Advertisement

ಮಾಡದ ತಪ್ಪಿಗಾಗಿ ಶಿಕ್ಷಕರಿಗೆ “ವಿಶೇಷ’ವಸೂಲಿ ಶಿಕ್ಷೆ !

06:00 AM Nov 12, 2017 | Team Udayavani |

ಹುಬ್ಬಳ್ಳಿ: ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ವಿಶೇಷ ಭತ್ತೆ ನೀಡಿಕೆ ವಿಚಾರದಲ್ಲಿ ಅಧಿಕಾರಿಗಳು ಮಾಡಿದ ತಪ್ಪಿಗೆ 
ರಾಜ್ಯದ 7,132 ಶಿಕ್ಷಕರು, ಉಪನ್ಯಾಸಕರು ಸಮಸ್ಯೆ ಎದುರಿಸುವಂತಾಗಿದೆ. ವಿಶೇಷ ಭತ್ತೆಗೆ ಮನವಿ ಸಲ್ಲಿಸದಿದ್ದರೂ ಸರಕಾರ ತಾನಾಗಿಯೇ ನೀಡಿ ಈಗ ವಸೂಲಿಗೆ ಮುಂದಾಗಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.

Advertisement

ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 2008, ಆ. 1ರ ಅನಂತರ ನೇಮಕಗೊಂಡ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸರಕಾರ ಇದುವರೆಗೆ ನೀಡಿದ ವಿಶೇಷ ಭತ್ತೆಗೆ ಮಹಾಲೇಖಪಾಲರ ವರದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಇದುವರೆಗೆ ನೀಡಿದ ವಿಶೇಷ ಭತ್ತೆ ಅಂದಾಜು 8.33ಕೋಟಿ ರೂ. ವಸೂಲಿಗೆ ಸರಕಾರಕ್ಕೆ ಸೂಚಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಡಿಡಿಪಿಐ ಹಾಗೂ ಬಿಇಒಗಳಿಗೆ ಶಿಕ್ಷಕರಿಂದ ವಿಶೇಷ ಭತ್ತೆಯಾಗಿ ನೀಡಿದ ಹಣ ವಸೂಲಿ ಮತ್ತು ನವೆಂಬರ್‌ನಿಂದ ವಿಶೇಷ ಭತ್ತೆ ತಡೆಗೆ ಸೂಚಿಸಿದೆ.

ಆಗಿದ್ದೇನು?: ಈ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಬೇರೆ ರಾಜ್ಯಗಳಿಗೆ ಹೋಲಿಸಿದರೆ ವೇತನ ಕಡಿಮೆ ಇದ್ದು, 5ನೇ ವೇತನ ಆಯೋಗದಲ್ಲಿ ಇದನ್ನು ಸರಿ ಪಡಿಸಬೇಕು ಅಲ್ಲಿವರೆಗೆ ತಮಗೆ ವಿಶೇಷ ಭತ್ತೆ ನೀಡಬೇಕೆಂದು ಮನವಿ ಸಲ್ಲಿಸಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2006ರ ಮಾರ್ಚ್‌ನಿಂದ 200 ರೂ. ವಿಶೇಷ ಭತ್ತೆ ಯನ್ನು ಸರಕಾರ ಜಾರಿಗೊಳಿಸಿತ್ತು. ಅದೇ ವರ್ಷದ ಮೇ 12ರಿಂದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೂ ಈ ಸೌಲಭ್ಯ ವಿಸ್ತರಿಸಲಾಗಿತ್ತು. ಮುಂದೆ ರಾಜ್ಯ ಸರಕಾರ 2012ರ ಮೇಯಲ್ಲಿ ವಿಶೇಷ ಭತ್ತೆಯನ್ನು ವರ್ಧಿಸಿ ಪ್ರಾಥಮಿಕ ಶಾಲೆ ಶಿಕ್ಷಕರಿಗೆ 300 ರೂ., ಪ್ರೌಢಶಾಲೆ ಶಿಕ್ಷಕರಿಗೆ 400 ರೂ., ಪಿಯು ಉಪನ್ಯಾಸಕರಿಗೆ 500 ರೂ. ಎಂದು ನಿಗದಿಪಡಿಸಿತ್ತು. ಆದರೆ, ರಾಜ್ಯ ಸರಕಾರ 2008, ಆ.29ರಂದು ಆದೇಶ ಹೊರಡಿಸಿ 2008, ಆ.1ರ ಅನಂತರ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ 2014, ಜು. 28ರಂದು ಆದೇಶ ಹೊರಡಿಸಿ 2008, ಆ. 1ರ ಅನಂತರದಲ್ಲಿ ನೇಮಕಗೊಂಡ ಪ್ರೌಢಶಾಲಾ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರಿಗೆ ವಿಶೇಷ ಭತ್ಯೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು.

12-15 ಸಾವಿರ ರೂ. ವಸೂಲಿ ಸಾಧ್ಯತೆ?
ಮಹಾಲೇಖಪಾಲಕರ ಸೂಚನೆಯಂತೆ 2008, ಆ.1ರಿಂದ ಪ್ರಾಥಮಿಕ ಶಾಲೆಯ ಸುಮಾರು 1,557 ಶಿಕ್ಷಕರಿಗೆ ಅಂದಾಜು 1.27 ಕೋಟಿ ರೂ., ಪ್ರೌಢಶಾಲೆಯಲ್ಲಿ ಸುಮಾರು 3,789 ಶಿಕ್ಷಕರಿಗೆ ಅಂದಾಜು 5.12 ಕೋಟಿ ರೂ., ಪದವಿಪೂರ್ವ ಕಾಲೇಜುಗಳಲ್ಲಿ ಸುಮಾರು 1,896 ಉಪನ್ಯಾಸಕರಿಗೆ ಅಂದಾಜು 1.93 ಕೋಟಿ ರೂ. ಸೇರಿದಂತೆ ಒಟ್ಟು 8.33 ಕೋಟಿ ರೂ. ವಿಶೇಷ ಭತ್ತೆ ನೀಡಲಾಗಿದ್ದು, ಶಿಕ್ಷಕರಿಂದ ಇದರ ವಸೂಲಿಗೆ ಆದೇಶಿಸಲಾಗಿದೆ. ಆದೇಶ ಅನುಷ್ಠಾನಗೊಂಡರೆ ಪ್ರತಿಯೊಬ್ಬ ಶಿಕ್ಷಕ ಹಾಗೂ ಉಪನ್ಯಾಸಕ ಕನಿಷ್ಠ 12ರಿಂದ ಗರಿಷ್ಠ 15 ಸಾವಿರ ರೂ.ವರೆಗೆ ಹಣ ಹಿಂದಿರುಗಿಸಬೇಕಾಗುತ್ತದೆ. ತಾನಾಗಿಯೇ ವಿಶೇಷ ಭತ್ತೆ ನೀಡಿರುವ ಸರಕಾರ ಈಗ ವಸೂಲಿಗೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಶಿಕ್ಷಕರ ಪ್ರಶ್ನೆ.

-  ಅಮರೇಗೌಡ ಗೋನವಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next