Advertisement

ಸಬ್ಬಸಿಗೆ ಹಬ್ಬ

12:47 PM Oct 03, 2018 | |

 ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ ಸುಲಭವಾಗಿ ಮಾಡಬಹುದಾದ ಕೆಲವೊಂದು ಅಡುಗೆಗಳ ರೆಸಿಪಿ ಇಲ್ಲಿದೆ. 

Advertisement

1. ಸಬ್ಬಸಿಗೆ ಸೊಪ್ಪಿನ ಸೂಪ್‌ 
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಸಬ್ಬಸಿಗೆ ಸೊಪ್ಪು-2 ಕಪ್‌, ಕ್ಯಾರೆಟ್‌ ತುರಿ-1/2 ಕಪ್‌, ಟೊಮೆಟೊ-1/2 ಕಪ್‌,  ಆಲೂಗಡ್ಡೆ ತುರಿ-1/2 ಕಪ್‌, -1/2 ಕಪ್‌, ಕಾಳು ಮೆಣಸಿನಪುಡಿ-1/2 ಚಮಚ, ಶುಂಠಿ-ಉಗುರಿನ ಗಾತ್ರ, ಸಕ್ಕರೆ-1/2 ಚಮಚ, ಉಪ್ಪು ರುಚಿಗೆ, ತುಪ್ಪ-1 ಚಮಚ, ಬೆಣ್ಣೆ ಸ್ವಲ್ಪ.  
ಮಾಡುವ ವಿಧಾನ:  ಬಾಣಲೆಗೆ ತುಪ್ಪ ಹಾಕಿ, ಟೊಮೆಟೊ, ಈರುಳ್ಳಿ, ಕ್ಯಾರೆಟ್‌, ಆಲೂಗಡ್ಡೆಯನ್ನು ಚೆನ್ನಾಗಿ ಬಾಡಿಸಿ. ನಂತರ ಶುಂಠಿ, ಸಬ್ಬಸಿಗೆ ಸೊಪ್ಪು, ಕಾಳು ಮೆಣಸು, ಸಕ್ಕರೆ, ಉಪ್ಪು ಸೇರಿಸಿ ಅರೆಯಿರಿ. ಅರೆದ ಮಿಶ್ರಣವನ್ನು ಚೆನ್ನಾಗಿ ಕುದಿಸಿದರೆ ಸಬ್ಬಸಿಗೆ ಸೂಪ್‌ ರೆಡಿ.
ಅದಕ್ಕೆ ಬೆಣ್ಣೆ ಸೇರಿಸಿ ಸವಿಯಿರಿ. 

2.ಸಬ್ಬಸಿಗೆ ಸೊಪ್ಪಿನ ಚಟ್ನಿಪುಡಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಸಬ್ಬಸಿಗೆ ಸೊಪ್ಪು-2 ಕಪ್‌, ಕರಿಬೇವಿನ ಎಲೆ-1 ಕಪ್‌, ಕಡಲೆಬೇಳೆ-1/2 ಕಪ್‌, ಉದ್ದಿನಬೇಳೆ-1/4 ಕಪ್‌, ಒಣಕೊಬ್ಬರಿ ತುರಿ-1 ಕಪ್‌, ಅಚ್ಚ ಖಾರದ ಪುಡಿ-1/2 ಕಪ್‌, ಹುಣಸೆಹಣ್ಣು-1 ಇಂಚು, ಸಕ್ಕರೆ-1 ಚಮಚ,
ಉಪ್ಪು-ರುಚಿಗೆ, ಎಣ್ಣೆ-1/4 ಕಪ್‌, ಸಾಸಿವೆ-1 ಚಮಚ, ಇಂಗು-1/4 ಚಮಚ.
ಮಾಡುವ ವಿಧಾನ: ಸಬ್ಬಸಿಗೆ ಸೊಪ್ಪು, ಕರಿಬೇವು, ಕಡಲೆಬೇಳೆ, ಉದ್ದಿನಬೇಳೆ, ಒಣಕೊಬ್ಬರಿ ತುರಿ, ಖಾರದ ಪುಡಿಯನ್ನು ಬೇರೆಬೇರೆಯಾಗಿ ಹುರಿದು, ಒಟ್ಟಿಗೆ ಸೇರಿಸಿಡಿ. ಆ ಮಿಶ್ರಣಕ್ಕೆ ಹುಣಸೆಹಣ್ಣು, ಸಕ್ಕರೆ, ಉಪ್ಪು ಸೇರಿಸಿ ನುಣ್ಣಗೆ ಪುಡಿ ಮಾಡಿ.
ಆ ಪುಡಿಗೆ ಸಾಸಿವೆ-ಇಂಗಿನ ಒಗ್ಗರಣೆ ಸೇರಿಸಿದರೆ ಚಟ್ನಿ ಪುಡಿ ಸಿದ್ಧ. 

3.ಸಬ್ಬಸಿಗೆ ದಾಲ್‌
ಬೇಕಾಗುವ ಸಾಮಗ್ರಿ:  ಹೆಚ್ಚಿದ ಸಬ್ಬಸಿಗೆ ಸೊಪ್ಪು-2 ಕಪ್‌, ತೊಗರಿಬೇಳೆ-1 ಕಪ್‌, ಅರಿಶಿನ-1/2 ಚಮಚ, ಜೀರಿಗೆ ಪುಡಿ-1 ಚಮಚ, ಕಾಳು ಮೆಣಸಿನಪುಡಿ-1/2 ಚಮಚ, ಉಪ್ಪು, ತೆಂಗಿನತುರಿ-3 ಚಮಚ, ಹಸಿಮೆಣಸು-3, ಎಣ್ಣೆ-3 ಚಮಚ, ಸಾಸಿವೆ-1ಚಮಚ.
ಮಾಡುವ ವಿಧಾನ: ತೊಗರಿಬೇಳೆಗೆ ಚಿಟಿಕೆ ಅರಿಶಿನ, ಅರ್ಧ ಚಮಚ ಎಣ್ಣೆ ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ಸಾಸಿವೆ ಒಗ್ಗರಣೆ ಮಾಡಿ, ಹಸಿಮೆಣಸು ಹಾಗೂ ಸಬ್ಬಸಿಗೆ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿ. ಅದಕ್ಕೆ ಬೇಯಿಸಿದ ಬೇಳೆ, ಜೀರಿಗೆ, ಕಾಳುಮೆಣಸು, ಉಪ್ಪು, ತೆಂಗಿನತುರಿ ಹಾಕಿ ಕುದಿಸಿ. 

4. ಸಬ್ಬಸಿಗೆ ಪರೋಟಾ
ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು-2 ಕಪ್‌, ಹೆಚ್ಚಿದ ಸಬ್ಬಸಿಗೆ ಸೊಪ್ಪು-1 ಕಪ್‌, ಗರಂ ಮಸಾಲೆ ಪುಡಿ-2 ಚಮಚ,
ಹೆಚ್ಚಿದ ಕೊತ್ತಂಬರಿ ಸೊಪ್ಪು-1/2 ಕಪ್‌, ಜೀರಿಗೆ ಪುಡಿ-1 ಚಮಚ, ಎಣ್ಣೆ-1/2 ಕಪ್‌, ಉಪ್ಪು-ರುಚಿಗೆ.
ಮಾಡುವ ವಿಧಾನ: ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ, ಉಪ್ಪು, ಗರಂ ಮಸಾಲೆ ಪುಡಿ, ಜೀರಿಗೆ ಪುಡಿ, ಸಬ್ಬಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ, ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಎರಡು ಗಂಟೆ ನೆನೆಯಲಿರಿಸಿ. ಕಲಸಿದ ಹಿಟ್ಟಿನಿಂದ ಉಂಡೆ ಮಾಡಿ, ಚಪಾತಿಯ ಆಕಾರದಲ್ಲಿ ಲಟ್ಟಿಸಿ, ಕಾವಲಿ ಮೇಲೆ ಎರಡೂ ಬದಿ ಬೇಯಿಸಿದರೆ ರುಚಿಯಾದ ಪರೋಟಾ ರೆಡಿ.

Advertisement

5.ಸಬ್ಬಸಿಗೆ ಸೊಪ್ಪಿನ ನುಚ್ಚಿನುಂಡೆ
ಬೇಕಾಗುವ ಸಾಮಗ್ರಿ: ಹೆಚ್ಚಿದ ಸಬ್ಬಸಿಗೆ ಸೊಪ್ಪು-2 ಕಪ್‌, ತೊಗರಿಬೇಳೆ-1/2 ಕಪ್‌, ಶುಂಠಿ ತುರಿ-1 ಚಮಚ, ಈರುಳ್ಳಿ-1/2 ಕಪ್‌, ಹಸಿಮೆಣಸು-4, ಕೊತ್ತಂಬರಿ ಸೊಪ್ಪು-1/4 ಕಪ್‌, ಉಪ್ಪು-ರುಚಿಗೆ.
ಮಾಡುವ ವಿಧಾನ: ಸಬ್ಬಸಿಗೆ ಸೊಪ್ಪನ್ನು ಎಣ್ಣೆಯಲ್ಲಿ ಸ್ವಲ್ಪ ಬಾಡಿಸಿ. ತೊಗರಿಬೇಳೆಯನ್ನು ಅರ್ಧ ಗಂಟೆ ನೀರಲ್ಲಿ ನೆನೆಸಿ, ಬಸಿದು, ನೀರು ಹಾಕದೆ ತರಿತರಿಯಾಗಿ ಅರೆದಿಡಿ. ಹಸಿಮೆಣಸು, ಕೊತ್ತಂಬರಿ ಸೊಪ್ಪು, ಈರುಳ್ಳಿಯನ್ನು ಎಣ್ಣೆಯಲ್ಲಿ ಬೇರೆಬೇರೆಯಾಗಿ ಹುರಿದು, ಒಟ್ಟಿಗೆ ಸೇರಿಸಿ ಅರೆಯಿರಿ. ಆ ಮಿಶ್ರಣಕ್ಕೆ, ಅರೆದ ತೊಗರಿಬೇಳೆ, ಸಬ್ಬಸಿಗೆ ಸೊಪ್ಪು ಹಾಗೂ ಮಿಕ್ಕ ಸಾಮಗ್ರಿಗಳನ್ನು ಸೇರಿಸಿ, ನೀರು ಹಾಕದೆ ಗಟ್ಟಿಯಾಗಿ ಕಲಿಸಿ ಆ ಮಿಶ್ರಣದಿಂದ ಲಿಂಬೆ ಗಾತ್ರದ ಉದ್ದುದ್ದ ಉಂಡೆಗಳನ್ನು ಮಾಡಿ, ಹತ್ತು ನಿಮಿಷ ಹಬೆಯಲ್ಲಿ ಬೇಯಿಸಿ. ಸಬ್ಬಸಿಗೆ ಸೊಪ್ಪಿನ ನುಚ್ಚಿನುಂಡೆಯನ್ನು ಟೊಮೆಟೊ ಸಾಸ್‌ ಜೊತೆ ಸವಿಯಿರಿ. 

6.ಸಬ್ಬಸಿಗೆ ಸೊಪ್ಪಿನ ಕಟ್ಲೆಟ್‌
ಬೇಕಾಗುವ ಸಾಮಗ್ರಿ: ಕತ್ತರಿಸಿದ ಸಬ್ಬಸಿಗೆ ಸೊಪ್ಪು-1 ಕಪ್‌, ಆಲೂಗಡ್ಡೆ-2, ಈರುಳ್ಳಿ-1/2 ಕಪ್‌, ಕೊತ್ತಂಬರಿ ಸೊಪ್ಪು-4 ಚಮಚ, ಪುದಿನಾ ಸೊಪ್ಪು-2 ಚಮಚ, ಖಾರದ ಪುಡಿ-1 ಚಮಚ, ಎಣ್ಣೆ-1 ಕಪ್‌, ಅರಿಶಿನ-1/2 ಚಮಚ, ಉಪ್ಪು-ರುಚಿಗೆ, ಜೀರಿಗೆ-1 ಚಮಚ, ಬಟಾಣಿ-1/2 ಕಪ್‌, ಅಕ್ಕಿ ಹಿಟ್ಟು-1/2 ಕಪ್‌.
ಮಾಡುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ತುರಿಯಿರಿ. ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ, ಕ್ರಮವಾಗಿ ಅರಿಶಿನ, ಜೀರಿಗೆ, ಖಾರದ ಪುಡಿ, ಈರುಳ್ಳಿ, ಬಟಾಣಿ ಹಾಕಿ ಬಾಡಿಸಿ ಈ ಮಿಶ್ರಣಕ್ಕೆ, ಬೇಯಿಸಿದ ಆಲೂಗಡ್ಡೆ, ಸಬ್ಬಸಿಗೆ, ಕೊತ್ತಂಬರಿ, ಪುದೀನಾ ಸೊಪ್ಪು, ಉಪ್ಪು ಸೇರಿಸಿ ಕಲಸಿ ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ, ಅಕ್ಕಿ ಹಿಟ್ಟು ಸೇರಿಸಿ, ವಡೆಯ ಹದಕ್ಕಿ ಕಲಸಿ. ಈ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ಮಾಡಿ, ವಡೆಯಾಕಾರದಲ್ಲಿ ತಟ್ಟಿ.ಎಣ್ಣೆ ಸವರಿದ ಕಾವಲಿಯ ಮೇಲೆ, ಎರಡೂ ಬದಿಗಳನ್ನು ಹೊಂಬಣ್ಣ ಬರುವವರೆಗೆ ಬೇಯಿಸಿ.  

-ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next