೆಯಾಗುತ್ತಿದೆ. ಒಂದು ಕೊಠಡಿ ಬಿರುಕು ಬಿಟ್ಟಿದ್ದು, ಕಳೆದ ವರ್ಷವೇ ಬೇರೆ ಕೊಠಡಿಗೆ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೂ ಮಾಹಿತಿ ನೀಡಲಾಗಿದೆ. ಅದಕ್ಕೆ ಇನ್ನಷ್ಟೇ ಸ್ಪಂದನೆ ಸಿಗಬೇಕಿದೆ. ಮಕ್ಕಳು ಊಟ ಮುಗಿಸಿ ತಟ್ಟೆ ಹಾಗೂ ಕೈ ತೊಳೆಯಲು ವ್ಯವಸ್ಥಿತವಾದ ಸೌಲಭ್ಯ ಆಗಬೇಕು. ಶಾಲೆ ಆವರಣ ಗೋಡೆಯ ಕಲ್ಲುಗಳು ಮಳೆಯ ಹೊಡೆತಕ್ಕೆ ಧರಾಶಾಹಿಯಾಗಿವೆ. ಅದನ್ನು ಪುನಃ ನಿರ್ಮಿಸಲು ಅನುದಾನ ಅಗತ್ಯವಿದೆ. ಶಾಲೆಗೆ ರಂಗಮಂದಿರ ನಿರ್ಮಾಣ ಮಾಡಿ, ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕಿದೆ. ಕಳೆದ ಸಾಲಿನಲ್ಲಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಇಲ್ಲಿ ಬಹಳ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಇಲ್ಲಿ ಕೇವಲ ಇಬ್ಬರು ಶಿಕ್ಷಕರು ಖಾಯಂ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, 7ನೇ ತರಗತಿ ವರೆಗೆ ಪಾಠ ಮಾಡುವುದು ಕಷ್ಟವಾಗುತ್ತಿದೆ. ಇನ್ನೂ ಕನಿಷ್ಠ ಮೂವರು ಶಿಕ್ಷಕರ ಅಗತ್ಯವಿದ್ದು, ತತ್‌ಕ್ಷಣ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕಿದೆ.

ವಿಶಾಲ ಆಟದ ಮೈದಾನ
ಎಸ್‌.ಡಿ.ಎಂ.ಸಿ. ಅಧ್ಯಕ್ಷ ಶ್ರೀಕೃಷ್ಣ ಭಟ್‌ ಅವರ ಮುತುವರ್ಜಿಯಿಂದಲೇ ಇಲ್ಲಿ ಆಟದ ಮೈದಾನ ರಚನೆಯಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವತಿಯಿಂದ ನಡೆದ ಎನ್ನೆಸೆಸ್‌ ಕ್ಯಾಂಪ್‌ ಮುಖಾಂತರ ಆಟದ ಮೈದಾನ ವಿಸ್ತರಣೆಯಾಯಿತು. ಅದರಲ್ಲಿ ನಡೆದ ಕಾಮಗಾರಿ ಮುಂದುವರಿಸಲು ತಮ್ಮ ಕೈಯಿಂದಲೇ 1.25 ಲಕ್ಷ ರೂ. ಖರ್ಚು ಮಾಡಿ ಮಕ್ಕಳಿಗೆ ಆಟವಾಡಲು ಸುಸಜ್ಜಿತ ಆಟದ ಮೈದಾನ ನಿರ್ಮಿಸಿದ್ದಾರೆ.

ಶಿಕ್ಷಕರ ನೇಮಿಸಿ
ಒಡ್ಯ ಶಾಲೆ ಮೂಲಸೌಕರ್ಯಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಶಿಕ್ಷಕರ ನೇಮಕ ಆಗಬೇಕು. ತರಗತಿ ಕೊಠಡಿ, ಶೌಚಾಲಯ, ನೀರಿನ ಟ್ಯಾಂಕ್‌ ಹಾಗೂ ಆವರಣ ಗೋಡೆ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದು, ಶಿಕ್ಷಣ ಇಲಾಖೆ ಸ್ಪಂದಿಸಬೇಕು. ಖಾಸಗಿ ಶಾಲೆಗಳಿಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ಸರಕಾರಿ ಶಾಲೆಗಳೂ ತಯಾರಾಗಬೇಕು. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಕರಿಸಬೇಕು.
– ಶ್ರೀಕೃಷ್ಣ ಭಟ್‌ ಬಟ್ಯಮೂಲೆ, ಎಸ್‌ಡಿಎಂಸಿ ಅಧ್ಯಕ್ಷರು

Advertisement

— ಗಂಗಾಧರ ಸಿ.ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next